ನವದೆಹಲಿ, ಏ.29-ನೇಪಾಳ ಭೂಕಂಪದ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ತೆರೆಯಲಾಗಿದ್ದ ಸಹಾಯ ಕೇಂದ್ರವನ್ನು ಉತ್ತರ ಪ್ರದೇಶದ ಗಡಿಭಾಗದ ಗೋರಕ್ ಪುರಕ್ಕೆ ಸ್ಥಳಂತರಿಸಲಾಗಿದೆ ಎಂದು ಸಹಾಯ ಕೇಂಧ್ರದ ಮುಖ್ಯಸ್ಥ ರಮಣದೀಪ್ ಚೌಧರಿ ತಿಳಿಸಿದ್ದಾರೆ. ಸಂತ್ರಸ್ತರಿಗೆ ಶೀಘ್ರವಾಗಿ ನೆರವು ನೀಡಬೇಕೆನ್ನುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ಗೋರಕ್‌ಪುರದಲ್ಲಿ ಕ್ಯಾಂಪ್ ಹೌಸ್ ತೆರೆದಿದೆ. ಈ ಕ್ಯಾಂಪ್‌ನಲ್ಲಿ ಸಂತ್ರಸ್ತರಿಗೆ ಉಚಿತವಾಗಿ ಊಟೋಪಚಾರ, ಕುಡಿಯುವ ನೀರು, ಸ್ವಸ್ಥಾನಗಳಿಗೆ ತೆರಳಲು ವಾಹನ ವ್ಯವಸ್ಥೆ ಕೈಗೊಳ್ಳಲಾಗಿದೆ.
ರೈಲ್ವೆ ಇಲಾಖೆ ಉಚಿತವಾಗಿ ದ್ವಿತೀಯ ದರ್ಜೆಯ ಸ್ಲೀಪರ್ ವರ್ಗದ ಟಿಕೆಟ್ ನೀಡುತ್ತಿದೆ. ವಾರಣಾಸಿಗೆ ಆಗಮಿಸಿದ್ದ 53 ಕನ್ನಡಿಗರನ್ನು ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದು ದಿನದ 24 ಗಂಟೆಯಲ್ಲಿ ಯಾವುದೇ ಸಂದರ್ಭದಲ್ಲಿ ಸಂತ್ರಸ್ತರನ್ನು ರಾಜ್ಯಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಕರ್ನಾಟಕ ಭವನದ ಆಯುಕ್ತ ವಂದನಾ ಗುರ್ನಾನಿ ಅವರ ಮಾರ್ಗದರ್ಶನದಲ್ಲಿ ತಮ್ಮ ತಂಡ ಕಾರ್ಯಕೈಗೊಳ್ಳುತ್ತಿದೆ. ಉತ್ತರ ಪ್ರದೇಶದ ಅಧಿಕಾರಿಗಳು, ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಂತ್ರಸ್ತರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ಮಾಹಿತಿಯನ್ನು ತಮ್ಮ ಮೊಬೈಲ್ ಸಂಖ್ಯೆ 09480683105, ತಂಡದಲ್ಲಿರುವ ಕರ್ನಾಟಕ ಭವನದ ಮಂಜೇಗೌಡ 09891542929ಗೆ ಕರೆ ಮಾಡಿ ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
-ಕೃಪೆ: ಈ ಸಂಜೆ