ಕರ್ನಾಟಕ

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಮೇಲಿವೆ ರಾಶಿ ರಾಶಿ ಮನುಷ್ಯರ ಮೂಳೆಗಳು..!

Pinterest LinkedIn Tumblr

kims

ಹುಬ್ಬಳ್ಳಿ, ಮೇ 25: ಎಲ್ಲೋ ಒಂದು ಮೂಳೆ ಚೂರು ಕಂಡರೆ ಏನೂ ಅನ್ನಿಸದಿರಬಹುದು. ಆದರೆ, ಒಂದೇ ಕಡೆ ರಾಶಿ ರಾಶಿ ಮೂಳೆಗಳು, ಅದರಲ್ಲೂ ಮಾನವ ಮೂಳೆಗಳನ್ನು ನೋಡಿದರೆ ಎಂತಹವರಿಗೂ ಮೈ ಜುಂ ಎಂದು ಮನದಲ್ಲಿ ಭೀತಿ ಆವರಿಸದಿದ್ದೀತೆ..? ಇನ್ನು ಆಸ್ಪತ್ರೆಗಳ ಬಳಿ ಹೀಗೆ ಎಲುಬಿನ ರಾಶಿ ನೋಡಿಬಿಟ್ಟರೆ ಗಂಡೆದೆಯವನ ಗುಂಡಿಗೆಯೂ ನಡುಗಲೇ ಬೇಕು.

ಈಗ ಹುಬ್ಬಳ್ಳಿಯ ಪ್ರತಿಷ್ಠಿತ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ಯಲ್ಲಿ ಆಗಿದ್ದೂ ಇದೇ. ಕಿಮ್ಸ್‌ಗೆ ಅನೇಕರು ತಮ್ಮ ಮರಣಾನಂತರ ದೇಹಗಳನ್ನು ದಾನ ಮಾಡಿರುತ್ತಾರೆ. ಹೀಗೆ ದಾನವಾಗಿ ಬಂದ ಹಾಗೂ ಅನಾಥ ಶವಗಳಿಂದ ತೆಗೆಯಲಾದ ಮೂಟೆಗಟ್ಟಲೆ ಮೂಳೆಗಳನ್ನು ಆಸ್ಪತ್ರೆಯ ಅನಾಟಮಿ ವಿಭಾಗದ ಮಾಳಿಗೆ ಮೇಲೆ ಆಸ್ಪತ್ರೆಯ ಇತರ ತ್ಯಾಜ್ಯಗಳ ಜತೆ ಬೇಕಾಬಿಟ್ಟಿಯಾಗಿ ಬಿಸಾಡಲಾಗಿರುವುದು ಸಾರ್ವಜನಿಕರಲ್ಲಿ ಆತಂಕ, ಭಯ ಮೂಡಿಸುವುದರ ಜತೆಗೆ, ದೇಹದಾನ ಮಾಡುವವರಿಗೆ ಮತ್ತು ಅನಾಥರಿಗೆ ಈ ರೀತಿ ಅವಮಾನ ಮಾಡುವುದು ಮಹಾಪರಾಧ ಎಂದು ಸಿಟ್ಟನ್ನೂ ತರಿಸಿದೆ.

ಹುಬ್ಬಳ್ಳಿಯ ಅನೇಕ ನಾಗರಿಕರು ಆಸ್ಪತ್ರೆಯ ಈ ಬೇಜವಾಬ್ದಾರಿತನಕ್ಕೆ ತೀವ್ರ ಬೇಸರ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಸಾವಿನ ಭೀತಿಯಲ್ಲೇ ಆಸ್ಪತ್ರೆಗೆ ಬರುವ ಅನೇಕ ರೋಗಿಗಳು ಇಲ್ಲಿನ ಈ ದೃಶ್ಯ ಕಂಡರೆ ಅವರು ಎದೆಯೊಡೆದು ಹೋಗದೆ ಇರುತ್ತಾರೆಯೇ ಎಂಬುದು ಹಲವರ ಪ್ರಶ್ನೆಯಾಗಿದೆ. ಈ ಮಧ್ಯೆ ಇದು ಉನ್ನತ ಮಟ್ಟದಲ್ಲಿಯೂ ಚರ್ಚೆಯಾಗಿದ್ದು, ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಎಚ್ಚೆತ್ತ ಕಿಮ್ಸ್ ಮುಖ್ಯಸ್ಥರು ಶರೀರ ರಚನಾ ವಿಜ್ಞಾನ ವಿಭಾಗದ ಮುಖ್ಯ ವೈದ್ಯರಿಗೆ ನೋಟಿಸ್ ನೀಡಿ ವಿವರಣೆ ಕೇಳಿದ್ದಾರೆ. ನೋಟಿಸ್‌ಗೆ ಉತ್ತರಿಸಿರುವ ವೈದ್ಯರು, ಅಧ್ಯಯನಕ್ಕೆ ಬಳಸುವ ಮೂಳೆಗಳನ್ನು ಒಣಗಿಸುವುದಕ್ಕಾಗಿ ಈ ರೀತಿ ಹಾಕಲಾಗಿದೆ ಎಂಬರ್ಥ ಬರುವಂತೆ ಹೇಳಿದ್ದಾರೆ.

ಅದೇನೇ ಇರಲಿ, ತಮ್ಮ ಅಧ್ಯಯನದ ಬಳಕೆಗೆ ಒಣಗಿಸುವ ಮೂಳೆಗಳಾದರೂ, ಅದಕ್ಕೊಂದು ವ್ಯವಸ್ಥಿತ ರೀತಿ ಇರಬೇಕಾಗುತ್ತದೆ. ಹೀಗೆ ಆಸ್ಪತ್ರೆಯ ಅಸಹ್ಯ ಮತ್ತು ನಾರೋಗ್ಯಕರ ತ್ಯಾಜ್ಯಗಳ ಜತೆಗೆ ಅಧ್ಯಯನಕ್ಕೆ ಬಳಸಬೇಕಾದ ಮಾನವ ಮೂಳೆಗಳನ್ನು ಬೇಕಾಬಿಟ್ಟಿಯಾಗಿ ಎಸೆಯಬಹುದೇ ಎಂಬುದು ಜನತೆಯ ಆಕ್ಷೇಪದ ಪ್ರಶ್ನೆಯಾಗಿದೆ. ಜನರ ಈ ಪ್ರಶ್ನೆಗಳಿಗೆ ಉತ್ತರಿಸುವುದು, ಆಗಿರುವ ಎಡವಟ್ಟನ್ನು ಸರಿಪಡಿಸುವುದು ಈಗ ಕಿಮ್ಸ್ ನಿರ್ದೇಶಕರ ಹೊಣೆಯಾಗಿದೆ. ಮತ್ತೆ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

Write A Comment