ಕರ್ನಾಟಕ

ಒತ್ತುವರಿ ತೆರವಿನ ಕಾರ್ಯಾಚರಣೆ: ಅಂಗಾಲಾಚಿ, ಕಣ್ಣೀರು ಹಾಕಿದ ಜನ

Pinterest LinkedIn Tumblr

1

ಬೆಂಗಳೂರು: ಸಾರಕ್ಕಿ ಕೆರೆ, ಅಲ್ಲಾಳಸಂದ್ರ ಕೆರೆ ಒತ್ತುವರಿ ತೆರವು ಮಾಡಿದ್ದಾಯ್ತು. ಈಗ ಬಾಣಸವಾಡಿ ಕೆರೆ ಸರದಿ. ಬೆಂಗಳೂರು ಜಿಲ್ಲಾಡಳಿತ ಇಂದು ಬಾಣಸವಾಡಿ ಕೆರೆಯ ಒತ್ತುವರಿದಾರರ ತೆರವು ಕಾರ್ಯಾಚರಣೆ ಆರಂಭಿಸಿದೆ.

ಬೆಂಗಳೂರು ಉತ್ತರ ತಹಶೀಲ್ದಾರ್ ಹರೀಶ್ ನಾಯಕ್ ನೇತೃತ್ವದಲ್ಲಿ ವಾಣಿಜ್ಯ ಸಂಕೀರ್ಣಗಳು ಸೇರಿ ಒಟ್ಟು 130 ಮನೆಗಳ ತೆರವು ಕಾರ್ಯಾಚರಣೆ ಆರಂಭಿಸಿದೆ. ಮೊದಲ ಹಂತವಾಗಿ 15ಕ್ಕೂ ಹೆಚ್ಚು ಜೆಸಿಬಿಗಳ ಮೂಲಕ ವಾಣಿಜ್ಯ ಸಂಕೀರ್ಣಗಳ ತೆರವು ಆರಂಭವಾಗಿದೆ. 3 ಎಕರೆ ಒತ್ತುವರಿಯಾಗಿದ್ದು, ಖಾಸಗಿ ಬಡಾವಣೆ, ಪೆಟ್ರೋಲ್ ಬಂಕ್, ಮನೆಗಳು, ಸಾ ಮಿಲ್, ಅಂಗಡಿಗಳು ನಿರ್ಮಾಣವಾಗಿವೆ. ಎಚ್‍ಆರ್‍ಬಿಆರ್ ಲೇಔಟ್‍ನಲ್ಲಿರುವ ಮನೆಗಳ ತೆರವಿಗೆ ಜಿಲ್ಲಾಧಿಕಾರಿ ವಿ.ಶಂಕರ್ ಆದೇಶದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಹರೀಶ್ ನಾಯಕ್ ಹೇಳಿದ್ದಾರೆ.

ಇದಲ್ಲದೇ 13 ಎಕರೆಯಲ್ಲಿ ಬಿಡಿಎ ಬಡಾವಣೆ ನಿರ್ಮಿಸಿ ಸಾರ್ವಜನಿಕರಿಗೆ ಹಂಚಿಕೆ ಮಾಡಿದೆ. ಜಿಲ್ಲಾಡಳಿತ ಸಮೀಕ್ಷೆ ನಡೆಸಿದಾಗ ಇದು ಕೆರೆಗೆ ಸೇರಿದ ಜಾಗ ಎಂದು ಬೆಳಕಿಗೆ ಬಂದಿದೆ. ಇದರ ಒತ್ತುವರಿ ತೆರವು ವಿಷಯದಲ್ಲಿ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಿದೆ.

6

5

4

3

2

ಪೆಟ್ರೋಲ್ ಬಂಕ್ ತೆರವು: 120 ಕೋಟಿ ರೂಪಾಯಿ ಮೌಲ್ಯದ ಭೂಮಿ ಒತ್ತುವರಿ ತೆರವು ಕಾರ್ಯ ನಡೀತಿದ್ದು, ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಸೇರಿದ ಪೆಟ್ರೋಲ್ ಬಂಕ್ ಕೂಡ ತೆರವು ಮಾಡಲಾಗಿದೆ. ಒತ್ತುವರಿಗೆ ತೆರವಿಗೆ ಅಡ್ಡಿಪಡಿಸಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು. ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಹರೀಶೇಖರನ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಣ್ಣೀರ ಧಾರೆ: ಮಹಿಳೆಯೊಬ್ಬರು ಮನೆ ತೆರವು ಮಾಡಬೇಡಿ ಎಂದು ಅಂಗಾಲಾಚಿ, ಕಣ್ಣೀರು ಹಾಕಿದ್ದು ಮನಕಲಕುವಂತಿತ್ತು. ಆದ್ರೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಆ ಮಹಿಳೆಯನ್ನು ತಡೆದು, ಜಿಲ್ಲಾಡಳಿತ ತೆರವು ಕಾರ್ಯ ಮುಂದುವರಿಸಿತು. ಈ ಮನೆಯನ್ನು ಒಡೆಯಲ್ಲ ಎಂದು ಹೇಳಿದ್ದರು. ಇದೀಗ ತೆರವು ಮಾಡಲು ಬಂದಿದ್ದಾರೆ. ನಾವು ಈ ನಿವೇಶನವನ್ನು ದುಡ್ಡುಕೊಟ್ಟು ಕೊಂಡುಕೊಂಡಿದ್ದೇವೆ. ನನ್ನ ಗಂಡ ನನಗಾಗಿ ಗುಬ್ಬಚ್ಚಿ ಗೂಡಿನ ಮನೆ ಕಟ್ಟಿದ್ದಾರೆ. ನಾವೇನು ಬಂಗಲೆ ಕಟ್ಟಿಲ್ಲ. ಮನೆ ಒಡೆಯುವುದಾದರೆ ನಾನು ಆ ಮನೆಯಲ್ಲೇ ಸಾಯುತ್ತೇನೆ ಎಂದು ಮಾಧ್ಯಮಗಳ ಎದುರು ಅಳಲು ತೋಡಿಕೊಂಡರು.

ಡಿಸಿ ಸುದ್ದಿಗೋಷ್ಠಿ: ಬಾಣಸವಾಡಿ ಕೆರೆ ಒತ್ತುವರಿ ತೆರವು ಕಾರ್ಯ ನಡೀತಿದೆ. 42 ಎಕರೆ 38 ಗುಂಟೆ ಕೆರೆ ವಿಸ್ತೀರ್ಣದಲ್ಲಿ 14 ಎಕರೆಯಲ್ಲಿ ಬಿಡಿಎ ನಿವೇಶನ ಹಂಚಿಕೆ ಮಾಡಿದೆ. ಬಿಡಿಎ ನಿವೇಶನದಲ್ಲಿ ನಿರ್ಮಾಣವಾಗಿರುವ ಮನೆಗಳ ತೆರವು ಸದ್ಯಕ್ಕೆ ಮಾಡಲ್ಲ. ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ಶಂಕರ್ ಹೇಳಿದ್ದಾರೆ.

ಆದ್ರೆ 2 ಎಕರೆ 37 ಗುಂಟೆಯಲ್ಲಿ ವಾಣಿಜ್ಯ ಕಟ್ಟಡ, ಖಾಸಗಿ ಬಡಾವಣೆಗಳು ನಿರ್ಮಾಣವಾಗಿದೆ. ಇದರಲ್ಲಿ ಪೆಟ್ರೋಲ್ ಬಂಕ್ ಸೇರಿದಂತೆ ವಾಣಿಜ್ಯ ಕಟ್ಟಡಗಳ ತೆರವು ಮಾಡುತ್ತಿದ್ದೇವೆ. ಖಾಸಗಿ ಬಡಾವಣೆಯಲ್ಲಿರುವ ನಿವೇಶನಗಳ ವಾಸಿಗಳಿಗೆ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಿ ಕಾಲಾವಕಾಶ ಕೊಡುತ್ತೇವೆ. ಓಂ ಶಕ್ತಿ ದೇಗುಲವನ್ನು ಮುಜರಾಯಿ ಇಲಾಖೆಗೆ ನೀಡುತ್ತೇವೆ. ಸರ್ಕಾರಿ ಪಿಯು ಕಾಲೇಜು ಕೂಡ ಇಲ್ಲಿ ನಿರ್ಮಾಣವಾಗಿದ್ದು ಅದನ್ನು ತೆರವು ಮಾಡುತ್ತಿಲ್ಲ ಎಂದು ಹೇಳಿದರು.

Write A Comment