ಕರ್ನಾಟಕ

ತಮಿಳುನಾಡು ಮಾದರಿಯಲ್ಲಿ ಸಾಲ : ಸಿಎಂ ಪರಿಶೀಲನೆ

Pinterest LinkedIn Tumblr

siddu-siddu

ಬೆಂಗಳೂರು, ಏ.29-ತಮಿಳುನಾಡು ಮಾದರಿಯಲ್ಲಿ ಸಣ್ಣ ಮತ್ತು ಅತಿಸಣ್ಣ ಉದ್ದಿಮೆದಾರರಿಗೆ ಸಾಲ ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನೌಕರರ ಸಂಘ ಹಮ್ಮಿಕೊಂಡಿದ್ದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಸಣ್ಣ ಮತ್ತು ಅತಿಸಣ್ಣ ಉದ್ದಿಮೆದಾರರಿಗೆ ಶೇ.4ರ ರಿಯಾಯ್ತಿ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಉದ್ದಿಮೆದಾರರಿಗೆ ಹಣಕಾಸು ಒದಗಿಸುವ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದರು.

ಪ್ರಸ್ತುತ ಎಸ್‌ಸಿ-ಎಸ್‌ಟಿ ಉದ್ದಿಮೆದಾರರಿಗೆ 5 ಕೋಟಿವರೆಗೂ ಸಾಲದಲ್ಲಿ ರಿಯಾಯ್ತಿ ನೀಡಲಾಗುತ್ತಿದ್ದು, ಈಗಿರುವ ಬೇಡಿಕೆ ಪರಿಶೀಲಿಸಿ ಎಸ್‌ಸಿ-ಎಸ್‌ಟಿ ಹಾಗೂ ಒಬಿಸಿ ಉದ್ದಿಮೆದಾರರಿಗೆ ನೀಡುವ ಸಾಲದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಕ್ರಮ ವಹಿಸುವುದಾಗಿ ಹೇಳಿದರು.

ಎಫ್‌ಕೆಸಿಸಿಐ ಕಾನೂನು ಬದ್ಧವಾಗಿ ಸಾಲ ನೀಡಬೇಕು. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಇರಬೇಕು. ಸಾಲ ವಸೂಲಾತಿಯಲ್ಲಿ ಕಿರುಕುಳ, ತೊಂದರೆ ನೀಡಬಾರದು ಎಂದು ಸಲಹೆ ನೀಡಿದರು. ಹಣಕಾಸು ಸಂಸ್ಥೆ ಆಡಳಿತದಲ್ಲಿ ಸರ್ಕಾರ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿ ಎಂದು ಹೇಳಿದ ಅವರು, ಹಿಂದುಳಿದ ಜಿಲ್ಲೆಗಳಲ್ಲಿ ಲಭ್ಯವಿರುವ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ಉದ್ದಿಮೆ ನಡೆಸಲು ಉತ್ತೇಜನ ಕೊಡಬೇಕು. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ನಾವು ಕೇವಲ ಐದು ವರ್ಷ ಆಡಳಿತ ನಡೆಸಿದ್ದೇವೆ. ಜನರ ಆಶೀರ್ವಾದ ದೊರೆತರೆ ಮುಂದಿನ ವರ್ಷಕ್ಕೆ ಬಡ್ತಿ ಹೊಂದುತ್ತೇವೆ. ಆದರೆ, ಇಂತಹ ಸಂಸ್ಥೆಗಳು ಕೊನೆಯವರೆಗೂ ಇರುತ್ತವೆ. ಹಾಗಾಗಿ ಉತ್ತಮ ರೀತಿಯ ಸೇವೆ ಒದಗಿಸಲು ಮುಂದಾಗಬೇಕು ಎಂದರು.

ಶಿಕ್ಷಣ ಹೆಚ್ಚಾದಂತೆಲ್ಲ ಖಾಸಗಿ ವಲಯದಲ್ಲೂ ಸ್ವಾವಲಂಬಿ ಬದುಕು ನಡೆಸಲು ಹಾಗೂ ಹೊಸ ಹೊಸ ಉದ್ದಿಮೆಗಳಿಗೆ ಅವಕಾಶ ದೊರೆಯುತ್ತಿದೆ ಎಂದು ಹೇಳಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅನುಕಂಪದ ಆಧಾರದ ಮೇಲೆ ಹುದ್ದೆ ನೀಡುವ ಬಗ್ಗೆ ವ್ಯವಸ್ಥಾಪಕರಿಗೆ ಸೂಚನೆ ನೀಡುವುದಾಗಿ ಹಾಗೂ ಬಿಬಿಎಂಪಿ ನಗರ ಪಾಲಿಕೆ ಕಂದಾಯ ವಸೂಲಿ, ಹೆಚ್ಚುವರಿ ಸಿಬ್ಬಂದಿ ಖಾಯಂ ವರ್ಗಾವಣೆ ಇನ್ನಿತರ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ  ಯೋಗೇಶ್, ಉಪಾಧ್ಯಕ್ಷ ಡಿ.ನಾಗರಾಜ್, ಕಪಿಲ್ ಮೋಹನ್, ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

* ನಾಳೆ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ
ಬೆಂಗಳೂರು, ಏ.29-ಮೇಕೆದಾಟು ಬಳಿ ಕಾವೇರಿ ನದಿಗೆ ಜಲಾಶಯ ನಿರ್ಮಾಣ ಹಾಗೂ ಭಾಷಾ ಮಾಧ್ಯಮ ಕುರಿತಂತೆ ಸರ್ವಪಕ್ಷ ನಿಯೋಗ ನಾಳೆ ದೆಹಲಿಗೆ ತೆರಳಿ ಪ್ರಧಾನಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನೌಕರರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಕುರಿತಂತೆ ತಮಿಳುನಾಡು ರಾಜಕೀಯ ಮಾಡುತ್ತಿದೆ. ಅಲ್ಲದೆ, ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ. ಆದರೆ, ಇದಕ್ಕೆ ಹೆದರಬೇಕಿಲ್ಲ. ಕಾನೂನು ನಮ್ಮ ಪರವಾಗಿದೆ. ಈ ವಿಷಯವನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಡಲಾಗುವುದು. ಜತೆಗೆ ಭಾಷಾ ಮಾಧ್ಯಮ ಸಂಬಂಧ ಸಂವಿಧಾನ ತಿದ್ದುಪಡಿಗೆ ಒತ್ತಾಯಿಸಲಾಗುವುದು ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ಬೆಂಗಳೂರಿನ ಕಸದ ವಿಲೇವಾರಿ ಸರಿಯಾಗಿ ನಡೆಯುತ್ತಿದೆ. ಮೂರ್ನಾ್ಲ್ಕು ತಿಂಗಳಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದರು.
-ಕೃಪೆ: ಈ ಸಂಜೆ

Write A Comment