ಕರ್ನಾಟಕ

ಸಿನಿಮೀಯ ರೀತಿಯಲ್ಲಿ ಸಿಕ್ಕಿಬಿದ್ದ ಖತರ್ನಾಕ್ ರೌಡಿ ಸ್ಪಾಟ್ ನಾಗ

Pinterest LinkedIn Tumblr

spot-naga-Arrest

ಬೆಂಗಳೂರು, ಏ.23: ಪೊಲೀಸರ ಮೇಲೆ ಲಾಂಗ್ ಬೀಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ರೌಡಿ ಸ್ಪಾಟ್ ನಾಗನ ಕಾಲಿಗೆ ಗುಂಡು ಹಾರಿಸಿ ಸಿನಿಮೀಯ ರೀತಿಯಲ್ಲಿ ಆತನನ್ನು ಬಂಧಿಸಿರುವ ಘಟನೆ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸರ ಬಲೆಗೆ ಬಿದ್ದಿರುವ ಸ್ಪಾಟ್ ನಾಗ ಕಾಮಾಕ್ಷಿಪಾಳ್ಯ, ಬಸವೇಶ್ವರನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ರೌಡಿ ಚಟುವಟಿಕೆ ನಡೆಸುತ್ತಿದ್ದ. ಈತನ ವಿರುದ್ಧ ನಂದಿನಿಲೇಔಟ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದೆ. ಡಕಾಯಿತಿ, ದರೋಡೆ, ಮನೆಗಳ್ಳತನ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸ್ಪಾಟ್ ನಾಗನ ಬಂಧನಕ್ಕೆ ಕಾಮಾಕ್ಷಿಪಾಳ್ಯ, ಬಸವೇಶ್ವರನಗರ, ರಾಜಗೋಪಾಲನಗರ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದರು. ಖತರ್ನಾಕ್ ರೌಡಿಯಾಗಿರುವ ನಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ. ಇಂತಹ ರೌಡಿಯ ಮೇಲೆ ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ರಾಜಗೋಪಾಲನಗರ ಠಾಣೆ ಎಸ್‌ಐ ವಾಸೀಮ್ ಉಲ್ಲಾ ಮತ್ತವರ ತಂಡ ಯಶಸ್ವಿಯಾಗಿದೆ.

ಸ್ಪಾಟ್ ನಾಗ ರಾಜಗೋಪಾಲನಗರ ಠಾಣೆ ವ್ಯಾಪ್ತಿಯ ಕರೀಂಸಾಬ್ ಲೇಔಟ್ ಕೈಗಾರಿಕಾ ಪ್ರದೇಶದಲ್ಲಿ ಅಡಗಿ ಕುಳಿತಿದ್ದಾನೆ ಎಂಬ ಮಾಹಿತಿಯನ್ನಾಧರಿಸಿ ಇಂದು ಮುಂಜಾನೆ 1.30ರ ಸಮಯದಲ್ಲಿ ಎಸ್‌ಐ ವಾಸೀಮ್ ಉಲ್ಲಾ ಮತ್ತು ಅವರ ತಂಡ ಅಲ್ಲಿಗೆ ಧಾವಿಸಿ ದಾಳಿ ನಡೆಸಿತು.

ಸ್ಪಾಟ್ ನಾಗ ಇದ್ದ ಪ್ರದೇಶವನ್ನು ಸುತ್ತುವರೆದ ಪೊಲೀಸರು ಆತನಿಗೆ ಶರಣಾಗುವಂತೆ ಸೂಚಿಸಿದರು. ಆದರೆ ನಾಗ ತನ್ನ ಬಳಿಯಿದ್ದ ಲಾಂಗ್‌ನಿಂದ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ. ತಕ್ಷಣ ಎಚ್ಚೆತ್ತುಕೊಂಡ ಎಸ್‌ಐ ವಾಸೀಮ್ ಉಲ್ಲಾ ತಮ್ಮ ಬಳಿಯಿದ್ದ ರಿವಾಲ್ವರ್‌ನಿಂದ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ ನಂತರವೂ ದಾಳಿ ಮಾಡಲು ಮುಂದಾದಾಗ ನಾಗನ ಕಾಲಿಗೆ ಗುಂಡು ಹಾರಿಸಿ ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ನಾಗನನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿನಿಮೀಯ ರೀತಿಯಲ್ಲಿ ಸ್ಪಾಟ್ ನಾಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ರಾಜಗೋಪಾಲನಗರ ಠಾಣೆ ಪೊಲೀಸರ ಕಾರ್ಯ ವೈಖರಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಸ್ಪಾಟ್ ನಾಗನ ಮೇಲೆ ಗೂಂಡಾ ಕಾಯ್ದೆ ಜಾರಿಗೆ ಚಿಂತನೆ
ಬೆಂಗಳೂರು: ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ ಸ್ಪಾಟ್ ನಾಗನ ಮೇಲೆ ಗೂಂಡಾ ಕಾಯ್ದೆ ಜಾರಿಗೆ ತರಲು ಚಿಂತಿಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಈತ ತನ್ನ ಸಹಚರರೊಂದಿಗೆ ಸೇರಿ ಅಮಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗುತ್ತಿದ್ದನ್ನಲ್ಲದೆ ಅಮಾಯಕ ಹೆಣ್ಣು ಮಕ್ಕಳಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದನು. ಈತನಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರು ದೂರು ನೀಡಿಲ್ಲ. ಈ ಬಗ್ಗೆ ಸಹ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಈತನ ವಿರುದ್ಧ ಮಾಗಡಿ ರಸ್ತೆ, ವಿಜಯನಗರ, ಬಸವೇಶ್ವರನಗರ, ನಂದಿನಿಲೇಔಟ್, ರಾಜಗೋಪಾಲನಗರ ಪೊಲೀಸ್ ಠಾಣೆಗಳಲ್ಲಿ 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ಅವರು ತಿಳಿಸಿದರು. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ಸ್ಪಾಟ್ ನಾಗ ಸಹಚರರೊಂದಿಗೆ ಸೇರಿ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದ ಎಂದು ಅಲೋಕ್ ಕುಮಾರ್ ತಿಳಿಸಿದರು.

Write A Comment