ಕರ್ನಾಟಕ

ನೂತನ ಸಾರಿಗೆ ಕಾಯ್ದೆಯನ್ನು ವಿರೋಧಿಸಿ ಬಂದ್‌ : ಮಿಶ್ರ ಪ್ರತಿಕ್ರಿಯೆ

Pinterest LinkedIn Tumblr

ksrtc-buses

ಬೆಂಗಳೂರು/ ಹುಬ್ಬಳ್ಳಿ, ಏ.29- ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ನೂತನ ಸಾರಿಗೆ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ವಾಹನ ಚಾಲಕರ ಸಂಘಟನೆಗಳು ಹಾಗೂ ಕೆಲ ಕಾರ್ಮಿಕ ಸಂಘಗಳು ಕರೆ ನೀಡಿರುವ ಬಂದ್‌ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಈಗಾಗಲೇ ಖಾಸಗಿ ಕ್ಯಾಬ್ ಸಂಘಟನೆಗಳು ಹಾಗೂ ರಾಜ್ಯ ಸರ್ಕಾರಿ ಸಾರಿಗೆ (ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ) ಸಂಘದ ಕೆಲ ಘಟಕಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರೆ, ಇನ್ನು ಕೆಲವು ವಿರೋಧ ವ್ಯಕ್ತಪಡಿಸಿವೆ.

ಬಹುತೇಕ ನಾಳೆ ಸಾರಿಗೆ ವ್ಯವಸ್ಥೆ ಬಂದ್ ಆಗುವ ಲಕ್ಷಣಗಳು ಗೋಚರಿಸುತ್ತಿದ್ದರೂ ಸಹ ಕೆಲ ಸಂಘಟನೆಗಳು ಎಂದಿನಂತೆ ತಮ್ಮ ಕರ್ತವ್ಯದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿವೆ. ಈ ಕುರಿತಂತೆ ಪೊಲೀಸರ ಭದ್ರತೆಯನ್ನು ಕೋರಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯ ಪೊಲೀಸ್ ಇಲಾಖೆ ಯಾವುದೇ ರೀತಿಯಲ್ಲಿ ವಾಹನಗಳನ್ನು ತಡೆಯುವುದು ಅಥವಾ ಗಲಾಟೆ , ಶಾಂತಿ ಭಂಗಕ್ಕೆ ಪ್ರಯತ್ನಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ದುಬಾರಿ ದಂಡ ಹಾಗೂ ಅಪಘಾತವೆಸಗುವ ಚಾಲಕರಿಗೆ ಶಿಕ್ಷೆಯ ರೂಪದಲ್ಲಿ ಜೈಲಿಗಟ್ಟುವ ಕಠಿಣ ಕಾನೂನು ಜಾರಿಯಾದರೆ ಬಹುತೇಕ ಸಾರಿಗೆ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಕಾರ್ಮಿಕ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಅಪಘಾತಗಳನ್ನು ತಡೆಯಲು ಮತ್ತು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕೇಂದ್ರದ ಭೂ ಸಾರಿಗೆ ಇಲಾಖೆ ಕಠಿಣ ನಿರ್ಧಾರ ಹೊಂದಿದೆ. ಈಗಾಗಲೇ ಸರ್ವೋಚ್ಚ ನ್ಯಾಯಾಲಯ ಕೂಡ ಪರಿಸರ ಮಾಲಿನ್ಯ ಹಾಗೂ ರಸ್ತೆ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಚಾಲಕ ಸಮುದಾಯದಲ್ಲಿ ಶಿಸ್ತು ತರಲು ಇಂತಹ ಕಾಯ್ದೆ ಅನಿವಾರ್ಯ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿಗಿ ಬಂದೋಬಸ್ತ್:

ಕೆಲ ಸಂಘಟನೆಗಳು ಪ್ರತಿಭಟನಾ ರ್ಯಾ ಲಿ ನಡೆಸುವ ಹಿನ್ನೆಲೆಯಲ್ಲಿ ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಾರ್ವಜನಿಕರಿಗೆ ಅಡಚಣೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಕೆಎಸ್‌ಆರ್‌ಪಿ ಹಾಗೂ ಸಿಎಆರ್ ತುಕಡಿಗಳನ್ನು ಅಗತ್ಯವಿರುವ ಕಡೆ ಬಳಸಿಕೊಳ್ಳಲಾಗುವುದು ಎಂದು ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮೆಗರಿಕ್ ತಿಳಿಸಿದ್ದಾರೆ. ಲಾರಿ ಮಾಲೀಕರ ಸಂಘ ಇನ್ನು ಕೂಡ ಬಂದ್‌ಗೆ ಸಂಬಂಧಿಸಿದಂತೆ ಇನ್ನು ನಿರ್ಧಾರ ಕೈಗೊಂಡಿಲ್ಲವಾದರೂ ಬಹುತೇಕ ಸಾರ್ವಜನಿಕ ಸಮೂಹ ಸಾರಿಗೆ ವ್ಯವಸ್ಥೆ ನಾಳೆ ವ್ಯತ್ಯಯವಾಗುವ ಸಾಧ್ಯತೆ ಇದೆ.

* ಬಂದ್ ವೇಳೆ ಸರ್ಕಾರಿ ಸಾರಿಗೆ ಅವಲಂಬಿಸಬೇಡಿ
ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ರಾಜ್ಯ ರಸ್ತೆ ಸಾರಿಗೆ ಸುರಕ್ಷತೆ ಕಾಯ್ದೆ ವಿರೋಧಿಸಿ ನಾಳೆ ವಿವಿಧ ಕಾರ್ಮಿಕ ಸಂಘಟನೆ ಗಳು ಕರೆದಿರುವ ಅಖಿಲ ಭಾರತ ಬಂದ್‌ಗೆ ಸರ್ಕಾರ ಬೆಂಬಲ ನೀಡುವುದಿಲ್ಲ. ಸಾರ್ವಜನಿಕರು ಹೆಚ್ಚು ಸರ್ಕಾರಿ ವಾಹನಗಳನ್ನು ಅವಲಂಬಿಸಬಾರದೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ನಿಗಮಗಳ ಸಾರಿಗೆ ನೌಕರರು ನಾಳೆ ಬಂದ್ ನಡೆಸುವುದಾಗಿ ಈಗಾಗಲೇ ಮಾಹಿತಿ ನೀಡಿದ್ದಾರೆ.
ಸರ್ಕಾರ  ಇದಕ್ಕೆ  ಅಧಿಕೃತವಾಗಿ ಬೆಂಬಲಿಸುವುದಿಲ್ಲ. ಆದರೆ, ಸಾರಿಗೆ ವಾಹನ ರಸ್ತೆಗಿಳಿಯದ ಕಾರಣ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಬಗ್ಗೆ ಆಲೋಚನೆ ನಡೆಸಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಉಳಿವಿಗಾಗಿ ಕಾರ್ಮಿಕರು ಪ್ರತಿಭಟನೆ ಕೈಗೊಂಡಿದ್ದಾರೆ. ಬಂದ್‌ನಲ್ಲಿ ಭಾಗವಹಿಸುವ ನೌಕರರ ಮೇಲೆ ಶಿಸ್ತುಕ್ರಮ ಜರುಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಎಸ್ಮಾ ಕಾಯ್ದೆ ಜಾರಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. ದಕ್ಷಿಣ ಭಾರತ ಸಾರಿಗೆ ಸಚಿವರ ಸಭೆಯಲ್ಲಿ ನಾನು ಭಾಗವಹಿಸಿದಾಗ ನಮ್ಮ ಅಭಿಪ್ರಾಯ ತಿಳಿಸಿದ್ದೇನೆ. ಗೋವಾದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಾರಿಗೆ ಸಚಿವ ಗಡ್ಕರಿ ಅವರಿಗೆ ಮಸೂದೆಯಲ್ಲಿ ತಿದ್ದುಪಡಿ ಮಾಡಲು ಸಲಹೆ ಮಾಡಿದ್ದೆ. ಇದನ್ನು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ ಎಂದರು.  ಈಗಾಗಲೇ ಮುಂಗಡವಾಗಿ ಟಿಕೆಟ್ ಬುಕ್ ಮಾಡಿದವರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ.  ಬಂದ್‌ನಲ್ಲಿ ಹೆಚ್ಚಿನ ನೌಕರರು ಭಾಗವಹಿಸುತ್ತಿರುವುದ ರಿಂದ ಸಾರ್ವಜನಿಕರಿಗೆ ತೊಂದರೆಯಾದರೂ ಹೊಂದಿಕೊಂಡು ಹೋಗುವಂತೆ ಮನವಿ ಮಾಡಿದರು.
-ಕೃಪೆ: ಈ ಸಂಜೆ

Write A Comment