ಮನೋರಂಜನೆ

ಸಡಿಲ ಅಡಿಪಾಯದ ಚಿತ್ರ ‘ಕಟ್ಟೆ’

Pinterest LinkedIn Tumblr

pvec04aprsKATTE(2)

 –ಆನಂದತೀರ್ಥ ಪ್ಯಾಟಿ

ಚಿತ್ರ:
ಕಟ್ಟೆ
ತಾರಾಗಣ:
ನಾಗಶೇಖರ್, ಶ್ರಾವ್ಯ, ಚಂದನ್, ರುಕ್ಸಾರ್, ಅವಿನಾಶ್, ಶ್ರೀನಿವಾಸಮೂರ್ತಿ
ನಿರ್ದೇಶನ:
ಓಂಪ್ರಕಾಶ್ ರಾವ್
ನಿರ್ಮಾಪಕರು:
ಉಮೇಶ ರೆಡ್ಡಿ

‘ಬೆವರು ಸುರಿಸಿ ಕೆಲಸ ಮಾಡು’ ಎಂದು ಬುದ್ಧಿವಾದ ಹೇಳಿದರೂ ಕೇಳದ ಮಗನಿಗೆ ಏನು ಮಾಡಬೇಕು? ರೈಲು ನಿಲ್ದಾಣದಲ್ಲಿ ಬಾವುಟ ಬೀಸುವ ಅಪ್ಪ, ರೈಲಿಗೆ ತಲೆ ಕೊಟ್ಟು ತನ್ನ ಬದುಕನ್ನು ಅಂತ್ಯಗೊಳಿಸಿಕೊಳ್ಳಬೇಕು! ಎಷ್ಟು ಬುದ್ಧಿ ಹೇಳಿದರೂ ಕೇಳದ ಮಗ, ಇಂಥ ಭೀಕರ ಘಟನೆಯಿಂದ ಬದಲಾಗಬೇಕು. ಅಲ್ಲಿಗೆ ಎಲ್ಲವೂ ‘ಶುಭಂ’. ನಾಯಕನನ್ನು ವೈಭವೀಕರಿಸುವ ಬದಲಿಗೆ, ಆತನೂ ಒಬ್ಬ ಸಾಮಾನ್ಯ ಯುವಕ ಎಂದು ತೋರಿಸಲು ನಿರ್ದೇಶಕ ಓಂಪ್ರಕಾಶ್ ರಾವ್ ಬೇರೆ ದಾರಿ ಹಿಡಿದಿದ್ದಾರೆ. ಹೀಗಾಗಿ ‘ಕಟ್ಟೆ’ ಸಿನಿಮಾ ಸಾಮಾನ್ಯ ಎಂಬ ಪರಿಧಿಯಿಂದ ಆಚೆ ಹೋಗುವುದೇ ಇಲ್ಲ.

ಇದು ತಮಿಳಿನ ‘ಕೇಡಿ ಬಿಲ್ಲಾ ಕಿಲಾಡಿ ರಂಗ’ ಚಿತ್ರದ ಕನ್ನಡ ಅವತಾರ. ಶ್ರೀರಂಗಪಟ್ಟಣದ ಸುತ್ತಮುತ್ತ ಚಿತ್ರಿಸಿ, ಕನ್ನಡದ ‘ನೇಟಿವಿಟಿ’ಗೆ ಒಗ್ಗಿಸಲಾಗಿದೆ. ರಾಜಕೀಯ ಮುಖಂಡನ ಆಶ್ರಯದಲ್ಲಿರುವ ಇಬ್ಬರು ಯುವಕರಿಗೆ ತಾವೂ ರಾಜಕಾರಣ ಮಾಡಿ, ಮಂತ್ರಿಯಾಗುವ ಆಸೆ. ಆದರೆ ಪುರಸಭೆ ಚುನಾವಣೆಯನ್ನು ಗೆಲ್ಲುವ ತಾಕತ್ತೂ ಅವರಲ್ಲಿಲ್ಲ. ಅಪ್ಪ–ಅಮ್ಮ ಹೇಳುವ ಬುದ್ಧಿಮಾತನ್ನು ಉಡಾಫೆಯಿಂದ ನೋಡುವ ಬಿಸಿರಕ್ತದ ಈ ಯುವಕರು, ಚುನಾವಣೆಯಲ್ಲಿ ಸೋತ ಬಳಿಕವೂ ಬುದ್ಧಿ ಕಲಿಯುವುದಿಲ್ಲ. ಹಾಗಿದ್ದವರು ಬದಲಾಗುವುದು ಹೇಗೆ? ಅದಕ್ಕೆಂದು ನಿರ್ದೇಶಕರು ಅಳವಡಿಸಿರುವ ತಿರುವುಗಳು ನೀರಸವಾಗಿವೆ.

ಸೋಮಾರಿ ಕಟ್ಟೆಯೊಂದರ ಮೇಲೆ ಕುಳಿತು ಟೈಂಪಾಸ್ ಮಾಡುವ ಪಡ್ಡೆಗಳ ಸಿನಿಮಾ ಇದಾಗಿರುವುದರಿಂದ, ಕಾಮಿಡಿಗೆ ಸಾಕಷ್ಟು ಅವಕಾಶವಿತ್ತು. ಮಗನ ಒಳಿತನ್ನೇ ಬಯಸುವ ತಂದೆಯ ಕಥೆ ಇರುವುದರಿಂದ ಭಾವನೆಗಳಿಗೂ ಜಾಗ ಕೊಡಬಹುದಿತ್ತು. ಎರಡು ಜೋಡಿ ಪ್ರೇಮಿಗಳ ಕಥೆ ಒಳಗೊಂಡಿರುವುದರಿಂದ ಸಿನಿಮಾ ರೊಮ್ಯಾಂಟಿಕ್ ಕೂಡ ಆಗಬಹುದಿತ್ತು. ಆದರೆ ಇವೆಲ್ಲವೂ ಸೇರಿಕೊಂಡು ‘ಕಟ್ಟೆ’ ಕಲಸುಮೇಲೋಗರದಂತಾಗಿದೆ. ಕ್ಲೈಮ್ಯಾಕ್ಸ್ ಹೊರತುಪಡಿಸಿದರೆ ಗಮನ ಸೆಳೆಯುವುದು ಏನೂ ಇಲ್ಲ. ನಾಯಕ ನಾಗಶೇಖರ್‌ ಅವರಿಗಿಂತ ಓಂಪ್ರಕಾಶ್ ರಾವ್ ಅಭಿನಯವೇ ಹೆಚ್ಚು ಚಪ್ಪಾಳೆ ಗಿಟ್ಟಿಸುತ್ತದೆ. ಶ್ರಾವ್ಯ – ಚಂದನ್‌ ಪಾತ್ರಗಳು ದುರ್ಬಲವಾಗಿವೆ. ಸೀಮಿತ ಅವಕಾಶದಲ್ಲಿ ಶ್ರೀನಿವಾಸಮೂರ್ತಿ, ಅವಿನಾಶ್ ಉತ್ತಮ ಅಭಿನಯ ನೀಡಿದ್ದಾರೆ.

ನಿಧಾನಗತಿಯ ಸಿನಿಮಾ, ಒಮ್ಮೊಮ್ಮೆ ನಿಂತಲ್ಲೇ ನಿಂತು ಬಿಡುತ್ತದೆ. ಇಬ್ಬರು ನಾಯಕರು, ಅವರಿಗೆ ಇಬ್ಬರು ನಾಯಕಿಯರು ಇರುವುದರಿಂದ ಆಗಾಗ್ಗೆ ಸಿನಿಮಾ ಎಲ್ಲೆಲ್ಲೋ ಪಕ್ಕಕ್ಕೆ ಹೋಗಿಬಿಡುತ್ತದೆ. ನಿರೂಪಣೆಯಲ್ಲಿ ನಿರ್ದೇಶಕರು ಇನ್ನೊಂದಷ್ಟು ಬಿಗಿಯಾಗಿದ್ದರೆ, ಚಿತ್ರಕ್ಕೊಂದು ಚೌಕಟ್ಟು ಕಟ್ಟಬಹುದಿತ್ತು.

ಶಂಕರನಾಗ್‌ ನಿರ್ದೇಶನದ ‘ಮಾಲ್ಗುಡಿ ಡೇಸ್‌’ ನೆನಪಿನಲ್ಲಿ ಸ್ಥಾಪಿಸಿದ ‘ಮಾಲ್ಗುಡಿ ಟೀ ಅಂಗಡಿ’ ಮತ್ತು ಅದರ ಪಕ್ಕದಲ್ಲಿರುವ ಒಂದು ಕಟ್ಟೆ– ಇವೆರಡೂ ಚಿತ್ರದ ಪಾತ್ರಗಳು ಎಂಬಂತಿವೆ. ಪ್ರೀತಿ, ಪ್ರೇಮ, ಬಾಂಧವ್ಯ, ಜವಾಬ್ದಾರಿ ಪ್ರತಿಬಿಂಬಿಸುವ ಆರೆಂಟು ಪಾತ್ರಗಳಿದ್ದರೂ, ಯಾವುದೂ ಮುಖ್ಯವೆನ್ನುವಂತಿಲ್ಲ. ಫೋಕಸ್ ಇಲ್ಲದ ಟಾರ್ಚ್‌ ಬೆಳಕಿನಂತೆ ಭಾಸವಾಗುವ ‘ಕಟ್ಟೆ’ ಸಿನಿಮಾ, ಹಲವು ದೃಶ್ಯಗಳನ್ನು ತಾತ್ಕಾಲಿಕವಾಗಿ ಜೋಡಿಸಿದಂತೆ ಕಾಣುತ್ತದೆ.

Write A Comment