ಕರ್ನಾಟಕ

ಕರ್ನಾಟಕದಲ್ಲಿ ಅಕ್ರಮ ಆಸ್ತಿಗಳಿಕೆ ಆರೋಪ ಯಾರ ಮೇಲಿದೆ?

Pinterest LinkedIn Tumblr

ya

ಬೆಂಗಳೂರು, ಮೇ 11 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಆರೋಪ ಮುಕ್ತಗೊಳಿಸಿ ಕರ್ನಾಟಕ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ. ಕರ್ನಾಟಕದಲ್ಲಿಯೂ ಹಲವು ಜನಪ್ರತಿನಿಧಿಗಳ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರು ದಾಖಲಾಗಿದೆ.

2014ರಲ್ಲಿ ಜಯಲಲಿತಾ ಅವರು ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಸಿಬಿಐ ವಿಶೇಷ ಕೋರ್ಟ್ ಆದೇಶ ನೀಡಿತ್ತು ಮತ್ತು 4 ವರ್ಷದ ಜೈಲು ಶಿಕ್ಷೆ ಮತ್ತು 100 ಕೋಟಿ ದಂಡವನ್ನು ಪಾವತಿ ಮಾಡಬೇಕು ಎಂದು ಆದೇಶ ನೀಡಿತ್ತು. ಸುಮಾರು 18 ವರ್ಷಗಳ ಕಾನೂನು ಹೋರಾಟದ ಬಳಿಕ ಈ ಆದೇಶ ಹೊರಬಿದ್ದಿತ್ತು.

ಕರ್ನಾಟಕದಲ್ಲಿಯೂ ಹಲವು ಜನಪ್ರತಿನಿಧಿಗಳ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರು ದಾಖಲಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವ ರೇಣುಕಾಚಾರ್ಯ, ಶಾಸಕ ವರ್ತೂರು ಪ್ರಕಾಶ್, ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ನಾಯಕ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲಾಗಿದೆ.

ಈ ಆರೋಪಗಳ ಕುರಿತು ವಿವಿಧ ಹಂತಗಳಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಯಾವಾಗ ಪ್ರಕಟವಾಗುತ್ತದೆ? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ರಾಜ್ಯದ ಜನಪ್ರತಿನಿಧಿಗಳ ವಿವರ ಇಲ್ಲಿದೆ.

ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲಾಗಿದೆ. ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ವಕೀಲ ವಿನೋದ್ ಕುಮಾರ್ ದೂರು ಸಲ್ಲಿಸಿದ್ದಾರೆ. ಸದ್ಉ ಶಿವಮೊಗ್ಗದ ಸಂಸದರಾಗಿರುವ ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರೂ ಹೌದು.

ಬಿ.ವೈ.ರಾಘವೇಂದ್ರ ಅವರಿಗೂ ಅಕ್ರಮ ಆಸ್ತಿ ಸಂಕಟ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರು ವಿರುದ್ಧವೂ ಶಿವಮೊಗ್ಗದ ವಕೀಲ ವಿನೋದ್ ಕುಮಾರ್ ಅಕ್ರಮ ಆಸ್ತಿಗಳಿಕೆ ದೂರು ನೀಡಿದ್ದಾರೆ. ಶಿವಮೊಗ್ಗ ಸಂಸದರಾಗಿದ್ದ ರಾಘವೇಂದ್ರ ಅವರು ಸದ್ಯ ಶಿಕಾರಿಪುರ ಕ್ಷೇತ್ರದ ಶಾಸಕರು.

ಖರ್ಗೆ ವಿರುದ್ಧವೂ ಅಕ್ರಮ ಆಸ್ತಿಗಳಿಕೆ ದೂರು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ಅಕ್ರಮ ಆಸ್ತಿಗಳಿಕೆ ದೂರು ದಾಖಲಾಗಿದೆ. 2014ರ ಅಕ್ಟೋಬರ್‌ನಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ಸಮಾಜ ಪರಿವರ್ತನ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ರತ್ನಾಕರ್ ಅವರು ಈ ದೂರು ನೀಡಿದ್ದಾರೆ. ಖರ್ಗೆ ಅವರು ಸಚಿವರಾಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ಈ ಹಣ ಸಂಪಾದಿಸಿದ್ದಾರೆಂದು ದೂರಿನಲ್ಲಿ ಆರೋಪಿಸಿಸಲಾಗಿದೆ.

ಸಾಲದ ವಿವರ ಕೊಟ್ಟ ಸದಾನಂದ ಗೌಡರು ಸದ್ಯ ಕೇಂದ್ರ ಕಾನೂನು ಸಚಿವರಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡರ ವಿರುದ್ಧವೂ ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿಬಂದಿತ್ತು. 2014ರ ಲೋಕಸಭೆ ಚುನಾವಣೆಗೆ ಮೊದಲು 9.88 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದ ಸದಾನಂದ ಗೌಡರ ಆಸ್ತಿ ಈಗ 20.35 ಕೋಟಿ ರೂ.ಗೆ ಏರಿಕೆ ಯಾಗಿದೆ ಎಂದು 2014ರ ಅಕ್ಟೋಬರ್‌ನಲ್ಲಿ ಸುದ್ದಿ ಹಬ್ಬಿತ್ತು. ಸದಾನಂದ ಗೌಡರು 10 ಕೋಟಿ ಆಸ್ತಿ ಹೇಗೆ ಏರಿಕೆಯಾಗಿದೆ?, ಯಾವ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಅದನ್ನು ಖರೀದಿಸಲಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಕೆ.ಎಸ್.ಈಶ್ವರಪ್ಪಗೂ ಅಕ್ರಮ ಆಸ್ತಿಗಳಿಕೆ ನಂಟು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ವಿರುದ್ಧ ದೂರು ನೀಡಿದ್ದ ವಕೀಲ ವಿನೋದ್ ಕುಮಾರ್ ಕೆಎಸ್ ಈಶ್ವರಪ್ಪ ವಿರುದ್ಧವೂ ಅಕ್ರಮ ಆಸ್ತಿಗಳಿಕೆ ದೂರು ನೀಡಿದ್ದರು. ಮಾಜಿ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಸದ್ಯ ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿದ್ದಾರೆ.

ರೇಣುಕಾಚಾರ್ಯ ವಿರುದ್ಧವೂ ಅಕ್ರಮ ಆಸ್ತಿ ದೂರು ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಅವರು ಅಕ್ರಮವಾಗಿ ಆಸ್ತಿಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಗುರುಪಾದಯ್ಯ ಅವರು ದಾವಣಗೆರೆ ಲೋಕಾಯುಕ್ತ ನ್ಯಾಯಾಲಯಕ್ಕೆ ಈ ಕುರಿತು ದೂರು ಸಲ್ಲಿಸಿದ್ದಾರೆ. 2015ರ ಜೂ.22ರೊಳಗೆ ತನಿಖೆ ನಡೆಸಿ ವರದಿ ನೀಡಲು ಕೋರ್ಟ್ ಆದೇಶ ನೀಡಿದೆ.

ಕೋಲಾರ ಶಾಸರನ್ನೂ ಬಿಡದ ಅಕ್ರಮ ಆಸ್ತಿ ಆರೋಪ ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತ ಲೋಕೇಶ್‌ಗೌಡ ಎಂಬುವವರು ಇತ್ತೀಚೆಗೆ ಬೆಂಗಳೂರಿನಲ್ಲಿ ಲೋಕಾಯುಕ್ತರಿಗೆ ನೀಡಿದ್ದ ದೂರನ್ನು ಕೋಲಾರ ಜಿಲ್ಲಾ ಲೋಕಾಯುಕ್ತ ಕಚೇರಿಗೆ ವರ್ಗಾಯಿಸಲಾಗಿತ್ತು. ಮೇ 9ರಂದು ಕೋಲಾರದಲ್ಲಿ ಶಾಸಕರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

Write A Comment