ಕರ್ನಾಟಕ

ಕನಕಪುರದಲ್ಲಿ 107 ಜೀತದಾಳುಗಳ ಬಂಧಮುಕ್ತಿ: ನಾಲ್ವರ ಬಂಧನ

Pinterest LinkedIn Tumblr

banda

ಬೆಂಗಳೂರು: ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿರುವ ಅಗರಬತ್ತಿ ಕಾರ್ಖಾನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ  107 ಜನರನ್ನು ಕಂದಾಯ ಇಲಾಖೆಯು ಸ್ಥಳೀಯ ಪೊಲೀಸರ ಜೊತೆ ಸೇರಿ ರಕ್ಷಣೆ ಮಾಡಿದೆ. ಈ ಕಾರ್ಮಿಕರನ್ನು ಪಶ್ಚಿಮ ಬಂಗಾಳ (43), ಅಸ್ಸಾಂ (40) ಮತ್ತು ಜಾರ್ಖಂಡ್ (22) ಮತ್ತು ನೇಪಾಳ (2)ಗಳಿಂದ ಕರೆತಂದು ಅಮಾನವೀಯವಾಗಿ ದುಡಿಸಿಕೊಳ್ಳಲಾಗಿತ್ತು.

ಈ ಕಾರ್ಮಿಕರನ್ನು ಕಾರ್ಖಾನೆಯೊಳಗೇ ಬಂಧಿಸಿಟ್ಟು ಹೊರಕ್ಕೆ ಹೋಗಲು ಅವಕಾಶ ನೀಡದೇ ವೇತನವನ್ನು ಕೂಡ ನೀಡದೇ ಶೋಷಣೆ ಮಾಡಿದ್ದರು. ಇದರ ಜೊತೆಗೆ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 2 ಗಂಟೆವರೆಗೆ ವಾರಕ್ಕೆ 7 ದಿನಗಳೂ ದುಡಿಯುವಂತೆ ಬಲಪ್ರಯೋಗ ಮಾಡಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯ ಮಾಲೀಕ, ಅಸ್ಸಾಂನಿಂದ ಕಾರ್ಮಿಕರನ್ನು ಕರೆತಂದವನು ಮತ್ತು ಇಬ್ಬರು ಮೇಲ್ವಿಚಾರಕರನ್ನು ಮಾನವ ಕಳ್ಳಸಾಗಣೆ ಆರೋಪದ ಮೇಲೆ  ಬಂಧಿಸಲಾಗಿದೆ.  ಇನ್ನೂ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.  ಮೇ 29ರಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಫೈಲ್ ಮಾಡಿದ್ದು, ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅನೇಕ ಮಾನವ ಕಳ್ಳಸಾಗಣೆದಾರರು ಈ ಕಾರ್ಮಿಕರಿಗೆ 7000ದಿಂದ 9000 ರೂ. ಸಂಬಳ ನೀಡುವ, ಊಟ, ವಸತಿ ಮತ್ತು ದಿನಕ್ಕೆ ಒಂದು ದಿನ ರಜೆ ಸೌಲಭ್ಯದ ಆಮಿಷವೊಡ್ಡಿ ಬೆಂಗಳೂರಿಗೆ ಕರೆತಂದಿದ್ದರು. ಆದರೆ ಇಲ್ಲಿಗೆ ಬಂದ ಮೇಲೆ ಈ ಭರವಸೆಗಳೆಲ್ಲಾ ಟೊಳ್ಳಾಗಿತ್ತು. ಕಾರ್ಮಿಕರಿಗೆ ವೇತನವನ್ನೂ ನೀಡದೇ ಕೊಳಕಾದ ಕೋಣೆಯೊಂದರಲ್ಲಿ ಮಲಗುವಂತೆ ಮಾಡಿದ್ದರು ಮತ್ತು  ಕೇವಲ ಒಂದು ಟಾಯ್ಲೆಟ್ ಹಂಚಿಕೊಂಡಿದ್ದರು.

ಜೈಲಿನ ಕೈದಿಗಳಿಗಿಂತ ಕೆಟ್ಟ ಸ್ಥಿತಿಯಲ್ಲಿ ನಾವಿದ್ದೆವು ಎಂದು 21 ವರ್ಷದ ಅಸ್ಸಾಂ ಕಾರ್ಮಿಕನೊಬ್ಬ ತೋಡಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಬಂಧಿತರಾದ ಕಾರ್ಖಾನೆ ಮಾಲೀಕ, ಮೇಲ್ವಿಚಾರಕರ ತನಿಖೆಯನ್ನು ಪೊಲೀಸರು ನಡೆಸಿದ್ದಾರೆ.

ಮಾಲೀಕ ಮತ್ತು ಮೇಲ್ವಿಚಾರಕರು ತಮ್ಮ ಮೇಲೆ  ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಅಮಾನವೀಯ ಸ್ಥಿತಿಯಲ್ಲಿ ಕೆಲಸ ಮಾಡಿಸಿದ್ದಾರೆ. ಯಾವುದೇ ಸುರಕ್ಷೆ ಇಲ್ಲದೇ ಅಪಾಯಕಾರಿ ರಾಸಾಯನಿಕಗಳನ್ನು ನಾವು ಮುಟ್ಟುತ್ತಿದ್ದೆವು ಎಂದು ಅನೇಕ ಕಾರ್ಮಿಕರು ದೂರಿದ್ದಾರೆ.

ಕಾರ್ಮಿಕರು  ಕಾರ್ಖಾನೆ ಹೊರಗೆ ಹೋಗದಂತೆ ನಿಷೇಧಿಸಲಾಗಿತ್ತು. ಕಾಯಿಲೆ ಬಿದ್ದಾಗಲೂ ಕೂಡ ಔಷಧಿಗಳನ್ನು ಮಾಲೀಕರೇ ತಂದುಕೊಡುತ್ತಿದ್ದರು. ಕಾರ್ಖಾನೆ ಬಿಟ್ಟು ಹೊರಗೆ ಹೋಗುವ ಹಾಗಿಲ್ಲವಾದ್ದರಿಂದ ತಾವು ಪರಸ್ಪರ ಕ್ಷೌರ ಮಾಡಿಕೊಳ್ಳುತ್ತಿದ್ದುದಾಗಿ ಕಾರ್ಮಿಕರು ಹೇಳಿದ್ದಾರೆ.  ಹಗಲಿನಲ್ಲಿ ಕಾವಲು ಸಿಬ್ಬಂದಿಯಿದ್ದರೆ ರಾತ್ರಿಯಲ್ಲಿ ಎರಡು ನಾಯಿಗಳನ್ನು ಹೊರಗೆ ಬಿಟ್ಟು ಕಾರ್ಮಿಕರು ತಪ್ಪಿಸಿಕೊಳ್ಳದಂತೆ ನೋಡಲಾಗಿತ್ತು.

ತಿರುಪತ್ತೂರಿನ ಜಿಲ್ಲಾಡಳಿತ ಮತ್ತು ಪೊಲೀಸರು ಮತ್ತು ಇಂಟರ್ ನ್ಯಾಷನಲ್  ಜಸ್ಟೀಷ್ ಮಿಷನ್ ನೆರವಿನೊಂದಿಗೆ ಈ ಕಾರ್ಖಾನೆಯನ್ನು ಪತ್ತೆ ಹಚ್ಚಿ ಒಳಪ್ರವೇಶಿಸಿದಾಗ ನಿರ್ಜನವಾಗಿತ್ತು. ಆದರೆ ಫ್ಯಾನ್ ತಿರುಗುತ್ತಿದ್ದು, ದೊಡ್ಡ ಮಡಕೆಗಳಲ್ಲಿ ಬಿಸಿಯಾದ ಆಹಾರವಿತ್ತು. ಅಧಿಕಾರಿಗಳು ಮತ್ತಷ್ಟು ಶೋಧಿಸಿದಾಗ, ಕತ್ತಲೆಯ ನೆಲಮಾಳಿಗೆಯಲ್ಲಿ 48 ಕಾರ್ಮಿಕರನ್ನು ಅಡಗಿಸಿಡಲಾಗಿತ್ತು.

Write A Comment