ಕರ್ನಾಟಕ

ಅಕ್ರಮ ಲಾಟರಿ ದಂಧೆ : ಸರ್ಕಾರದ ವಜಾಕ್ಕೆ HDK ಆಗ್ರಹ : ಸಿಬಿಐಗೆ ವಹಿಸಲು AAP ಒತ್ತಾಯ

Pinterest LinkedIn Tumblr

10hdk

ಬೆಂಗಳೂರು, ಮೇ 23: ಅಕ್ರಮ ಲಾಟರಿ ಹಗರಣ ರಾಜ್ಯದ ಅತ್ಯಂತ ದೊಡ್ಡ ಹಗರಣವಾಗಿದ್ದು, ಈ ರಾಜ್ಯ ಸರ್ಕಾರವನ್ನು ಕೂಡಲೇ ರಾಜ್ಯಪಾಲರು ವಜಾ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡಾಫೆಯಿಂದ ಮಾತನಾಡುವ ಗೃಹಸಚಿವ ಕೆ.ಜೆ.ಜಾರ್ಜ್ ಅವರು ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದು, ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಶಂಕರ್ ಬಿದರಿ ಅವರು ರಾಜ್ಯದ ಪೊಲೀಸ್ ಆಯುಕ್ತರಾಗಿದ್ದಾಗ ತೋಡಿದ ಖೆಡ್ಡಾದಲ್ಲಿ ಈಗ ಪೊಲೀಸ್ ಅಧಿಕಾರಿಗಳೇ ಬಿದ್ದಿದ್ದಾರೆ ಎಂದು ಕುಮಾರಸ್ವಾಮಿ ಖಂಡಿಸಿದರು.

ಅಕ್ರಮ ಎಸಗಿದ್ದರೂ ಕೂಡ ತಮ್ಮ ಸಂಬಂಧಿಕ ಮತ್ತು ತಾವೇ ಕೆಲಸ ಕೊಡಿಸಿದ್ದ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಂದ್ರಕಾಂತ್ ಎಂಬ ಅಧಿಕಾರಿಯನ್ನು ಅಮಾನತು ಮಾಡಿಲ್ಲ. ಆದರೆ ಧರಣೀಶ್ ಎಂಬ ದಲಿತ ಅಧಿಕಾರಿಯನ್ನು ವಜಾ ಮಾಡಿದ್ದಾರೆ. ಅಹಿಂದ ಹೆಸರು ಹೇಳಿಕೊಂಡು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ದಲಿತರಿಗೆ ಈ ರೀತಿ ಅನ್ಯಾಯ ಮಾಡಬಾರದಿತ್ತು ಎಂದು ವಿಷಾದಿಸಿದರು.

ಹಿಂದೆ ಕೆಪಿಎಸ್‌ಸಿ ಮೂಲಕ 362 ಮಂದಿ ಆಯ್ಕೆಯಾಗಿದ್ದರು. ಆದರೆ ಈ ಆಯ್ಕೆ ಅಕ್ರಮ ಎಂದು ಸಿಐಡಿ ವರದಿ ತರಿಸಿ ನೇಮಕಾತಿಯನ್ನು ರದ್ದುಗೊಳಿಸಲಾಗಿತ್ತು. ಅದೇ ರೀತಿ ಇಂದು ಈ ಸರ್ಕಾರವೂ ಕೂಡ ವಜಾ ಗೊಳಿಸಲು ಅರ್ಹವಾಗಿದೆ ಎಂದರು. ಹಗರಣ ಮುಕ್ತ ಆಡಳಿತ ಎಂದು ಹೇಳಿಕೊಂಡು ದಿನಕ್ಕೊಂದು ಹಗರಣ ನಡೆಸಿಕೊಂಡು ಬರುತ್ತಲೇ ಇದ್ದಾರೆ. ಒಂದೂವರೆ ವರ್ಷಗಳ ಹಿಂದೆಯೇ ಈ ಲಾಟರಿ ಅಕ್ರಮ ದಂಧೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದೆವು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಸಚಿವ ಕೆ.ಜೆ.ಜಾರ್ಜ್ ಅವರು, ಈ ಕುಮಾರಸ್ವಾಮಿಗೆ ಮಾಡಲು ಬೇರೆ ಕೆಲಸ ಇಲ್ಲ ಎಂದಿದ್ದರು. ಈಗ ಏನು ಹೇಳುತ್ತಾರೆ. ಸರ್ಕಾರ ಕೂಡಲೇ ಲಾಟರಿ ದಂಧೆಯನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಎಲ್ಲ ವಿಭಾಗಗಳಲ್ಲೂ ವಿಫಲರಾಗಿರುವ ಕೆ.ಜೆ.ಜಾರ್ಜ್ ಅಧಿಕಾರದಲ್ಲಿ ಮುಂದುವರೆಯುವ ಯಾವ ಅರ್ಹತೆಯನ್ನು ಹೊಂದಿಲ್ಲ. ಅವರು ತಕ್ಷಣ ತಮ್ಮ ಸ್ಥಾನವನ್ನು ತ್ಯಜಿಸಬೇಕು ಎಂದು ಅವರು ಹೇಳಿದರು. ಹಿಂದೆ ಮೈಸೂರಿನಲ್ಲಿ ಲಾಟರಿ ದಂಧೆಗೆ ಸಂಬಂಧಿಸಿದಂತೆ ಎರಡು ಕೋಟಿ ರೂ.ಗಳನ್ನು ಸಾಗಿಸುವಾಗ ರೇಡ್ ಮಾಡಲಾಗಿತ್ತು. ಅದರಲ್ಲಿ 70-80 ಲಕ್ಷದಷ್ಟು ಹಣ ಪಡೆದಿದ್ದ ಅಧಿಕಾರಿಗಳನ್ನು ಏನೂ ಮಾಡಲಿಲ್ಲ. ಈ ಸರ್ಕಾರ ಲಾಟರಿ ಮಟ್ಕಾ ಸರ್ಕಾರವಾಗಿದೆ. ಈ ಲಾಟರಿ ದಂಧೆ ಹಣ ಹಂಚಿಕೆ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ ಈ ಅಕ್ರಮ ಬೆಳಕಿಗೆ ಬಂತು. ಇಲ್ಲ ಅಂದಿದ್ದರೆ ಇದು ಬೆಳಕಿಗೆ ಬರುತ್ತಿರಲಿಲ್ಲ ಎಂದು ತಿಳಿಸಿದರು.

ಅಪರಾಧಿಗಳ ಜೊತೆ ಶಾಮೀಲಾಗಿರುವ ಎಲ್ಲ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಅಮಾನತು ಮಾಡಬೇಕು. ಬಡವರ ಹಿತದೃಷ್ಟಿಯಿಂದ ಲಾಟರಿ ರದ್ದು ಮಾಡಲಾಗಿತ್ತು. ಆದರೆ ಕುಮಾರಸ್ವಾಮಿಯವರು ಈ ದಂಧೆಗಳಲ್ಲಿ ಹಣ ವಸೂಲಿ ಮಾಡುತ್ತಾರೆ ಎಂದಿದ್ದರು. ಆದರೆ ಹಣ ವಸೂಲಿ ನಿಮ್ಮ(ಕಾಂಗ್ರೆಸ್) ಸಂಸ್ಕೃತಿಯೇ ಹೊರತು ನಮ್ಮದಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಪಿಯುಸಿ ಗೊಂದಲ: ಇಲ್ಲಿ ಪಿಯು ಫಲಿತಾಂಶದಲ್ಲಿ ಏರುಪೇರಾಗಿ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಬೀದಿಗೆ ಬಿದ್ದಿದ್ದಾರೆ. ಅವರಿಗೆ ನ್ಯಾಯ ಒದಗಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗಿ ದೆಹಲಿಯಲ್ಲಿ ಕುಳಿತಿದ್ದಾರೆ ಎಂದು ಟೀಕಿಸಿದರು.

ಅಕ್ರಮ ಲಾಟರಿ ದಂಧೆ: ಸಿಬಿಐಗೆ ವಹಿಸಿ

ravi

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಲಾಟರಿ ದಂಧೆಯನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಮುಖಂಡ ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಐಡಿ ತನಿಖೆಯಿಂದ ಸತ್ಯ ಹೊರಬರುವ ಸಾಧ್ಯತೆ ಇಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಲಾಟರಿ ದಂಧೆಯಲ್ಲಿ ರಾಜ್ಯದ ಪೊಲೀಸ್ ಅಧಿಕಾರಿಗಳ ಹೆಸರುಗಳು ಕೇಳಿಬಂದಿವೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಅವರು ಹೇಳಿದರು.

ಸಿಐಡಿ ತನಿಖೆ ಕಣ್ಣೊರೆಸುವ ತಂತ್ರವಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿರುವುದರಿಂದ ಸತ್ಯಾಂಶಗಳು ಹೊರಬರುವ ಸಾಧ್ಯತೆ ಇಲ್ಲ. ಗೃಹಸಚಿವರು ಇದಕ್ಕೆ ನೇರ ಹೊಣೆಯಾಗುತ್ತಾರೆ ಎಂದರು. ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಭ್ರಷ್ಟ ಅಧಿಕಾರಿ. ಅವರನ್ನು ಮೊದಲು ತೆಗೆಯಬೇಕು ಎಂದ ಅವರು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ರಾಜ್ಯದ ಭ್ರಷ್ಟ ಅಧಿಕಾರಿಗಳ ಕರ್ಮಕಾಂಡಗಳು ಬಯಲಾಗುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ವಿದ್ಯುತ್‌ಚ್ಛಕ್ತಿನಿಯಂತ್ರಣ ಆಯೋಗಕ್ಕೆ ಶಂಕರಲಿಂಗೇಗೌಡ , ಅಶೋಕ್ ಮನವಳ್ಳಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಆದರೆ ಈ ಇಬ್ಬರ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಹೀಗಾಗಿ ಸರ್ಕಾರ ತನ್ನ ಶಿಫಾರಸ್ಸನ್ನು ಹಿಂಪಡೆದು ದಕ್ಷ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಎಂದು ಕೋರಿದರು.

15 ದಿನದೊಳಗೆ ಸಿಐಡಿ ವರದಿ
ಬೆಂಗಳೂರು: ಅಕ್ರಮ ಲಾಟರಿ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಕುರಿತು ಸಮಗ್ರ ತನಿಖೆ ನಡೆಸಿ ಇನ್ನು 15 ದಿನಗಳ ಒಳಗಾಗಿ ರಾಜ್ಯ ಸರ್ಕಾರಕ್ಕೆ ವರದಿ ನೀಡುವುದಾಗಿ ಸಿಐಡಿ ಉನ್ನತ ಮೂಲಗಳು ತಿಳಿಸಿವೆ.

ಬಂಧಿತ ಆರೋಪಿ ಜೊತೆ ಬಹಳಷ್ಟು ಹಿರಿಯ, ಕಿರಿಯ, ಹಾಲಿ, ಮಾಜಿ ಅಧಿಕಾರಿಗಳು ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಪ್ರತಿಯೊಂದನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಿ ಅಧಿಕಾರಿಗಳ ಹೇಳಿಕೆ ಪಡೆದು ನಂತರ ಸರ್ಕಾರಕ್ಕೆ ವರದಿ ತಿಳಿಸುವುದಾಗಿ ಮೂಲಗಳು ತಿಳಿಸಿವೆ.

Write A Comment