ಕರ್ನಾಟಕ

ತೊಗಲುಗೊಂಬೆಯಲ್ಲಿ ಕನಕನ ಬದುಕು

Pinterest LinkedIn Tumblr

pvec01apr15j kanaka

-ಈರಪ್ಪ ಹಳಕಟ್ಟಿ
ಬೆಂಗಳೂರು: ಕರ್ನಾಟಕದ ಭಕ್ತಿ ಪಂಥ ಮತ್ತು ಹರಿದಾಸ ಪರಂಪರೆಯ ಅಗ್ರಗಣ್ಯರಲ್ಲಿ ಒಬ್ಬರಾದ ಕನಕದಾಸರ ಸಮಗ್ರ ಜೀವನ ಶೀಘ್ರದಲ್ಲಿಯೇ ತೊಗಲು ಗೊಂಬೆ ಆಟದಲ್ಲಿ ಪ್ರದರ್ಶನಗೊಳ್ಳಲಿದೆ.

ನೆಲಮೂಲದ ಬಹುಮುಖ ಪ್ರತಿಭಾ ಸಂಪನ್ನನನ್ನು ವಿವಿಧ ಮಾಧ್ಯಮಗಳ ಮೂಲಕ ಇಡೀ ವಿಶ್ವಕ್ಕೆ ಪರಿಚಯಿಸುವ ಉದ್ದೇಶವಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ‘ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ’ವೇ ಈ ‘ಕನಕ ಗೊಂಬೆಯಾಟ’ದ ಹಿಂದಿನ ಸೂತ್ರಧಾರ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನೀಡಿದ ವಿಶೇಷ ಅನುದಾನ ವನ್ನು ಬಳಸಿಕೊಂಡು ಕೇಂದ್ರವು ಕಳೆದ ವರ್ಷದ ಜೂನ್‌ನಲ್ಲಿ ₨ 8 ಲಕ್ಷ ವೆಚ್ಚದ ‘ಕನಕ ಗೊಂಬೆಯಾಟ’ ನಿರ್ಮಾಣಕ್ಕೆ ಚಾಲನೆ ನೀಡಿತ್ತು.

ಮಾರ್ಗದರ್ಶನದಲ್ಲಿ ಸಿಂಧನೂರಿನ `ಮನುಕುಲ ಆಶ್ರಮ ಟ್ರಸ್ಟ್‌ ಸಹಕಾರದಿಂದ ಸಿದ್ಧಗೊಂಡಿರುವ ಈ ಆಟದ ನಿರ್ದೇಶನದ ಹೊಣೆಯನ್ನು ಬಿ.ವಿ.ಮಲ್ಲಿಕಾರ್ಜುನ ಹೊತ್ತಿದ್ದಾರೆ.

90 ನಿಮಿಷಗಳ ಅವಧಿಯ ಈ ಗೊಂಬೆಯಾಟದಲ್ಲಿ  16ನೇ ಶತಮಾನದಲ್ಲಿ ಬಾಳಿದ ಕನಕದಾಸರ ಹುಟ್ಟು, ಬೆಳವಣಿಗೆ, ಸಾಧನೆ ಮತ್ತು ಸಂದೇಶವನ್ನು 9 ದೃಶ್ಯಗಳಲ್ಲಿ ಹಿಡಿದಿಡಲಾಗಿದೆ.ಸಂಗೀತಪ್ರಧಾನವಾದ ಈ ಗೊಂಬೆಯಾಟದ ರೂಪಕಕ್ಕೆ ವಿದ್ವಾಂಸ ನಿಸರ್ಗ ಪ್ರಿಯ ಮತ್ತು ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಅವರು ಜತೆಗೂಡಿ ಸಾಹಿತ್ಯ ರಚಿಸಿದ್ದಾರೆ.

‘ಕನಕ ಗೊಂಬೆಯಾಟ’ದಲ್ಲಿ ದೃಶ್ಯ ರೂಪಕಕ್ಕೆ ಪೂರಕವಾಗಿ ಕನಕದಾಸರ ಪ್ರಮುಖ ಕೀರ್ತನೆಗಳ ಪೈಕಿ ಆಯ್ದ 16 ಕೀರ್ತನೆಗಳನ್ನು ಬಳಸಿಕೊಳ್ಳಲಾಗಿದೆ. ಅವುಗಳಿಗೆ ಕಲಾವಿದರಾದ ರವೀಂದ್ರ ಸೊರಗಾವಿ, ಪ್ರಭುರಾವ್ ಸೊನ್ನ, ವೆಂಕಟೇಶ ಆಲ್ಕೋಡ್ ಮತ್ತು ಶಿವಾನಂದ ಹೇರೂರು ಅವರು ಸಂಗೀತ ಸಂಯೋಜಿಸಿ ಹಾಡಿದ್ದಾರೆ.

ಕನಕದಾಸ, ವ್ಯಾಸರಾಯರು, ಪುರಂದರ ದಾಸರು, ತಾತಾಚಾರ್ಯ, ಪಂಡಿತರು, ಅನುಯಾಯಿಗಳು,  ಸೂತ್ರಧಾರರು… ಹೀಗೆ ಗೊಂಬೆಯಾಟಕ್ಕೆ ಅಗತ್ಯವಾದ ಸುಮಾರು 80 ಪಾತ್ರಗಳ ಗೊಂಬೆಗಳು ಈಗಾಗಲೇ ಸಿಂಧನೂರಿನಲ್ಲಿ ಸಿದ್ಧವಾಗಿದ್ದು, 25 ಕಲಾವಿದರು ಸದ್ಯ ತಾಲೀಮಿನಲ್ಲಿ ನಿರತರಾಗಿದ್ದಾರೆ.

‘ಕನಕ ಗೊಂಬೆಯಾಟ’ದ ಮೊದಲ ಪ್ರದರ್ಶನವು ಆಯ್ದ ಆಹ್ವಾನಿತ ತೊಗಲು ಗೊಂಬೆಯಾಟದ  ತಜ್ಞರ ಸಮ್ಮುಖದಲ್ಲಿ ಏಪ್ರಿಲ್‌ 7ರಂದು ನಯನ ಸಭಾಂಗಣದಲ್ಲಿ ನಡೆಯಲಿದೆ. ಈ ವಿಶೇಷ ಗೊಂಬೆಯಾಟವನ್ನು ಮುಂಚೂಣಿಗೆ ತರುವುದಕ್ಕಾಗಿ ಕೇಂದ್ರವೇ ರಾಜ್ಯದ ವಿವಿಧೆಡೆ ನಾಲ್ಕು ಪ್ರದರ್ಶನಗಳಿಗಾಗಿ ಆರ್ಥಿಕ ನೆರವು ನೀಡಲು ಉದ್ದೇಶಿಸಿದೆ.

ತೊಗಲು ಗೊಂಬೆಯಾಟದ ಹಿರಿಯ ಕಲಾವಿದ, ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಬೆಳಗಲ್‌ ವೀರಣ್ಣ ಅವರ
ವಿವಿಧ ಮಾಧ್ಯಮಗಳ ಮೂಲಕ ಕನಕದಾಸರನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಪ್ರಯತ್ನದ ಭಾಗವಾಗಿ ಈ ಗೊಂಬೆಯಾಟ ಸಿದ್ಧಪಡಿಸಲಾಗಿದೆ.
-ಕೆ.ಎ.ದಯಾನಂದ, ಕೇಂದ್ರದ ಅಧ್ಯಕ್ಷ

Write A Comment