ಕರ್ನಾಟಕ

ವೋಟ್ ಹಾಕದಿದ್ದರೆ ಸರ್ಕಾರಿ ಸೌಲಭ್ಯಗಳು ಕಟ್..! ದಂಡ ಇಲ್ಲವೆ ಎರಡು ದಿನ ಜೈಲು ಶಿಕ್ಷೆ

Pinterest LinkedIn Tumblr

voting

ಬೆಂಗಳೂರು, ಮೇ 2: ಯಾವ ಸರ್ಕಾರ ಅಧಿಕಾರಕ್ಕೆ ಬಂದ್ರೆ ನಮಗೇನು..? ನಾವೇನು ರಾಗಿ ಬಿಸೋದ್ ತಪ್ಪುತ್ತಾ..? ಓಟ್ ಹಾಕೋದು, ಬಿಡೋದು ನಮ್ಮಿಷ್ಟ. ಮತ ಹಾಕಲ್ಲ ಅಂದ್ರೆ ಯಾರ್ ಏನ್ ಮಾಡ್ತಾರೆ..? ನಮ್ಮ ವೋಟ್ ನಾವು ಏನ್ ಬೇಕಾದ್ರೂ ಮಾಡ್ಕೊಳ್ತೀವಿ..! ಇನ್ನು ಮುಂದೆ ಇಂತಹ ಹೇಳಿಕೆ ನೀಡೀರಿ ಜೋಕೆ..! ಏಕೆಂದರೆ, ಬರಲಿರುವ ಚುನಾವಣೆಗಳಲ್ಲಿ ಪ್ರತಿಯೊಬ್ಬ ಮತದಾರನು ಕಡ್ಡಾಯವಾಗಿ ಮತ ಚಲಾಯಿಸಲೇಬೇಕು. ಇಲ್ಲದಿದ್ದರೆ ಸರ್ಕಾರಿ ಸವಲತ್ತುಗಳಿಗೆ ಕತ್ತರಿ ಬೀಳಲಿದೆ..! ಇದರ ಜತೆಗೆ ಮತದಾನದಿಂದ ದೂರ ಉಳಿಯುವವರಿಗೆ 500 ರೂ. ದಂಡ ಇಲ್ಲವೆ ಎರಡು ದಿನ ಜೈಲು ಶಿಕ್ಷೆ ಅನಭವಿಸುವುದು ಗ್ಯಾರಂಟಿ.

ಹೌದು..! ರಾಜ್ಯ ಸರ್ಕಾರ ಸದ್ಯದಲ್ಲೇ ಕಡ್ಡಾಯ ಮತದಾನ ಜಾರಿಗೊಳಿಸುವ ನೂತನ ಕಾಯ್ದೆ ಜಾರಿ ಮಾಡಲು ಮುಂದಾಗಿದೆ. ಈ ನಿಯಮದ ಪ್ರಕಾರ, 18 ವರ್ಷ ದಾಟಿ ಮತ ಚಲಾಯಿಸುವ ಹಕ್ಕು ಪಡೆದಿರುವ ಪ್ರತಿಯೊಬ್ಬ ಮತದಾರನೂ ಕಡ್ಡಾಯವಾಗಿ ಮತದಾನ ಮಾಡಲೇಬೇಕು. ಆದರೆ, ಈ ನಿಯಮವು ಇದೇ ತಿಂಗಳು ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಅನ್ವಯವಾಗುವುದಿಲ್ಲ. ಮುಂಬರುವ ಎಲ್ಲ ಚುನಾವಣೆಗಳಿಗೂ ಕಡ್ಡಾಯ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈಗಾಗಲೇ ಸರ್ಕಾರ ಗ್ರಾಪಂ ಚುನಾವಣೆಯಲ್ಲಿ ಮತದಾನ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಇತ್ತೀಚಿಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬಹುಮತದಿಂದ ಅಂಗೀಕೃತವಾಗಿದ್ದ ಪಂಚಾಯತ್ ರಾಜ್ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದರೆ ಸದ್ಯದ ಮಟ್ಟಿಗೆ ದಂಡ ವಿಧಿಸಲು ನೂತನ ಕಾಯ್ದೆಯಲ್ಲಿ ಅವಕಾಶವಿಲ್ಲ. ಆದರೆ, ಮತದಾನ ಹೆಚ್ಚಿಸಲು ಹಾಗೂ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸರ್ಕಾರ ಮುಂದಾಗಿದ್ದು, ಮತದಾನದ ವೇಳೆ ಚಕ್ಕರ್ ಹೊಡೆಯುವವರಿಗೆ ಪಾಠ ಕಲಿಸುವುದು ಇದರ ಉದ್ದೇಶ. ಸಭೆ-ಸಮಾರಂಭ, ವೇದಿಕೆಗಳಲ್ಲಿ ವ್ಯವಸ್ಥೆ ಬಗ್ಗೆ ಮಾತನಾಡುವವರು ಹೆಚ್ಚು. ದೇಶದಲ್ಲಿ ಭ್ರಷ್ಟಚಾರ ಹೆಚ್ಚುತ್ತಿದೆ, ಜನಪ್ರತಿನಿಧಿಗಳು ಭ್ರಷ್ಟರಾಗುತ್ತಿದ್ದಾರೆ, ನಾವ್ಯಾಕೆ ಮತ ಹಾಕಬೇಕು ಎಂದು ಗೊಣಗುವವರೇ ಹೆಚ್ಚು. ಹೀಗೆ ವ್ಯವಸ್ಥೆಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವರು ಮತದಾನದ ದಿನ ದೂರ ಉಳಿದು ಬಿಡುತ್ತಾರೆ.

ಜಗತ್ತಿನ ಒಟ್ಟು 29 ರಾಷ್ಟ್ರಗಳಲ್ಲಿ ಕಡ್ಡಾಯ ಮತದಾನ ಜಾರಿಯಾಗಲಿದೆ. ಆಸ್ಟ್ರೇಲಿಯಾ, ಅರ್ಜೆಂಟೈನಾ ಸೇರಿದಂತೆ ಮತ್ತಿತರ ರಾಷ್ಟ್ರಗಳಲ್ಲಿ ಎಲ್ಲ ಹಂತದ ಚುನಾವಣೆಗಳಲ್ಲೂ ಮತದಾನ ಮಾಡಬೇಕು. 12 ರಾಷ್ಟ್ರಗಳಲ್ಲಿ ಮತ ಹಾಕದಿದ್ದರೆ ಕಾನೂನು ಪ್ರಕಾರ, ಶಿಕ್ಷೆ ನೀಡಲು ಅವಕಾಶವಿದೆ. ಸರ್ಕಾರಿ ನೌಕರರಾಗಿ ಮತ ಹಾಕದಿದ್ದರೆ ವೇತನ ಕಡಿತಗೊಳಿಸುವುದು ಇಲ್ಲವೆ ಸಾಮಾನ್ಯ ನಾಗರೀಕರಾಗಿದ್ದರೆ, ಸರ್ಕಾರಿ ಸವಲತ್ತುಗಳಿಗೆ ಕಡಿತ ಬೀಳಲಿದೆ. ಚಾಲನಾ ಪರವಾನಗಿ ರದ್ದು ಮಾಡುವುದು,

ಮತದಾನ ಗುರುತಿನ ಚೀಟಿ ವಶಪಡಿಸಿಕೊಳ್ಳುವುದು ಸೇರಿದಂತೆ ಹಲವು ಸವಲತ್ತುಗಳನ್ನು ಕಿತ್ತುಕೊಳ್ಳಲು ಅವಕಾಶವಿದೆ. ಭಾರತದಂತಹ ರಾಷ್ಟ್ರದಲ್ಲಿ ಮತದಾನ ಮಾಡದಿದ್ದರೆ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇಲ್ಲಿ ಮತದಾನ ಹೆಚ್ಚಿಸಲು ಒಂದಿಷ್ಟು ಜಾಗೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದೇ ಹೊರತು ನಮ್ಮಂತಹ ಜಾತ್ಯತೀತ ರಾಷ್ಟ್ರದಲ್ಲಿ ಶಿಕ್ಷೆ ವಿಧಿಸುವುದು ಕಷ್ಟಕರವಾದ ಮಾತು. ಈಗಾಗಲೇ ಗುಜರಾತ್‌ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಕಡ್ಡಾಯ ಮತದಾನ ಜಾರಿ ಮಾಡಲಾಗಿದೆ. ಈ ಪ್ರಕಾರ, ಯಾರಾದರೂ ಮತದಾನ ಮಾಡದಿದ್ದರೆ ಅಂಥವರಿಗೆ ಸರ್ಕಾರಿ ಸವಲತ್ತುಗಳನ್ನು ನೀಡದಂತೆ ಸೂಚಿಸಲಾಗಿದೆ.

ಕರ್ನಾಟಕದಲ್ಲಿ ಹೇಗಿರಲಿದೆ..?

ರಾಜ್ಯದಲ್ಲಿ ಜಾರಿಯಾಗಲಿರುವ ನೂತನ ನಿಯಮದಂತೆ ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡಲೇಬೇಕು. ಒಂದು ವೇಳೆ ಯಾರಾದರೂ ಮತ ಚಲಾಯಿಸದಿದ್ದರೆ ಅಂಥವರಿಗೆ 500ರೂ. ದಂಡ ಇಲ್ಲವೆ ಎರಡು ದಿನ ಜೈಲು ಶಿಕ್ಷೆಯಾಗುವುದು ಗ್ಯಾರಂಟಿ.

ಸರ್ಕಾರಿ ನೌಕರರಾಗಿದ್ದರೆ ಒಂದು ಸಾವಿರ ರೂ.ವರೆಗೆ ದಂಡ, ವೇತನ ಕಡಿತ, ಮುಂಬಡ್ತಿಗೆ ಕೊಕ್ಕೆ ಹಾಕಲು ಅವಕಾಶವಿದೆ. ಇನ್ನು ಜನಸಾಮಾನ್ಯರಿಗೆ ಸರ್ಕಾರದ ಕೆಲವು ಸವಲತ್ತುಗಳು ಸಿಗುವುದಿಲ್ಲ. ಬಿಪಿಎಲ್ ಕಾರ್ಡ್ ಹೊಂದಿದ್ದರೆ ಎರಡು ತಿಂಗಳು ಪಡಿತರ ಧಾನ್ಯ ಸಿಗುವುದಿಲ್ಲ. ರಿಯಾಯ್ತಿ ದರದಲ್ಲಿ ಸಹಕಾರ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ, ಹಾಲಿ ಕೊಡಲಾಗುತ್ತಿರುವ ಪ್ರೋತ್ಸಾಹ ಧನ, ಆಶ್ರಯ ಮನೆಗೂ ಕಡಿವಾಣ ಹಾಕಲಿದೆ. ಇನ್ನು ಮುಂದೆ ಚುನಾವಣಾ ಆಯೋಗ ಮತದಾನ ಗುರುತಿನ ಚೀಟಿ ಜತೆಗೆ ಪ್ರಮಾಣಪತ್ರವನ್ನೂ ನೀಡಲಿದೆ. ಇದನ್ನು ಪ್ರತಿಯೊಬ್ಬ ಮತದಾರರೂ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಮತ ಚಲಾಯಿಸಿರುವುದಕ್ಕೆ ಪ್ರಮಾಣ ಪತ್ರದಲ್ಲಿ ಚುನಾವಣಾಧಿಕಾರಿಗಳು ಸಹಿ ಹಾಕುತ್ತಾರೆ. ಮತ ಹಾಕಿರುವುದಕ್ಕೆ ಈ ಪ್ರಮಾಣ ಪತ್ರವೇ ಸಾಕ್ಷಿಯಾಗಲಿದೆ. ಮತದಾನದಿಂದ ದೂರ ಉಳಿಯುವವರು ಒಂದು ಬಾರಿ ಯೋಚಿಸುವುದು ಒಳಿತು.
(ಈ ಸಂಜೆ)

Write A Comment