ಕರ್ನಾಟಕ

ಖಿನ್ನತೆಗೆ ಒಳಗಾದವರ ಮಾಹಿತಿ: ಗುಟ್ಟು ರಟ್ಟಾಯ್ತು

Pinterest LinkedIn Tumblr

kinate

ಹಿಂದೆಲ್ಲ ಖಿನ್ನತೆಗೆ ಒಳಗಾದವರ ಮಾಹಿತಿಯನ್ನು  ಗುಟ್ಟಾಗಿ ಇಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಹಲವು ಗಣ್ಯರು, ಅದರಲ್ಲೂ ಚಿತ್ರತಾರೆಯರು ತಮಗಾದ ಖಿನ್ನತೆಯ ಅನುಭವ, ಅದರಿಂದ ಹೊರಬಂದ ಬಗೆಯನ್ನು ಖುದ್ದಾಗಿ ಬಹಿರಂಗಪಡಿಸುತ್ತಿದ್ದಾರೆ. ಹೀಗೆ ಬದುಕಿನ ಯಾವುದಾದರೂ ಒಂದು ಹಂತದಲ್ಲಿ ಖಿನ್ನತೆಗೆ ಒಳಗಾಗಿ ಕೊನೆಗೂ ಅದರಿಂದ ಹೊರಬರಲಾಗದೇ ಹೋದವರು ಮತ್ತು ಅಚಲ ಮನೋಸ್ಥೈರ್ಯದಿಂದ ಆ ತ್ರಾಸದಾಯಕ ದಿನಗಳನ್ನು ದಿಟ್ಟವಾಗಿ ಎದುರಿಸಿ ಗೆದ್ದುಬಂದ ಕೆಲವು ಪ್ರಮುಖರ ವಿವರ ಇಲ್ಲಿದೆ:

ಲೇಡಿ ಗಾಗ: ಜನರ ಗಮನ ಸೆಳೆಯುವ ಅತ್ಯಂತ ನಾಟ ಕೀಯ ಗಿಮಿಕ್‌ಗಳಿಗೆ ಹೆಸರಾದ ಪಾಪ್‌ ತಾರೆ ಲೇಡಿ ಗಾಗ. ಹೀಗಿದ್ದರೂ ತಮ್ಮನ್ನು ಆಗಾಗ ತೀವ್ರ ಒಂಟಿತನ ಕಾಡುತ್ತದೆ, ಅದರಿಂದ ಹೊರಬರಲು ಜನಜಂಗುಳಿಯ ನಡುವೆ ಇದ್ದಾಗ ವಿವಿಧ ಬಗೆಯ ಹುಚ್ಚಾಟಗಳಿಗೆ ಮೊರೆ ಹೋಗುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಸಂತೋಷವಾಗಿರಲು ಹಲವು ಕಾರಣಗಳು ತಮಗಿದ್ದರೂ, ಕಾರಣವೇ ಇಲ್ಲದೆ ಆಗಾಗ  ಹತಾಶ ಸ್ಥಿತಿ ತಲುಪುತ್ತೇನೆ’ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಜಿಯಾ ಖಾನ್‌: ಖಿನ್ನತೆಯ ವಿರುದ್ಧ ಹೋರಾಡಲಾಗದೆ ಪ್ರಾಣವನ್ನೇ ಬಲಿಗೊಟ್ಟವರು ಬಾಲಿವುಡ್‌ ನಟಿ ಜಿಯಾ ಖಾನ್‌. ಚಿತ್ರರಂಗದಲ್ಲಿನ ವೈಫಲ್ಯ ಮತ್ತು ವೈಯಕ್ತಿಕ ಸಂಬಂಧಗಳಲ್ಲಿನ ಬಿರುಕು ಅವರನ್ನು ಖಿನ್ನತೆಗೆ ದೂಡಿತ್ತು. ಕಡೆಗೆ ಅವರು ಆತ್ಮಹತ್ಯೆಗೆ ಶರಣಾದರು.

ಸೆರೆನಾ ವಿಲಿಯಮ್‌್ಸ: ಹತ್ತಾರು ಬಾರಿ ಗ್ರಾನ್‌ ಸ್ಲ್ಯಾಮ್‌ ಪುರಸ್ಕೃತರಾಗಿರುವ ಈ ಟೆನಿಸ್‌ ತಾರೆ ಹಿಂದೊಮ್ಮೆ ಪದೇ ಪದೇ ತಮ್ಮ ಮನಸ್ಸಿಗಾದ ಗಾಯದಿಂದ ಹೊರಬರಲು ಹೆಣಗಾಡಿದ್ದರು.  2011ರ ಸಮಯದಲ್ಲಿ ಕಾಲಿಗಾದ ಶಸ್ತ್ರಚಿಕಿತ್ಸೆ, ಅದರಿಂದ ಕೆಲವು ಟೂರ್ನಿಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ಹೋದದ್ದು, ಸಹೋದರಿ ಯೆಟುಂಡೆ ಅವರ ಸಾವು ಎಲ್ಲವನ್ನೂ ಒಟ್ಟಿಗೇ ಅರಗಿಸಿಕೊಳ್ಳಲು ಅವರಿಗೆ ಆಗಿರಲಿಲ್ಲ.

ಆ ಸಂದರ್ಭದಲ್ಲಿ ‘ಇಡೀ ಪ್ರಪಂಚವೇ ನನ್ನನ್ನು ಸುತ್ತುವರಿಯುತ್ತಿರುವಂತೆ ಭಾಸವಾಗುತ್ತಿತ್ತು. ಒತ್ತಡ ಇಲ್ಲದಿದ್ದಾಗಷ್ಟೇ ಚೆನ್ನಾಗಿ ಆಡಲು ಸಾಧ್ಯ. ಹೀಗಾಗಿ ನಿಶ್ಚಿತವಾಗಿಯೂ ನನಗಾಗ ವಿಶ್ರಾಂತಿ ಬೇಕಿತ್ತು. ನನ್ನೊಳಗೆ ಸಂತೋಷ ಕಂಡುಕೊಳ್ಳಬೇಕಾದ ಅನಿವಾರ್ಯ ಇತ್ತು. ಅಲ್ಲಿಂದೀಚೆಗೆ ನಾನು ಗತದ ಬದುಕಿನತ್ತ ತಿರುಗಿ ನೋಡಲೇ ಇಲ್ಲ’ ಎಂದು ಅವರು ಹೇಳಿದ್ದಾರೆ.

ಬಜ್‌ ಆಲ್ಡ್ರಿನ್‌: ಅಮೆರಿಕದ ಖ್ಯಾತ ಗಗನಯಾತ್ರಿಗಳಲ್ಲಿ ಒಬ್ಬರಾದ ಇವರು 1969ರಲ್ಲಿ ಚಂದ್ರಯಾನ ಮಾಡಿ ಬಂದವರು. ನಂತರದ ದಿನಗಳಲ್ಲಿ ಖಿನ್ನತೆಗೆ ಈಡಾದ  ಮದ್ಯವ್ಯಸನಿ. ವಿಪರ್ಯಾಸವೆಂದರೆ, ಅದಕ್ಕಿಂತ ಮೊದಲು ಅವರು, ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು!

ಅಮಿತಾಭ್‌ ಬಚ್ಚನ್‌ : ಬಾಲಿವುಡ್‌ನ ಮೆಗಾಸ್ಟಾರ್‌ ಸಹ ಹಿಂದೊಮ್ಮೆ ಖಿನ್ನತೆಯ ಮನೆಯನ್ನು ಹೊಕ್ಕಿ ಬಂದವರೇ. 1996ರಲ್ಲಿ ಅವರು ಎಬಿಸಿಎಲ್‌ ಎಂಬ ಕಂಪೆನಿ ಸ್ಥಾಪಿಸಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದರು. ಆದರೆ ಅವರು ನಿರ್ಮಿಸಿದ ಚಿತ್ರಗಳು ಸರಣಿ ಸೋಲುಂಡಾಗ ದಿವಾಳಿಯಾದ ಅಮಿತಾಭ್‌ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಆದರೂ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡ ಅವರು ಕೆಲ ದಿನಗಳಲ್ಲೇ ಬದುಕನ್ನು ಕಟ್ಟಿಕೊಂಡು ಮತ್ತೆ ತಾರಾಪಟ್ಟಕ್ಕೇರಿದರು.

ದೀಪಿಕಾ ಮಾತಲ್ಲಿ…
2014ರ ಆರಂಭದಲ್ಲಿ ನನ್ನ ಕೆಲಸಕ್ಕಾಗಿ ಎಲ್ಲರಿಂದ ನಾನು ಪ್ರಶಂಸೆಗೆ ಒಳಗಾಗಿದ್ದ ದಿನಗಳು ಅವು. ಮುಂಜಾನೆ ಎದ್ದ ಕೂಡಲೇ ಹೊಟ್ಟೆಯಲ್ಲೆಲ್ಲ ಏನೋ ಸಂಕಟ, ಕಣ್ಣು ಕತ್ತಲಿಟ್ಟಂಥ ಅನುಭವ. ಯಾವುದರಲ್ಲೂ ಏಕಾಗ್ರತೆಯೇ ಸಾಧ್ಯವಾಗಲಿಲ್ಲ. ತಡೆಯುವುದು ಅಸಾಧ್ಯವಾದಾಗ ತಾಯಿಗೆ (ಉಜ್ಜಲಾ ಪಡುಕೋಣೆ) ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತೆ. ಬೆಂಗಳೂರಿನಿಂದ ನಾನಿದ್ದ ಮುಂಬೈಗೆ ಓಡೋಡಿ ಬಂದ ಅವರು ಕೆಲ ದಿನ ನನ್ನೊಂದಿಗಿದ್ದರು.

ನಾನಾಗ ಒತ್ತಡ, ಖಿನ್ನತೆಗೆ ಒಳಗಾಗಿದ್ದುದು ಆಕೆಗೆ ತಿಳಿಯಿತು. ಅವರ ಸ್ನೇಹಿತೆ ಹಾಗೂ ಮನಃಶಾಸ್ತ್ರಜ್ಞೆ ಅನ್ನಾ ಚಾಂಡಿ ಅವರಿಂದ ಆಪ್ತ ಸಮಾಲೋಚನೆ ಕೊಡಿಸಿದರು. ಅಷ್ಟು ಸಾಲದು ಎನಿಸಿದಾಗ ಬೆಂಗಳೂರಿನವರೇ ಆದ ಮನೋವೈದ್ಯ ಡಾ. ಶ್ಯಾಮ್‌ ಭಟ್‌ ಅವರಿಂದ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖಳಾದೆ.

ಕೆಲ ದಿನಗಳ ಬಳಿಕ ನನ್ನ ಸ್ನೇಹಿತನೊಬ್ಬ ಖಿನ್ನತೆಯಿಂದ ನರಳಿ ಆತ್ಮಹತ್ಯೆ ಮಾಡಿಕೊಂಡದ್ದು ನನ್ನ ಮನಸ್ಸು ಕಲಕಿತು. ಹೀಗಾಗಿ ಸಾಮಾನ್ಯವಾಗಿ ಯಾರೂ ಬಹಿರಂಗವಾಗಿ ಹೇಳಿಕೊಳ್ಳದ ಖಿನ್ನತೆ ಬಗ್ಗೆ ಜನಜಾಗೃತಿ ಮೂಡಿಸಲು ನಿರ್ಧರಿಸಿದೆ. ಖಿನ್ನತೆಯಿಂದ ಹೊರಬಂದ ಬಳಿಕ ನಾನು ಇನ್ನಷ್ಟು ಸಬಲಳಾಗಿದ್ದೇನೆ. ಔಷಧಿ ನಿಲ್ಲಿಸಿದ್ದೇನೆ.  ನನ್ನ ಜೀವನಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದೇನೆ. ಇದು ಖಿನ್ನತೆಗೆ ಒಳಗಾಗಿರುವ ಇತರರಿಗೆ ಮಾದರಿ ಆಗಬಹುದೆಂಬ ಭರವಸೆ ನನಗಿದೆ.

ಜಾಗೃತಿ ಬೇಕು
ಖಿನ್ನತೆಗೆ ಕಾರಣವಾಗುವ ಸಂಗತಿಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ 2020ರ ಹೊತ್ತಿಗೆ, ನಮ್ಮ ಅಸಾಮರ್ಥ್ಯಕ್ಕೆ ಕಾರಣವಾಗುವ ನಾಲ್ಕು ಪ್ರಮುಖ ಕಾರಣಗಳಲ್ಲಿ ಖಿನ್ನತೆಯೂ ಒಂದಾಗಲಿದೆ. ಅದರಲ್ಲೂ ಆತ್ಮಹತ್ಯೆ ಪ್ರಮಾಣ ಕ್ಷಿಪ್ರವಾಗಿ ಏರುತ್ತಿರುವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ಅಸಾಮರ್ಥ್ಯದ ಎರಡನೇ ಕಾರಣವಾಗಲಿದೆ.

ಏಕೆಂದರೆ ಖಿನ್ನತೆಗೆ ಒಳಗಾದವರಲ್ಲಿ ಶೇ 10ರಷ್ಟು ಮಂದಿ ಮಾತ್ರ ಚಿಕಿತ್ಸೆಗೆ ಹೋಗುತ್ತಾರೆ. ಹೀಗಾಗಿ ನಾನಾ ಸಮಸ್ಯೆಗಳನ್ನು ತಂದೊಡ್ಡುವ ಈ ಆರೋಗ್ಯ ಸಮಸ್ಯೆ ಬಗ್ಗೆ ನಾವು ಜರೂರಾಗಿ ಜಾಗೃತಿ ಮೂಡಿಸಬೇಕಾಗಿದೆ.
–ವಿಶ್ವ ಆರೋಗ್ಯ ಸಂಘಟನೆ

‘ಉತ್ಪ್ರೇಕ್ಷಿತ ವರದಿ!’
ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ಖಿನ್ನ ವ್ಯಕ್ತಿಗಳನ್ನು  ಹೊಂದಿರುವ ದೇಶ ಎಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) 2011ರಲ್ಲಿ ಪ್ರಕಟಿಸಿತ್ತು. ಇಲ್ಲಿನ ಶೇಕಡ 36ರಷ್ಟು ಮಂದಿಯಲ್ಲಿ ಖಿನ್ನತೆ ಇದ್ದು, ಜಗತ್ತಿನ ಯಾವ ದೇಶದ ಜನರೂ ಇಷ್ಟೊಂದು ಪ್ರಮಾಣದಲ್ಲಿ ಖಿನ್ನರಾಗಿಲ್ಲ ಎಂದು ತಿಳಿಸಿತ್ತು.

ಆದರೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್‌್ಸ) ‘ಇದೊಂದು ಉತ್ಪ್ರೇಕ್ಷಿತ ವರದಿ’ ಎಂದು ತಳ್ಳಿಹಾಕಿತ್ತು. ಭಾರತದಲ್ಲಿರುವ ಪ್ರಬಲ ಸಾಮಾಜಿಕ ಬೆಂಬಲ ಮತ್ತು ಕೌಟುಂಬಿಕ ವ್ಯವಸ್ಥೆಯಿಂದಾಗಿ ಖಿನ್ನತೆಗೆ ಒಳಗಾಗುವವರ ಸಂಖ್ಯೆ ಕಡಿಮೆ ಎಂದು ಸ್ಪಷ್ಟನೆ ನೀಡಿತ್ತು. ಇದಕ್ಕೆ ದನಿಗೂಡಿಸಿದ್ದ ಕೇಂದ್ರ ಆರೋಗ್ಯ ಸಚಿವಾಲಯ ಸಹ, ಭಾರತೀಯರು ಹೆಚ್ಚು ಸಂತಸದಿಂದ ಇರುವವರು ಎಂದು ಹೇಳಿತ್ತು.

ಆದರೆ, ಇಡೀ ಜಗತ್ತಿನ ರಾಜಕಾರಣಿಗಳಲ್ಲೆಲ್ಲ ಹೆಚ್ಚು ಖಿನ್ನತೆಗೆ ಒಳಗಾಗದೇ ಇರುವವರೆಂದರೆ ಭಾರತದ ರಾಜಕಾರಣಿಗಳು ಎಂಬ ಅಚ್ಚರಿದಾಯಕವಾದ ಮಾಹಿತಿಯನ್ನೂ ಡಬ್ಲ್ಯುಎಚ್‌ಒ ತನ್ನ ವರದಿಯಲ್ಲಿ ತಿಳಿಸಿತ್ತು. ಭಾರತದಲ್ಲಿ ರಾಜಕೀಯವು ಹಣ ಮತ್ತು ಅಧಿಕಾರದ ಬಲದಿಂದಾಗಿ  ಅತ್ಯಂತ ತೃಪ್ತಿದಾಯಕವಾದ ವೃತ್ತಿಯಾಗಿರುವುದೇ ಇದಕ್ಕೆ ಕಾರಣ ಎಂದು ಅದು ಅಭಿಪ್ರಾಯಪಟ್ಟಿತ್ತು.

Write A Comment