ಕರ್ನಾಟಕ

ಬಿಬಿಎಂಪಿ ಆಡಳಿತಾಧಿಕಾರಿಗಳ ಚಳಿ ಬಿಡಿಸಿದ ಸಚಿವರು

Pinterest LinkedIn Tumblr

BBMP_officer

ಬೆಂಗಳೂರು, ಮೇ.2-ಮಳೆ ಅನಾಹುತ ಸಂದರ್ಭದಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಬಿಬಿಎಂಪಿ ಆಡಳಿತಾಧಿಕಾರಿ ವಿಜಯಭಾಸ್ಕರ್ ಮತ್ತು ಆಯುಕ್ತ ಕುಮಾರ್‌ನಾಯಕ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಚಳಿ ಬಿಡಿಸಿದ್ದಾರೆ.  ಕಳೆದ ಎರಡು ದಿನಗಳ ಹಿಂದೆ ನಗರದಲ್ಲಿ ಬಿದ್ದ ಧಾರಾಕಾರ ಮಳೆಗೆ ಹಲವಾರು ಮರಗಳು, ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದವು. ಘಟನೆ ಸಂಭವಿಸಿ 36 ಗಂಟೆ ಕಳೆದರೂ ಅವುಗಳನ್ನು ತೆರವುಗೊಳಿಸದ ಬಿಬಿಎಂಪಿ ಕಾರ್ಯ ವೈಖರಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಎರಡು ದಿನಗಳಿಂದ ರಸ್ತೆಯಲ್ಲೇ ಬಿದ್ದ ಮರಗಳಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಜನರು ಪರಿತಪಿಸುವಂತಾಗಿತ್ತು.  ತಮ್ಮ ಸಮಸ್ಯೆ ಕುರಿತಂತೆ ಬಿಬಿಎಂಪಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಜನರ ನೆರವಿಗೆ ಬಂದಿದ್ದಾರೆ.

ಆಡಳಿತಾಧಿಕಾರಿ ವಿಜಯಭಾಸ್ಕರ್ ಮತ್ತು ಕುಮಾರ್‌ನಾಯಕ್ ಅವರಿಗೆ ದೂರವಾಣಿ ಕರೆ ಮಾಡಿ ಚಳಿ ಬಿಡಿಸಿದ ರಾಮಲಿಂಗಾರೆಡ್ಡಿಯವರು ಸಂಜೆ ವೇಳೆಗೆ ರಸ್ತೆಗೆ ಉರುಳಿ ಬಿದ್ದಿರುವ ಎಲ್ಲ ಮರಗಳನ್ನು ತೆರವುಗೊಳಿಸಬೇಕು, 36 ಗಂಟೆ ಕಳೆದರೂ ವಿದ್ಯುತ್ ಕಂಬ, ಮರಗಳನ್ನು ತೆರವುಗೊಳಿಸದಿರಲು ಕಾರಣವೇನೆಂದು ಸ್ಪಷ್ಟನೆ ನೀಡಬೇಕೆಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.  ನಾಳೆ ನಾನು ನಗರ ಪ್ರದಕ್ಷಿಣೆ ಮಾಡುತ್ತೇನೆ. ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ಸಹಿಸುವುದಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
– ಈ ಸಂಜೆ

Write A Comment