ಪಾವಗಡ, ಏ.2: ತಾಲೂಕಿನ ಪತಂಜಲಿ ನಗರದ ನಿವಾಸಿ ಗೌತಮಿ ಹತ್ಯೆ ಖಂಡಿಸಿ ಸ್ಥಳೀಯ ಜನರು ಸ್ವಯಂಪ್ರೇರಿತರಾಗಿ ಬಂದ್ ಆಚರಿಸುವ ಮೂಲಕ ಆಕೆಯ ಆತ್ಮಕ್ಕೆ ಶಾಂತಿಕೋರಿದರು. ರಾತ್ರಿ 11.30ರಲ್ಲಿ ಗೌತಮಿ ಶವವನ್ನು ಬೆಂಗಳೂರಿನಿಂದ ತಂದು ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಇಂದು ಮುಂಜಾನೆಯಿಂದ ಸ್ಥಳೀಯ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸಿದರು. ಅಲ್ಲದೆ, ಬೈಕ್‌ರ್ಯಾ ಲಿ ನಡೆಸಿ ಕೃತ್ಯವೆಸಗಿದ ಆರೋಪಿ ಅಟೆಂಡರ್ ಮಹೇಶ್‌ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಉನ್ನತ ವಿದ್ಯಾಭ್ಯಾಸದ ಕನಸು ಕಂಡಿದ್ದ ಗೌತಮಿ ಶವ ಕಂಡು ಮನೆ ಮುಂದೆ ಜಮಾಯಿಸಿದ್ದ ಸಾವಿರಾರು ಮಂದಿ ಕಣ್ಣೀರಿಡುತ್ತಾ ಗೋಳಾಡುತ್ತಿದ್ದರು. ಇಂತಹ ಘಟನೆ ಮರುಕಳಿಸದಂತೆ ಕಾಲೇಜಿನ ಆಡಳಿತ ಮಂಡಳಿ ಸೂಕ್ತ ಬಂದೋಬಸ್ತ್ ಕಲ್ಪಿಸುವುದರ ಜತೆಗೆ ವಿದ್ಯಾರ್ಥಿನಿಯರಿಗೂ ರಕ್ಷಣೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಂತಿಮ ದರ್ಶನ
ಇಂದು ಬೆಳಿಗ್ಗೆ ಶಾಸಕ ತಿಮ್ಮರಾಯಪ್ಪ, ಮಾಜಿ ಸಚಿವ ವೆಂಕಟರವಣಪ್ಪ, ಪುರಸಭೆ ಅಧ್ಯಕ್ಷ ಸುಧಾಕರ್‌ರೆಡ್ಡಿ, ಮಾಜಿ ಅಧ್ಯಕ್ಷ ಶಂಕರರೆಡ್ಡಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ತಿಮ್ಮರೆಡ್ಡಿ, ಡಾ.ಜಿ.ವೆಂಕಟರಾಮಯ್ಯ, ಪುರಸಭೆ ಸದಸ್ಯ ವಸಂತ್ ಸೇರಿದಂತೆ ಹಲವಾರು ಸ್ಥಳೀಯ ಮುಖಂಡರು ಗೌತಮಿಯ ಅಂತಿಮ ದರ್ಶನ ಪಡೆದು ಪೋಷಕರಿಗೆ ಸಾಂತ್ವನ ಹೇಳಿದರು. ಇಂದು ಮಧ್ಯಾಹ್ನ ಪಾವಗಡದಲ್ಲೇ ಗೌತಮಿ ಅಂತ್ಯ ಸಂಸ್ಕಾರ ನೆರವೇರಿತು. ಬೆಂಗಳೂರಿನಿಂದಲೂ ಗೌತಮಿ ಕಾಲೇಜಿನ ಸಹೋದ್ಯೋಗಿಗಳು, ಸ್ನೇಹಿತರು ಪಾವಗಡಕ್ಕೆ ಬಂದು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಒಟ್ಟಾರೆ ಪಾವಗಡದಲ್ಲಿ ನೀರವ ಮೌನ ಆವರಿಸಿದೆ. ಯಾರ ಮೊಗ ನೋಡಿದರೂ ತಮ್ಮ ಮನೆಯಲ್ಲೇ ಇಂತಹ ಘಟನೆ ನಡೆದಿದೆಯೇನೋ ಎಂಬಂತೆ ಭಾಸವಾಗಿದ್ದುದು ಕಂಡುಬಂತು.
ಗೌತಮಿ ಹತ್ಯೆ ಖಂಡಿಸಿ ಕಾಲೇಜು ಮುಂದೆ ಪ್ರತಿಭಟನೆ
ಕೆಆರ್ ಪುರ, ಏ.2: ವಿದ್ಯಾರ್ಥಿನಿ ಗೌತಮಿ ಹತ್ಯೆ ಖಂಡಿಸಿ ಎಬಿವಿಪಿ ಹಾಗೂ ಕರ್ನಾಟಕ ಜನಾಂದೋಲನ ಸೇನೆ ಕಾರ್ಯಕರ್ತರು ಪ್ರಗತಿ ಕಾಲೇಜಿನ ಮುಂದೆ ಜಮಾಯಿಸಿ ಇಂದು ಸಹ ಪ್ರತಿಭಟನೆ ನಡೆಸಿದರು. ಸಂಘಟನೆ ಕಾರ್ಯಕರ್ತರು ಕಾಲೇಜಿನ ನಾಮಫಲಕ ಹರಿದುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೆಜೆಎಸ್ ಸಂಘಟನೆ ರಾಜ್ಯಾಧ್ಯಕ್ಷ ಬೆಳ್ತೂರು ಪರಮೇಶ್ ಮಾತನಾಡಿ, ಕಾಲೇಜಿಗೆ ಪರವಾನಗಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕು. ಹತ್ಯೆಗೈದ ಆರೋಪಿಗೆ ರಿವಾಲ್ವರ್ ಎಲ್ಲಿಂದ ಬಂತು ಮತ್ತು ರಿವಾಲ್ವರ್ ಸರಬರಾಜು ಮಾಡಿದವರನ್ನು ಕೂಡ ಬಂಧಿಸಬೇಕು. ಇದೊಂದು ಗಂಭೀರ ಪ್ರಕರಣವೆಂದು ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಗೌತಮಿ ಕುಟುಂಬವರ್ಗಕ್ಕೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿದರು. ವಿದ್ಯಾರ್ಥಿಗಳ ಪೋಷಕರು ಕಾಲೇಜಿನ ಬಳಿ ಬಂದು ನೋಡಿಕೊಂಡು ಹಿಂದಿರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಒಳಗೆ ಯಾರನ್ನೂ ಬಿಡದಂತೆ ಬಂದೋಬಸ್ತ್ ಮಾಡಲಾಗಿತ್ತು. ಕಾಡುಗೋಡಿ ಇನ್ಸ್‌ಪೆಕ್ಟರ್ ಪ್ರದೀಪ್‌ಸಿಂಗ್ ಸೇರಿದಂತೆ 25 ಮಂದಿ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಬಿಗಿಭದ್ರತೆ ಕಲ್ಪಿಸಿದ್ದಾರೆ.