ಕರ್ನಾಟಕ

ಲಾಟರಿ ಅಕ್ರಮ ಗೊತ್ತಾಗಿದ್ದು ಹೀಗೆ: ಪಾಲು ಸಿಗದ ಕಾನ್‌ಸ್ಟೆಬಲ್‌ ಅಸಮಾಧಾನವೇ ಕಾರಣ

Pinterest LinkedIn Tumblr

02May15kumaraswamy

ಬೆಂಗಳೂರು: ಲಾಟರಿ ಅಕ್ರಮ ರಾಜ್ಯದಲ್ಲಿ ಬೆಳಕಿಗೆ ಬಂದ ಕತೆಯನ್ನು ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಅದು ಹೀಗಿದೆ: ‘ಕೋಲಾರ ಜಿಲ್ಲೆಯಲ್ಲಿ ಮಂಜುನಾಥ್‌ ಎಂಬ ಕಾನ್‌ಸ್ಟೆಬಲ್‌ ಇದ್ದಾರೆ. ಇವರಿಗೂ ರಾಜನ್‌ಗೂ ಸಂಬಂಧ ಇತ್ತು. ಮಂಜುನಾಥ್‌ಗೆ ಹಣ ಬೇಕಾದಾಗ ರಾಜನ್‌ನಿಂದ ಸಿಗುತ್ತಿತ್ತು. ಹಂತ ಹಂತವಾಗಿ ರಾಜನ್‌ಗೆ ಬೆಂಗಳೂರಿನ ದೊಡ್ಡ  ಪೊಲೀಸ್ ಅಧಿಕಾರಿಗಳ ಪರಿಚಯ ಆಯಿತು. ಆಗ ಮಂಜುನಾಥ್‌ಗೆ ರಾಜನ್‌ ಅವಮಾನ ಮಾಡಿದ.’

‘ಆಗ ಮಂಜುನಾಥ್‌ ಅವರು ಲಾಟರಿ ನಿಷೇಧ ದಳದ ಮುಖ್ಯ ಕಾನ್‌ಸ್ಟೆಬಲ್‌ ಸಿಂಗ್‌ ಮತ್ತು ಇನ್ನೊಬ್ಬ ಕಾನ್‌ಸ್ಟೆಬಲ್‌ ಮಂಜುನಾಥ್‌ಗೆ ಮಾಹಿತಿ ನೀಡಿದರು. ಇದನ್ನು ಸಿಂಗ್‌ ಮತ್ತು ಮಂಜುನಾಥ್‌ ಕೆಜಿಎಫ್‌ ಇನ್‌ಸ್ಪೆಕ್ಟರ್‌ ರಾಮಪ್ಪ ಗುತ್ತೇದಾರ್‌ಗೆ ತಿಳಿಸಿದರು. ಗುತ್ತೇದಾರ್‌ ನೀಡಿದ ಸೂಚನೆ ಆಧರಿಸಿ ಸಿಂಗ್‌ ಮತ್ತು ಮಂಜುನಾಥ್‌, ರಾಜನ್‌ನನ್ನು 2014ರ ಜೂನ್‌–ಜುಲೈನಲ್ಲಿ ಠಾಣೆಗೆ ಕರೆತಂದರು. ವಿಚಾರಣೆ ಆರಂಭಿಸಿದಾಗ ರಾಜನ್‌, ‘ನಿಮಗೆ ಎಷ್ಟು ಹಣ ಬೇಕು ಹೇಳಿ. ಕೊಡಿಸುತ್ತೇನೆ’ ಎಂದ.’

‘ಆಗ ಗುತ್ತೇದಾರ್‌ ಅವರು, ಸಿಂಗ್‌ ಮತ್ತು ಮಂಜುನಾಥ್‌ ಜೊತೆ ರಾಜನ್‌ನನ್ನು ಚೆನ್ನೈಗೆ ಕಳುಹಿಸಿದರು. ಇಬ್ಬರೂ ಅಲ್ಲಿ ಮಾರ್ಟಿನ್‌ನನ್ನು ಭೇಟಿ ಮಾಡಿದರು. ಮಾರ್ಟಿನ್‌ನಿಂದ ಇವರಿಗೆ ₹ 40 ಲಕ್ಷ ದೊರೆಯಿತು. ಈ ಹಣವನ್ನು ಗುತ್ತೇದಾರ್‌ ಮತ್ತು ಲಾಟರಿ ನಿಷೇಧ ದಳದ ದಕ್ಷಿಣ ವಲಯ ಎಸ್‌ಪಿ ಧರಣೇಶ್‌ ಸೇರಿಕೊಂಡು 2014ರಲ್ಲಿ ಜಾಗೃತ ದಳದ ಐಜಿಪಿ ಆಗಿದ್ದ ಅರುಣ್‌ ಚಕ್ರವರ್ತಿ ಹತ್ತಿರ ತಂದರು. ಹಣದಲ್ಲಿ ತಲಾ ₹ 2 ಲಕ್ಷ ಮಂಜುನಾಥ್‌ ಮತ್ತು ಸಿಂಗ್‌ಗೆ ದೊರೆಯಿತು.

ಗುತ್ತೇದಾರ್‌ಗೆ ₹ 5 ಲಕ್ಷ, ಇನ್ನುಳಿದ ₹ 31 ಲಕ್ಷವನ್ನು ಧರಣೇಶ್‌ ಮತ್ತು ಅರುಣ್‌ ಚಕ್ರವರ್ತಿ ಇಟ್ಟುಕೊಂಡರು’.
‘ಚೆನ್ನೈಗೆ ಹೋಗಿ ಹಣ ತಂದವರು ನಾವು. ದೊಡ್ಡ ಮೊತ್ತವನ್ನು ಇವರೇ ಇಟ್ಟುಕೊಂಡರಲ್ಲ ಎಂದು ಸಿಂಗ್‌ ಮತ್ತು ಮಂಜುನಾಥ್‌ಗೆ  ಕೋಪ ಬಂತು. ಇವರಲ್ಲಿ ಒಬ್ಬ ಕಾನ್‌ಸ್ಟೆಬಲ್‌ನನ್ನು ಲಾಟರಿ ದಳದಿಂದ ಪೊಲೀಸ್‌ ಇಲಾಖೆಗೆ ವಾಪಸ್‌ ಕಳುಹಿಸಲಾಯಿತು’.

‘ಬಳಿಕ ದಕ್ಷಿಣ ವಲಯದ ಲಾಟರಿ ಜಾಗೃತ ದಳ ಎಸ್ಪಿ ಸ್ಥಾನಕ್ಕೆ ಬರಲು  ಚಂದ್ರಕಾಂತ್‌ ಯತ್ನಿಸಿದರು. ಚಂದ್ರಕಾಂತ್‌ ಮತ್ತು ಧರಣೇಶ್ ನಡುವಿನ ತಿಕ್ಕಾಟದ ಕಾರಣ ಈ ಹಗರಣ ಬಯಲಿಗೆ ಬಂತು.’

ಜಾರ್ಜ್‌ ಉತ್ತರಿಸಲಿ:  ಲಾಟರಿ ಜಾಗೃತ ದಳದ ದಕ್ಷಿಣ ವಲಯ ಎಸ್‌ಪಿ ಆಗಿದ್ದ ಧರಣೇಶ್‌ ಅವರು ರಾಜನ್‌ ಜೊತೆ ಯಾವ ಮಂತ್ರಿಯನ್ನು ಭೇಟಿ ಮಾಡಿದ್ದರು ಎಂಬುದನ್ನು ಗೃಹ ಸಚಿವ ಕೆ.ಜೆ. ಜಾರ್ಜ್‌ ವಿವರಿಸಬೇಕು ಎಂದು ಆಗ್ರಹಿಸಿದರು.

ಅಗರ್‌ವಾಲ್‌ಗೆ ₹ 60 ಲಕ್ಷ
‘ಈಶಾನ್ಯ ವಲಯ ಐಜಿಪಿ ಸುನೀಲ್‌ ಅಗರ್‌ವಾಲ್‌ ಲಾಟರಿ ಜಾಗೃತ ದಳದ ಐಜಿಪಿ ಆಗಿದ್ದಾಗ ದೆಹಲಿಯಲ್ಲಿ ಒಂದು ಸಮಾವೇಶ ಮುಗಿಸಿ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಮಾರ್ಟಿನ್‌ ಅಲ್ಲಿಗೇ ಹೋಗಿ ಅಗರ್‌ವಾಲ್‌ಗೆ ₹ 60 ಲಕ್ಷ ಸಂದಾಯ ಮಾಡಿದ್ದ’ ಎಂದು ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

Write A Comment