ಕರ್ನಾಟಕ

ವ್ಯಕ್ತಿ ಮೇಲೆ ಹಲ್ಲೆ : ರೊಚ್ಚಿಗೆದ್ದ ಜನರಿಂದ ಟೋಲ್ ಧ್ವಂಸ

Pinterest LinkedIn Tumblr

Toll-Attack

ಬೆಂಗಳೂರು,ಏ.19: ಟೋಲ್ ನೀಡಲು ನಿರಾಕರಿಸಿದರೆಂದು ವ್ಯಕ್ತಿಯೊಬ್ಬರ ಮೇಲೆ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಸಾರ್ವಜನಿಕರು ಲ್ಯಾಮ್ಕೋ ಕಂಪೆನಿ ಮಾಲೀಕತ್ವದ ಟೋಲ್‌ನ್ನು ಧ್ವಂಸಗೊಳಿಸಿ, ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಉಂಟಾದ ಪ್ರಕ್ಷುದ್ಧ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಗರ ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಬೂದಿಗೆರೆ ಕ್ರಾಸ್ ಬಳಿ ಇಂದು ಬೆಳಗ್ಗೆ ನಡೆದಿದೆ.

ಜಂಗಮ ಕೋಟೆ ನಿವಾಸಿ ನಾರಾಯಣ ಸ್ವಾಮಿ ಎಂಬುವರು ತಮ್ಮ ಸಹೋದರ ಮಂಜುನಾಥ್ ಹಾಗೂ ಇನ್ನಿತರರೊಂದಿಗೆ ಬೂದಿಗೆರೆ ಕ್ರಾಸ್ ಬಳಿ ಇರುವ ಟೋಲ್ ಬಳಿ ಬಂದಾಗ ತಮ್ಮ ಬಳಿ ಪಾಸ್ ಇರುವುದಾಗಿ ಹೇಳಿ ಟೋಲ್ ಕಟ್ಟಲು ನಿರಾಕರಿಸಿದ್ದಾರೆ.

ಈ ಸಂದರ್ಭದಲ್ಲಿ ಟೋಲ್ ಸಿಬ್ಬಂದಿ ಮತ್ತು ಇವರ ನಡುವೆ ವಾಗ್ವಾದ ನಡೆದಿದೆ. ನಾರಾಯಣಸ್ವಾಮಿ ಸೋದರ ಮಂಜುನಾಥ್ ಅವರನ್ನು ಟೋಲ್ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಠಡಿಯೊಳಗೆ ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಈತನನ್ನು ಹೊಸಕೋಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿನ ವೈದ್ಯರು ಮಣಿಪಾಲ್ ಆಸ್ಪತ್ರೆಗೆ ಸೇರಿಸುವಂತೆ ಶಿಫಾರಸು ಮಾಡಿದ್ದಾರೆ. ಈ ಸುದ್ದಿ ಸುತ್ತಮುತ್ತಲ ಗ್ರಾಮದವರಿಗೆ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಟೋಲ್‌ನತ್ತ ಧಾವಿಸಿ ಟೋಲ್ ಸಿಬ್ಬಂದಿ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಕೆರಳಿದ ಸ್ಥಳೀಯರು ಟೋಲ್ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದರಲ್ಲದೆ ಟೋಲ್‌ಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡಸಿದ್ದಾರೆ. ಈ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಶಾಸಕರಾದ ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್ ಧಾವಿಸಿ ಪ್ರತಿಭಟನಾಕಾರರ ಮನವೊಲಿಸುವ ಯತ್ನ ನಡೆಸಿದ್ದಾರೆ. ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಟೋಲ್ ವಸೂಲಿ ಮೂಲಕ ಸಾರ್ವಜನಿಕರನ್ನು ಸುಲಿಗೆ ಮಾಡಲಾಗುತ್ತಿದೆ. ಅಮಾಯಕರ ಮೇಲೆ ದೌರ್ಜನ್ಯ ಮಾಡುತ್ತಿರುವ ಇಂಥ ಕಂಪೆನಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಪದೇ ಪದೇ ಇಂಥ ಘಟನೆಗಳು ಮರುಕಳಿಸುತ್ತಿವೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕಿದೆ ಎಂದು ಹೇಳಿದರು. ಲಾಮ್ಕೋ ಟೋಲ್ ಬಳಿ ಪ್ರಕ್ಷುಬ್ಧ ವಾತಾವರಣವಿದ್ದು, ಪರಿಸ್ಥಿತಿ ನಿಯಂತ್ರಿಸಲು ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

Write A Comment