ಕರ್ನಾಟಕ

ಒಂದಂಕಿ ಲಾಟರಿ ಹಗರಣ : ಅಲೋಕ್‌ಕುಮಾರ್‌ ಬಂಧನ ..?

Pinterest LinkedIn Tumblr

Alok-kumar

ಬೆಂಗಳೂರು,ಮೇ 25: ಕರ್ನಾಟಕ ರಾಜ್ಯವನ್ನು ಬೆಚ್ಚಿಬೀಳಿಸಿ ರುವ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿರುವ ಬಹುಕೋಟಿ ಒಂದಂಕಿ ಲಾಟರಿ ಹಗರಣದಲ್ಲಿ ಅಮಾನತ್ತಾಗಿ ಸಿಐಡಿ ವಿಚಾರಣೆ ಎದುರಿಸುತ್ತಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್‌ರವರನ್ನು ಬಂಧಿಸಬೇಕೆ? ಬೇಡವೇ ಎಂಬ ಬಗ್ಗೆ ವಿಮರ್ಶೆ ನಡೆಸಲಾಗುತ್ತದೆ.

ಎರಡು ದಿನಗಳ ಹಿಂದೆ ಒಂದಂಕಿ ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಅಲೋಕ್‌ಕುಮಾರ್ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ನಿನ್ನೆ ಸಿಐಡಿ ಅಧಿಕಾರಿಗಳು ನೋಟೀಸ್ ನೀಡಿ ಅವರನ್ನು ಸುಮಾರು 9 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದರು. ಅವರು ನೀಡಿದ್ದ ಹೇಳಿಕೆ ಆಧಾರದ ಮೇಲೆ ಅವರನ್ನು ಬಂಧಿಸಬೇಕೆ? ಬೇಡವೇ? ಎಂಬ ಬಗ್ಗೆ ಸಿಐಡಿ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಬಂಧಿಸುವ ಅಗತ್ಯವಿದೆಯೇ ಅಥವಾ ಬಂಧಿಸದೆಯೇ ವಿಚಾರಣೆ ನಡೆಸಬಹುದೇ ಎಂಬ ಬಗ್ಗೆ ಸಿಐಡಿ ಅಧಿಕಾರಿಗಳು ಇಂದು ಮಹತ್ವದ ಚರ್ಚೆ ನಡೆಸಿದ್ದು , ಈವರೆಗೆ ಇನ್ನು ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

ಅಲೋಕ್ ಕುಮಾರ್ ವಿಚಾರಣೆ ಮುಂದುವರಿಕೆ
ಬಹುಕೋಟಿ ಒಂದಂಕಿ ಲಾಟರಿ ಹಗರಣದಲ್ಲಿ ಶಾಮೀಲಾಗಿ ಅಮಾನತ್ತಾಗಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಇಂದು ಕೂಡ ತೀವ್ರ ವಿಚಾರಣೆಗೆ ಒಳಪಡಿಸಿದರು. ಒಂದಂಕಿ ಲಾಟರಿ ಕಿಂಗ್‌ಪಿನ್ ಪಾರಿರಾಜನ್ ಜೊತೆ ನಂಟು ಹೊಂದಿರುವ ಸಂಬಂಧ ಕುರಿತು ನಿನ್ನೆ ಅಲೋಕ್ ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಸುಮಾರು 9 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಹೇಳಿಕೆಗಳನ್ನು ಪಡೆದಿದ್ದರು. ವಿಚಾರಣೆ ವೇಳೆ ದಾಖಲಾದ ಹೇಳಿಕೆಗಳ ಕುರಿತು ಇಂದು ಅಧಿಕಾರಿಗಳು ಅಲೋಕ್‌ಕುಮಾರ್ ಅವರಿಂದ ಸಹಿ ಪಡೆಯಲಿದ್ದಾರೆ. ಇಂದು ಖಾಸಗಿ ಕಾರಿನಲ್ಲಿ ಸಿಐಡಿ ಕಚೇರಿಗೆ ಆಗಮಿಸಿದ ಅಲೋಕ್ ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಾರೆ.

ಎಲ್ಲ ಪ್ರಶ್ನೆಗಳಿಗೂ ಅಲೋಕ್ ಕುಮಾರ್ ಅವರು ಸಮಾಧಾನಚಿತ್ತರಾಗಿಯೇ ಉತ್ತರಿಸಿದ್ದಾರೆ ಎಂದು ತಿಳಿದುಬಂದಿದ್ದು, ವಿಚಾರಣೆ ಮುಂದುವರೆದಿದೆ. ಪಾರಿರಾಜನ್ ಪರಿಚಯವಾದದ್ದು ಹೇಗೆ? ಯಾರ ಮೂಲಕ ಪರಿಚಯವಾಯಿತು? ಪಾರಿರಾಜನ್ ಯಾವ ಯಾವ ಅಧಿಕಾರಿಗಳ ಜೊತೆ ಸಂಬಂಧ ಬೆಳೆಸಿಕೊಂಡಿದ್ದಾನೆ? ಆತ ಇತರೆ ಅಧಿಕಾರಿಗಳ ಬಗ್ಗೆ ಹೇಳಿರುವ ಸಂಗತಿಗಳೇನು? ಆತನನ್ನು ಬಂಧಿಸಲು ಮುಂದಾಗಿದ್ದ ಕೆಜಿಎಫ್ ಸಬ್‌ಇನ್‌ಸ್ಪೆಕ್ಟರ್ ಪ್ರತಾಪ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಲು ಕಾರಣವೇನು? ಪ್ರತಾಪ್ ಅವರ ಮೇಲಧಿಕಾರಿ ಅಲ್ಲದಿದ್ದರೂ ಅವರನ್ನು ಕರ್ತವ್ಯದಿಂದ ನಿರ್ಬಂಧಿಸಲು ಕಾರಣವೇನು ಎಂಬ ಪ್ರಶ್ನೆಗಳ ಸುರಿಮಳೆಯನ್ನು ಸಿಐಡಿ ಅಧಿಕಾರಿಗಳು ಕೇಳಿದ್ದರು. ಇಂದು ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿ ಅಲೋಕ್ ಕುಮಾರ್ ಅವರಿಂದ ಉತ್ತರಗಳನ್ನು ಪಡೆದು ದಾಖಲಾದ ಹೇಳಿಕೆಗೆ ಅವರ ಅಧಿಕೃತ ಸಹಿ ಪಡೆಯಲಿದ್ದಾರೆ.

Write A Comment