ಕರ್ನಾಟಕ

ಹೊಸ ರಾಜಕೀಯ ಶಕ್ತಿ ಸೃಷ್ಟಿಗಾಗಿ ಅಭಿಯಾನ : ಯೋಗೇಂದ್ರ ಯಾದವ್

Pinterest LinkedIn Tumblr

yogendra-yadav

ಬೆಂಗಳೂರು: ಎಎಪಿ ಪಕ್ಷದ ಸಂಸ್ಥಾಪಕ ಸದಸ್ಯ ಯೋಗೇಂದ್ರ ಯಾದವ್, ಗುರಗಾಂವ್ ನಲ್ಲಿ ಸ್ವರಾಜ್ ಸಂವಾದ ಕಾರ್ಯಕ್ರಮ ಮಾಡಿದ ಬಳಿಕ ಈಗ ಅದನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಬೆಂಗಳೂರಿನ ವುಡ್ ರೋಡಿನ ಜೈನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ಜೊತೆಗೆ ನಾಡಿನ ಚಿಂತಕರಾದ ದೇವನೂರು ಮಹದೇವ, ಎಸ್ ಆರ್ ಹಿರೇಮಠ್, ಜಿ ಕೆ ಗೋವಿಂದರಾವ್, ಮರಳಸಿದ್ಧಪ್ಪ, ನಟರಾಜ್ ಹುಳಿಯಾರ್ ಹಾಗೂ ಮತ್ತಿತರ ನೂರಾರು ಸ್ವಯಂಸೇವಕರು ಭಾಗಿಯಾಗಿದ್ದರು. ಪರ್ಯಾಯ ರಾಜಕೀಯ ಚಿಂತನ ಮಂಥನವನ್ನು ನಡೆಸಲಾಯಿತು.

ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ತರಾಟೆಗೆ ತೆಗೆದುಕೊಂಡ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್ ಆರ್ ಹಿರೇಮಠ್, ಉದ್ದಿಮೆಗಳ ಓಲೈಕೆಗೆ ಸಮಾಜದ ಕೆಳಸ್ಥರದಲ್ಲಿ ಬದುಕುತ್ತಿರುವವರ ಬದುಕನ್ನು ಬಲಿ ತೆಗೆದುಕೊಳ್ಳಾಗುತ್ತಿದೆ ಎಂದು ದೂರಿದರು. ಇದಕ್ಕೆ ಕಾಂಗ್ರೆಸ್ ಕೂಡ ಅಷ್ಟೇ ಕಾರಣ. 1991 ರಲ್ಲಿ ಅವರು ರೂಪಿಸಿದ ಆರ್ಥಿಕ ನೀತಿಯೇ ಇದಕ್ಕೆ ಮೂಲ ಕಾರಣ. ನಾಡಿನ ಸಂಸ್ಕೃತಿ, ಬಾಂಧವ್ಯ, ಜನಸಮುದಾಯ ಇವರುಗಳನ್ನು ಒಳಗೊಂಡ ಸಮಾನತೆಯ ಆರ್ಥಿಕ ನೀತಿಯ ಅಗತ್ಯ ಇದೆ. ವಿದೇಶಿ ಆರ್ಥಿಕ ನೀತಿಗಳನ್ನು ಅನುಕರಿಸುವುದಲ್ಲ ಎಂದು ಗಾಂಧಿಯವರ ‘ಹಿಂದ್ ಸ್ವರಾಜ್’, ಅಂಬೇಡ್ಕರ್ ಅವರ ‘ ಆನ್ಹಿಲೇಶನ್ ಆಫ್ ಕ್ಯಾಸ್ಟ್’ ಮತ್ತು ಜಯಪ್ರಕಾಶ್ ನಾರಾಯಣ್ ಅವರ ‘ಪ್ರಿಸನ್ ಡೈರಿ’ ಇತ್ಯಾದಿ ಪುಸ್ತಕಗಳ ಚಿಂತನೆಗಳನ್ನು ಧಾರಾಳವಾಗಿ ಉದಾಹರಿಸಿ ಹೇಳಿದರು.

ಬೆಂಗಳೂರು ಎಂದರೆ ನನಗೆ ಮೊದಲು ಐಟಿ ನಗರ ಎಂದು ಹೊಳೆಯುವುದಿಲ್ಲ ಬದಲಾಗಿ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ಶಕ್ತಿಯ ನಗರವಾಗಿ ಕಾಣಿಸುತ್ತದೆ ಎಂದು ಮಾತು ಆರಂಭಿಸಿದ ಆಪ್ ನ ಉಚ್ಚಾಟಿತ ಮುಖಂಡ ಯೋಗೇಂದ್ರ ಯಾದವ್, ಯು ಆರ್ ಅನಂತಮೂರ್ತಿ ಮತ್ತು ಡಿ ಆರ್ ನಾಗರಾಜ್ ಅಂತಹ ಚಿಂತಕರ ಇಲ್ಲಿ ಸಾಂಸ್ಕೃತಿಕ, ರಾಜಕೀಯ ಚಳುವಳಿಗಳನ್ನು ಹುಟ್ಟುಹಾಕಿದವರು. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಕರ್ನಾಟಕದಿಂದಲೇ ಹುಟ್ಟಿದ ಸರ್ವೋದಯ ಪಕ್ಷ ದಲಿತ ಚಳವಳಿ ಮತ್ತು ರೈತ ಚಳವಳಿಯನ್ನು ಒಟ್ಟಿಗೆ ಕೊಂಡೊಯ್ದ ವಿಶಿಷ್ಟ ಚಳುವಳಿ. ಇದು ದೇಶದಲ್ಲಿ ಬೇರೆಲ್ಲೂ ಕಂಡುಬರುವುದಿಲ್ಲ. ಇದು ದೇಶಕ್ಕೇ ಮಾದರಿ ಎಂದು ಕೂಡ ಯೋಗೇಂದ್ರ ತಮ್ಮ ಭಾಷಣದಲ್ಲೂ ನುಡಿದರು.

ಎಎಪಿ ಪಕ್ಷ ಒಂದು ಚಳವಳಿಯಾಗಿ, ಒಂದು ಐಡಿಯಾ ಆಗಿ ರೂಪುಗೊಂಡಿದ್ದು. ಆದರೆ ಅದು ಏಕವ್ಯಕ್ತಿಯ ನಿರ್ಣಯಗಳಿಗೆ ಬಲಿಯಾಯಿತು ಎಂದು ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಪ್ರಹಾರ ಮಾಡಿದರು. ಏಕ ವ್ಯಕ್ತಿಯ ನಿರ್ಧಾರಗಳಿಗೆ ಪಕ್ಷದ ಆಂತರಿಕ ಪ್ರಜಾಪ್ರಭುತ್ವವನ್ನೇ ಬಲಿ ಕೊಡಲಾಯಿತು. ನಾವು ನಡೆಸುವ ಮುಂದಿನ ಚಳವಳಿಗಳು ವ್ಯಕ್ತಿಕೇಂದ್ರಿತವಾಗಿರಬಾರದು ಹಾಗು ಫೆಡೆರಲ್ ರಚನೆ ಇರಬೇಕು. ದೆಹಲಿಯಲ್ಲಿ ಕೂತು ಆಡಳಿತ ನಡೆಸುವುದು ಸರಿಯಲ್ಲ. ಪ್ರಾದೇಶಿಕ ಘಟಕಗಳು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಹೊಂದುವಂತಾಗಬೇಕು ಇವುಗಳು ಆಪ್ ಪಕ್ಷದಲ್ಲಿ ಇಲ್ಲವಾಗದೆ ಹೋಯಿತು ಎಂದರು ಯೋಗೇಂದ್ರ.

ಬರಹಗಾರ ಚಿಂತಕ ದೇವನೂರು ಮಹದೇವ ಮಾತನಾಡಿ ಇಲ್ಲಿನ ಆಂದೋಲನಗಳು ಚಳವಳಿಗಳು ದೆಹಲಿಯನ್ನು ತಲುಪಬೇಕು ಆದರೆ ರಾಜಕೀಯ ಶಕ್ತಿ ಪ್ರಾದೇಶಿಕವಾಗಿ ಬೆಳೆಯಬೇಕು ಎಂದು ಧ್ವನಿಗೂಡಿಸಿದರು.

ಈ ಕಾರ್ಯಕ್ರಮಕ್ಕೆ ಸ್ವಲ್ಪ ಭಿನ್ನಮತದ ರಾಗವಾಡಿದ ಚಿಂತಕ, ಬರಹಗಾರ ಮರಳಸಿದ್ಧಪ್ಪ, ಈ ಚಳುವಳಿ ಸಂಸ್ಕೃತಿ ಚಳುವಳಿಯಾಗಿ ರೂಪುಗೊಳ್ಳಲಿ, ರಾಜಕೀಯ ಆಕಾಂಕ್ಷೆ ಬೇಡ. ರಾಜಕೀರ ರೂಪ ಪಡೆದರೆ ಎಎಪಿ ಪಕ್ಷವಾದಂತೆಯೇ ಇದು ಕೂಡ ಆಗಬಹುದು ಎಂದರು.
(ಕ.ಪ್ರ)

Write A Comment