ಅಂತರಾಷ್ಟ್ರೀಯ

ನೇಪಾಳದಲ್ಲಿ ಕೊಳೆತ ಶವಗಳ ಮಧ್ಯೆ ಸಂಬಂಧಿಕರ ಆರ್ತನಾದ

Pinterest LinkedIn Tumblr

Nepal-Cries

ಕಠ್ಮಂಡು, ಏ.29- ಧರೆಗುರುಳಿದ ಕಟ್ಟಡಗಳ ಅವಶೇಷಗಳಡಿ ಕೊಳೆತು ನಾರುತ್ತಿರುವ ಶವಗಳು,  ಬಂಧು-ಬಳಗ ಕಳೆದುಕೊಂಡು ರೋಧಿಸುತ್ತಿರುವ ನಾಗರಿಕರು,  ಎಲ್ಲೆಡೆ ಆವರಿಸಿಕೊಂಡಿರುವ ದುರ್ವಾಸನೆಯಿಂದ ಉಂಟಾಗುತ್ತಿರುವ ಸಾಂಕ್ರಾಮಿಕ ರೋಗಗಳು, ಈ ಎಲ್ಲದರ ನಡುವೆ ಜೀವವನ್ನೇ ಪಣಕ್ಕಿಟ್ಟು  ಕಾರ್ಯಾಚರಣೆಯಲ್ಲಿ  ನಿರತರಾಗಿರುವ ವೀರಯೋಧರು. ಇದು ನೇಪಾಳದ ರಾಜಧಾನಿಯೂ ಸೇರಿದಂತೆ ಹಲವೆಡೆ ಕಂಡು ಬರುತ್ತಿರುವ ಮನಕಲಕುವ ದೃಶ್ಯಗಳು. ಈ ನಡುವೆ ತಮ್ಮವರನ್ನು ಕಳೆದುಕೊಂಡು ರೋಧಿಸುತ್ತಿರುವ ಕುಟುಂಬ

ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಕುಂಭದ್ರೋಣ ಮಳೆಯಿಂದ ರಕ್ಷಣಾ ಕಾರ್ಯಕ್ಕೆ ಭಾರಿ ಅಡ್ಡಿಯುಂಟಾಗಿದ್ದು, ಇದನ್ನು ಲೆಕ್ಕಸಿದೆ ಯೋಧರು ಅಹೋರಾತ್ರಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ನೀರು, ಆಹಾರ ಸಮಸ್ಯೆ  ಉಲ್ಬಣಿಸಿದ್ದು, ನಾಗರಿಕರು ಪರದಾಡುತ್ತಿದ್ದಾರೆ. ಸುಮಾರು 50 ಸಾವಿರ  ಗರ್ಭಿಣಿಯರು ಅತಂತ್ರರಾಗಿದ್ದು, ಸರ್ಕಾರಕ್ಕೆ ಹಾಗೂ ಸೇನೆಗೆ ದೊಡ್ಡ ತಲೆನೋವಾಗಿದೆ.  ನಲುಗಿದ ನೇಪಾಳವನ್ನು ಸಹಜ ಸ್ಥಿತಿಗೆ ತರಲು  ವೀರಯೋಧರು ಹೀರೋಗಳಾಗಿ ಶ್ರಮಿಸುತ್ತಿದ್ದಾರೆ.

ಗ್ರಾಮಸ್ಥರ ರಕ್ಷಣೆ:
ಗ್ರಾಮವೊಂದರಲ್ಲಿ ಸಿಲುಕಿಹಾಕಿಕೊಂಡಿದ್ದ ಸುಮಾರು 350 ಮಂದಿಯನ್ನು ಸೇನಾ ಪಡೆ ರಕ್ಷಿಸಿದೆ. ಈ ನಡುವೆ  10 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟ ಬಗ್ಗೆ ಶಂಕಿಸಲಾಗಿದ್ದು, ನಾಪತ್ತೆಯಾದವರ ಬಗ್ಗೆ ಇನ್ನು ಸುಳಿವೇ ಸಿಕ್ಕಿಲ್ಲ. ಕಾರ್ಯಾಚರಣೆ ಕೇವಲ ಶೆಹರ್(ನಗರ)ಗಳಲ್ಲಿ ಮಾತ್ರ ನಡೆಯುತ್ತಿದ್ದು, ಹಳ್ಳಿಗಳಲ್ಲಿ ಯಾವುದೇ ಪರ್ಯಾಯ ಕಾರ್ಯ ನಡೆಯುತ್ತಿಲ್ಲವೆಂದು ಸಂತ್ರಸ್ಥರು ದೂರಿದ್ದಾರೆ. ನಿನ್ನೆ ಮಧ್ಯಾಹ್ನದ ನಂತರ ಭೂ ಕಂಪಿಸಿದ ಅನುಭವ ಇಲ್ಲದ್ದರಿಂದ ನಾಗರಿಕರು ಸ್ವಲ್ಪ ಮಟ್ಟಿನ ನಿಟ್ಟುಸಿರುಬಿಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಭಾರತೀಯ ಸೇನಾ ಪಡೆಯಿಂದ ಸುಮಾರು 150 ಟನ್ ಔಷಧ, ಆಹಾರ ಧಾನ್ಯ ಪೂರೈಸಲಾಗುತ್ತಿದೆ.

ಬಾಲಕನ ರಕ್ಷಣೆ:
84 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಸಿಲುಕಿದ್ದ ಬಾಲಕನನ್ನು ಸೇನಾ ಪಡೆ ರಕ್ಷಿಸಿದೆ. ಮುಂದಿನ 10 ದಿನಗಳ ಕಾಲ ನಿರಂತರ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಸೇನಾ ಪಡೆ ಹಾಗೂ ಸರ್ಕಾರಕ್ಕೆ  ಭಾರೀ ಆತಂಕ ಉಂಟಾಗಿದೆ.  ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಕಾರ್ಯವನ್ನು ಖುದ್ದು ಪರಿಶೀಲಿಸುತ್ತಿದ್ದು, ಯುದ್ಧೋಪಾದಿಯಲ್ಲಿ ಕಾರ್ಯಚರಣೆ ನಡೆಸಬೇಕೆಂದು ಸೇನೆಗೆ ಕಟ್ಟಪ್ಪಣೆ ಮಾಡಿದ್ದಾರೆ. ಪ್ರಧಾನಿಯವರ ಈ  ಕ್ರಮಕ್ಕೆ ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ ಅಭಿನಂದನೆ ತಿಳಿಸಿದ್ದಾರಲ್ಲದೆ, ವಿಶ್ವದ ಬಹುತೇಕ ದೇಶಗಳು ಭಾರತೀಯ ಸೇನೆಯನ್ನು ಪ್ರಶಂಸಿಸಿವೆ.

-ಕೃಪೆ: ಈ ಸಂಜೆ

Write A Comment