ಕನ್ನಡ ವಾರ್ತೆಗಳು

ಮಂಗಳೂರು ವಿಮಾನ ನಿಲ್ದಾಣದೊಳಗೆ ಅಕ್ರಮ ಪ್ರವೇಶ ಮಾಡಿದ ವ್ಯಕ್ತಿಯ ಸೆರೆ : ಪೊಲೀಸರಿಂದ ತೀವ್ರ ವಿಚಾರಣೆ – ಎಚ್ಚರಿಕೆ ನೀಡಿ ಬಿಡುಗಡೆ

Pinterest LinkedIn Tumblr

Airport_sized_explosiv_6

ಮಂಗಳೂರು, ಮೇ 27: ವಿದೇಶಕ್ಕೆ ತೆರಳಲಿದ್ದ ಸಂಬಂಧಿಕರನ್ನು ಬೀಳ್ಕೊಡಲು ಆಗಮಿಸಿದ್ದ ಯುವ ಕನೋರ್ವನನ್ನು ವಿಮಾನ ನಿಲ್ದಾಣದೊಳಗೆ ಅಕ್ರಮ ಪ್ರವೇಶಗೈದ ಆರೋಪದ ಮೇಲೆ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ಬಜ್ಪೆ ವಿಮಾನ ನಿಲ್ದಾಣ ದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಕೊಣಾಜೆಯ ಬಾಳೆಪುಣಿ ನಿವಾಸಿ ಇಕ್ಬಾಲ್ (23) ಎಂಬಾತ ವಿಮಾನ ನಿಲ್ದಾಣದೊಳಗೆ ಅಕ್ರಮ ಪ್ರವೇಶಗೈದು ಹೊರ ಬರುತ್ತಿದ್ದಾಗ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ದ್ದಾರೆ. ಬಳಿಕ ಆರೋಪಿಯ ಹಿನ್ನೆಲೆ ಹಾಗೂ ಹೆಚ್ಚಿನ ವಿಚಾರಣೆಗಾಗಿ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈತನನ್ನು ವಶಕ್ಕೆ ಪಡೆದ ಬಜ್ಪೆ ಠಾಣಾ ಪೊಲೀಸರು ಬೆಳಗ್ಗೆಯಿಂದ ಸಂಜೆಯ ವರೆಗೆ ವಿಚಾರಣೆಗೊಳಪಡಿಸಿ ಅನಂತರ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇಕ್ಬಾಲ್ ಸಹಿತ ಆತನ ತಂದೆ, ತಾಯಿ ಮತ್ತು ಇತರ ಇಬ್ಬರು ಸಂಬಂಧಿಗಳು ಮಸ್ಕತ್‌ಗೆ ತೆರಳಲು ಇಂದು ಮಂಗಳೂರು-ಮಸ್ಕತ್ ಟಿಕೆಟ್‌ಗಳನ್ನು ಕಾಯ್ದಿ ರಿಸಿದ್ದರು. ಕೊನೆ ಕ್ಷಣದಲ್ಲಿ ಇಕ್ಬಾಲ್‌ನ ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಆತ ತನ್ನ ಟಿಕೆಟ್‌ನ್ನು ರದ್ದುಗೊಳಿಸಿ ಮುಂದಿನ ತಿಂಗಳ 6ನೆ ತಾರೀಕಿಗೆ ಬುಕ್ ಮಾಡಿದ್ದ. ಆದರೆ ಇಕ್ಬಾಲ್ ತಂದೆ ತಾಯಿ ಮತ್ತು ಇಬ್ಬರು ಸಂಬಂಧಿಕರ ಟಿಕೆಟ್‌ಗಳನ್ನು ರದ್ದುಗೊಳಿಸದೆ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದ.

ನಾಲ್ವರು ಟಿಕೆಟ್ ತೋರಿಸಿ ಒಳಗೆ ಪ್ರವೇಶಿಸಿದರೆ, ಇಕ್ಬಾಲ್ ರದ್ದುಗೊಳಿಸಿದ್ದ ಟಿಕೆಟ್‌ನ್ನು ಸಿಬ್ಬಂದಿಗೆ ತೋರಿಸಿ ಪ್ರವೇಶ ಪಡೆದಿದ್ದ. ಇಕ್ಬಾಲ್ ಸಂಬಂಧಿಕರನ್ನು ಒಳಗೆ ಬಿಟ್ಟು ಹೊರಬರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಈತ ವಿಮಾನದಲ್ಲಿ ತೆರಳದೇ ಇದ್ದುದನ್ನು ಗಮನಿಸಿ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಿಸಿದಾಗ ಈತನಲ್ಲಿ ಉತ್ತರ ಇರಲಿಲ್ಲ. ಕೂಡಲೇ ಭದ್ರತಾ ಸಿಬ್ಬಂದಿ ಈತನನ್ನು ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪೊಲೀಸರಿಂದ ತೀವ್ರ ವಿಚಾರಣೆ

ಇಕ್ಬಾಲ್‌ನನ್ನು ಬೆಳಗ್ಗೆ ವಶಕ್ಕೆ ಪಡೆದ ಬಜ್ಪೆ ಠಾಣಾ ಪೊಲೀಸರು ಸಂಜೆಯವರೆಗೆ ವಿಚಾರಣೆಗೆ ನಡೆಸಿದ್ದಾರೆ. ಈತನ ಬಗ್ಗೆ ಮಾಹಿತಿ ಕಲೆ ಹಾಕಿದ ಬಳಿಕ ಬಿಡುಗಡೆಗೊಳಿಸಿದ್ದಾರೆ.

‘‘ಏರ್‌ಪೋರ್ಟ್ ಒಳಗೆ ಅಕ್ರಮ ಪ್ರವೇಶಗೈದ ಇಕ್ಬಾಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಮಕ್ಕಳು ಹಾಗೂ ಮಹಿಳೆಯರು ಮತ್ತು ಲಗ್ಗೇಜ್ ಹೆಚ್ಚಿರುವುದರಿಂದ ಏರ್‌ಪೋರ್ಟ್ ಒಳಗೆ ಹೋಗಿರುವುದಾಗಿ ತಿಳಿಸಿದ್ದಾನೆ. ಆದರೆ, ಕಾರಣ ಏನಿದ್ದರೂ ಅಕ್ರಮವಾಗಿ ಪ್ರವೇಶ ಮಾಡುವಂತಿಲ್ಲ. ಆತನ ಹಿನ್ನೆಲೆಯನ್ನು ಪರಿಶೀಲಿಸಲಾಗಿದ್ದು, ಯಾವುದೇ ಕ್ರಿಮಿನಲ್ ಹಿನ್ನೆಲೆ ಹಾಗೂ ದುರುದ್ದೇಶ ಇಲ್ಲದಿರುವುದರಿಂದ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದೇವೆ’’ ಎಂದು ಬಜ್ಪೆ ಠಾಣಾ ಎಸ್ಸೈ ರಮೇಶ್ ಹಾನಾಪುರ ತಿಳಿಸಿದ್ದಾರೆ.

ಪುನರಾವರ್ತನೆಯಾದರೆ ಕಾನೂನು ಕ್ರಮ: ಜಿ.ಟಿ.ರಾಧಾಕೃಷ್ಣ ಎಚ್ಚರಿಕೆ

ವಿಮಾನ ನಿಲ್ದಾಣದೊಳಗೆ ಅಕ್ರಮವಾಗಿ ಯಾರೂ ಪ್ರವೇಶ ಮಾಡುವಂತಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ನಿಲ್ದಾಣದಲ್ಲಿ ಸೂಕ್ತ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಸಾರ್ವಜನಿಕರು ನಿಯಮವನ್ನು ಉಲ್ಲಂಘಿಸುವಂತಿಲ್ಲ. ಈ ರೀತಿಯ ಘಟನೆಗಳು ಪುನರಾವರ್ತನೆಯಾದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಜಿ.ಟಿ.ರಾಧಾಕೃಷ್ಣ ಎಚ್ಚರಿಕೆ ನೀಡಿದ್ದಾರೆ.

Write A Comment