ರಾಷ್ಟ್ರೀಯ

ಭೂ ಸ್ವಾಧೀನ ಕಾಯ್ದೆ ವಿರುದ್ಧ ರೈತರೊಂದಿಗೆ ರಾಹುಲ್ ಪ್ರತಿಭಟನೆ

Pinterest LinkedIn Tumblr

Rahul-with-Formers

ನವದೆಹಲಿ, ಏ.19: ಪ್ರಧಾನಿ ನರೇಂದ್ರ ಮೋದಿ ಅವರ ವಿವಾದಿತ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಮಸೂದೆ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸಾವಿರಾರು ಮಂದಿ ರೈತರು ರಾಜಧಾನಿ ದೆಹಲಿಯಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಭೂ ಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆ ತಂದಿರುವ ಕೇಂದ್ರ ಎನ್‌ಡಿಎ ಸರ್ಕಾರದ ವಿರುದ್ಧ ಆರಂಭದಿಂದಲೂ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಡೆಸಿಕೊಂಡು ಬಂದಿದ್ದ ಹೋರಾಟಕ್ಕೆ ಸುದೀರ್ಘ ರಜೆಯನ್ನು ಪೂರೈಸಿ ಮರಳಿದ ನಂತರ ಉಪಾಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿ ಇದೀಗ ತಾವು ಹೆಗಲು ಕೊಡುತ್ತಿದ್ದಾರೆ. ರೈತರಿಂದ ಭೂಮಿ ಖರೀದಿಗೆ ಈಗಿರುವ ಕಾನೂನುಗಳಿಗೆ ತಿದ್ದುಪಡಿ ತಂದು ಭೂ ಸ್ವಾಧೀನ ಕಾರ್ಯವನ್ನು ಸುಗಮಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಧೇಯಕಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಯತ್ನಗಳನ್ನು ನಡೆಸಿತ್ತು. ಮಸೂದೆಗೆ ಲೋಕಸಭೆಯಲ್ಲಿ ಅನುಮತಿ ದೊರೆತರೂ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹು ಮತವಿಲ್ಲದ ಕಾರಣ ವಿಧೇಯಕವನ್ನು ಮೇಲ್ಮನೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು ಅಸಾಧ್ಯ. ಹಾಗಾಗಿ ಈ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಮುಂದಾಗಿದೆ.

ಆದರೆ ವಿರೋಧ ಪಕ್ಷಗಳು ಇದನ್ನು ತೀವ್ರವಾಗಿ ವಿರೋಧಿಸಿವೆ. ಸದ್ಯ ಒಳಗೂ, ಹೊರಗೂ ಪ್ರತಿಭಟನೆಯನ್ನೂ ನಡೆಸಿವೆ. ಪ್ರಸ್ತುತ ಸುಗ್ರೀವಾಜ್ಞೆ ವಿರುದ್ಧ ಸಾವಿರಾರು ಮಂದಿ ರೈತರು ಬೀದಿಗಿಳಿದಿದ್ದು , ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಈ ರೈತ ಹೋರಾಟದ ನಾಯಕತ್ವ ವಹಿಸಿದ್ದಾರೆ. ಜೊತೆಗೆ ರೈತರ ಹೋರಾಟಕ್ಕೆ ಪುರಸ್ಕಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನಿಂದಾಗಿ ವರ್ಚಸ್ಸು ಕುಂದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮೋದಿ ಸರ್ಕಾರದ ಈ ಭೂ ಸ್ವಾಧೀನ ಕಾಯ್ದೆ ವಿರುದ್ಧದ ರೈತ ಹೋರಾಟ, ಪುನಃ ನಾಯಕನಾಗಿ ಪ್ರತಿಷ್ಠೆ ಗಳಿಸಿಕೊಳ್ಳಲು ಒಂದು ಸಾಧನವಾಗಿ ಪರಿಣಮಿಸಲಿದೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಈ ನೂತನ ಭೂ ಸ್ವಾಧೀನ ಕಾಯ್ದೆ ದೇಶದಲ್ಲಿನ ಮಿಲಿಯನ್ ಗಟ್ಟಲೆ ರೈತರಿಗೆ ಮಾರಕವಾಗಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಆದರೆ ಈ ಹೊಸ ಕಾಯ್ದೆ ರೈತರ ಕಲ್ಯಾಣಕ್ಕಾಗಿಯೇ ರೂಪಿಸಿರುವುದಾಗಿದೆ ಎಂಬ ವಾದ ಸರ್ಕಾರದ್ದಾಗಿದೆ.

ಸರ್ಕಾರದ ಈ ಕಾಯ್ದೆ ಕೈಗಾರಿಕೋದ್ಯಮಿಗಳ ಪರವಾಗಿದ್ದು , ರೈತರಿಗೆ ಇದರಿಂದ ಭಾರೀ ಹೊಡೆತ ಬೀಳಲಿದೆ ಎಂದು ರೈತ ಸಂಘಟನೆಗಳು ಪ್ರತಿಪಾದಿಸಿವೆ. ಪ್ರತಿಭಟನಾ ಮೆರವಣಿಗೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್, ದೇಶದ ಮೂಲೆ ಮೂಲೆಗಳಿಂದ ಬಂದಿರುವ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ರೈತರ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಪ್ರತಿಭಟನೆಗೂ ಮುನ್ನ ರಾಹುಲ್ ಗಾಂಧಿ ತಮ್ಮ ನಿವಾಸದಲ್ಲಿ ವಿವಿಧ ರೈತ ಸಂಘಟನೆಗಳ ನಾಯಕರ ಜೊತೆ ನಿನ್ನೆ ಮಾತುಕತೆ ನಡೆಸಿದ್ದರು. ಈ ಮಧ್ಯೆ ಮೋದಿ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆ ವಿರುದ್ಧ ಕಾಂಗ್ರೆಸ್, ಜಮೀನ್ ವಾಪ್ಸಿ ವೆಬ್‌ಸೈಟ್ ಒಂದನ್ನು ಆರಂಭಿಸಿದೆ.

Write A Comment