ಕರ್ನಾಟಕ

‘ಮನೆ ಹೋಯ್ತು, ಕೆಲಸವೂ ಹೋಯ್ತು’: ಬಾಣಸವಾಡಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರಾದ ಕ್ರಿಸ್ಟ್‌ರಾಜ್‌ ರೋದನ

Pinterest LinkedIn Tumblr

NEWS

ಬಾಣಸವಾಡಿಯಲ್ಲಿ ಇತ್ತೀಚಿಗೆ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ನೆಲಸಮಗೊಂಡ ಕಟ್ಟಡಗಳ ಅವಶೇಷಗಳನ್ನು ಬೇರೆಡೆ ಸಾಗಿಸುವ ಕೆಲಸ ಭಾನುವಾರವೂ ನಡೆಯಿತು

ಬೆಂಗಳೂರು: ‘ಜೆಸಿಬಿ ಯಂತ್ರದಿಂದ ಮನೆಯ ಅರ್ಧಭಾಗ ಒಡೆದು ಹಾಕಿದ್ದಾರೆ. ಇದರಿಂದ ಉಳಿದ ಕಟ್ಟಡಕ್ಕೂ ಹಾನಿಯಾಗಿದೆ. ಅಲ್ಲದೇ ಬದುಕಿಗೆ ಆಧಾರವಾಗಿದ್ದ ಅಂಗಡಿಯೂ ಹೋಗಿದೆ. ಈಗ ವಾಸಿಸಲು ಮನೆಯು ಇಲ್ಲ, ಉದ್ಯೋಗವೂ ಇಲ್ಲದಂತಾಗಿದೆ’

ಬಾಣಸವಾಡಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಅಂಗಡಿ ಹಾಗೂ ಮನೆಯ ಅರ್ಧಭಾಗ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿರುವ ಕ್ರಿಸ್ಟ್‌ರಾಜ್‌ ಅವರ ನೋವಿನ ಮಾತುಗಳಿವು.

‘ಜೆಸಿಬಿಯಿಂದ ಬೇಕಾಬಿಟ್ಟಿಯಾಗಿ ಕಾರ್ಯಾಚರಣೆ ನಡೆಸಿರುವುದರಿಂದ ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಗೋಡೆಗಳಲ್ಲಿ ಬಿರುಕು ಬಿಟ್ಟಿರುವುದರಿಂದ ಯಾವುದೇ ಸಂದರ್ಭದಲ್ಲಿ ಬೀಳಬಹುದು’ ಎಂದೂ ಆತಂಕ ವ್ಯಕ್ತಪಡಿಸಿದರು.

‘ಮೊನ್ನೆಯಂತೂ ಕಟ್ಟಡದ ಒಂದು ದೊಡ್ಡ ಭಾಗ ಏಕಾಏಕಿ ಉರುಳಿಬಿತ್ತು. ಅದೃಷ್ಟವಶಾತ್‌ ಆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಹೆಂಡತಿ, ಇಬ್ಬರೂ ಮಕ್ಕಳು ಹಾಗೂ ವಯಸ್ಸಾದ ತಾಯಿ ಇದ್ದಾರೆ.  ಏನಾದರೂ ಹೆಚ್ಚು ಕಮ್ಮಿ ಆದರೆ ಏನು ಮಾಡುವುದು ಎಂದು ಬಾಡಿಗೆ ಮನೆಗೆ ಹೋಗಿದ್ದೇವೆ’ ಎಂದರು.

‘ಮನೆಯಲ್ಲಿರುವ ಸಣ್ಣಪುಟ್ಟ ವಸ್ತುಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಮೊನ್ನೆ ಮೋಟಾರ್‌ ಕಳವು ಆಗಿದೆ. ಇದರಿಂದಾಗಿ ದಿನಾಲೂ ಇಲ್ಲಿಗೆ ಬಂದು ನೋಡಿಕೊಂಡು ಹೋಗುವುದೇ ದೊಡ್ಡ ಕೆಲಸ’ ಎಂದು ಗೋಳು ತೋಡಿಕೊಂಡರು.

ಬಾಣಸವಾಡಿಯ 80 ಅಡಿ ರಸ್ತೆಗೆ ಹೊಂದಿಕೊಂಡಂತೆ ಕ್ರಿಸ್ಟ್‌ರಾಜ್‌ ಅವರ  800 ಚದರ ಅಡಿ ಮನೆ ಇದೆ. ಸುಮಾರು 25 ವರ್ಷಗಳ ಹಿಂದೆ ಅವರು ನಿವೇಶನ ಖರೀದಿಸಿ ಮನೆ ನಿರ್ಮಿಸಿದ್ದರು.

ಮನೆಯ ಮುಂಭಾಗದಲ್ಲಿ ಸಣ್ಣ  ಗಿಫ್ಟ್‌ ಅಂಗಡಿ ಇಟ್ಟುಕೊಂಡಿದ್ದರು. ಅದರಿಂದ ಬರುವ ಆದಾಯದಲ್ಲಿ ಜೀವನ ನಿರ್ವಹಣೆ ನಡೆಯುತ್ತಿತ್ತು. ಆದರೆ, ತೆರವು ಕಾರ್ಯಾಚರಣೆಯಿಂದ ಮನೆ, ಉದ್ಯೋಗ ಕಳೆದುಕೊಂಡು ಕ್ರಿಸ್ಟ್‌ರಾಜ್‌ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

‘ಕೆರೆ ಜಾಗದಲ್ಲಿ ಮನೆ ನಿರ್ಮಿಸಿದ್ದರಿಂದ ತೆರವುಗೊಳಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಸುತ್ತಮುತ್ತ ಸಾಕಷ್ಟು ಮನೆಗಳಿವೆ. ಅವುಗಳನ್ನು ಹಾಗೇ ಬಿಟ್ಟು ನಮ್ಮ ಮನೆ ಮಾತ್ರ ಕೆಡವಿ ಬೀದಿಗೆ ತಳ್ಳಿದ್ದಾರೆ. ಈಗ ನಾವು ಎಲ್ಲಿಗೆ ಹೋಗಬೇಕು? ಹೇಗೆ ಬದುಕಬೇಕು?’ ಎಂದು ಪ್ರಶ್ನಿಸಿದರು.

‘ಬಡವರ ಮನೆಗಳನ್ನು ಮಾತ್ರ ತೆರವುಗೊಳಿಸುತ್ತಿದ್ದಾರೆ. ಶ್ರೀಮಂತರು ಹಾಗೂ ಪ್ರಭಾವಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ. ಇದು ಸರೀನಾ’ ಎಂದು ಮತ್ತೆ ಪ್ರಶ್ನಿಸಿದರು.

‘ಕ್ಷೇತ್ರದ ಶಾಸಕರಾಗಿರುವ ಗೃಹಸಚಿವ ಕೆ.ಜೆ. ಜಾರ್ಜ್‌ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡೆವು.  ನ್ಯಾಯಾಲ ಯದ ಆದೇಶದ ಪ್ರಕಾರ ಅಧಿಕಾರಿಗಳು ಕ್ರಮ ಜರುಗಿಸುತ್ತಿದ್ದು, ತಡೆಯಲು ಸಾಧ್ಯ ವಿಲ್ಲ ಎಂದು ಹೇಳಿ ತನಗೂ ಇದಕ್ಕೂ ಸಂಬಂಧವಿಲ್ಲ ಎಂದು ಕೈತೊಳೆದು ಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Write A Comment