ಕರ್ನಾಟಕ

ಜನರ ಭಾವನೆ – ಹೆತ್ತವರ ನೋವಿಗೆ ಸ್ಪಂದಿಸಿ ಡಿ.ಕೆ.ರವಿ ಪ್ರಕರಣ ಸಿಬಿಐ ತನಿಖೆಗೆ ಸಿಎಂ ನಿರ್ಧಾರ

Pinterest LinkedIn Tumblr

siddu66

ಬೆಂಗಳೂರು,ಮಾ.23: ಐಎಎಸ್ ಅಧಿಕಾರಿ ರವಿ ಅವರ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಘೋಷಿಸಿದ್ದಾರೆ. ಜನರ ಭಾವನೆ ಹಾಗೂ ರವಿ ಹೆತ್ತವರ ನೋವಿಗೆ ಸ್ಪಂದಿಸಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ರವಿಯವರ ಸಾವಿನ ನಂತರ ಪ್ರಕರಣದ ತನಿಖೆ ಬಗ್ಗೆ ಸರ್ಕಾರ ಯಾವುದೇ ರೀತಿಯಲ್ಲೂ ಅಸಡ್ಡೆ ಮಾಡಿಲ್ಲ. ಸಿಬಿಐ ತನಿಖೆಗೆ ವಹಿಸುವುದಿಲ್ಲ ಎಂದು ಹೇಳಿರಲಿಲ್ಲ. ಆದರೆ ಪ್ರಾಥಮಿಕ ವರದಿ ಬಂದ ನಂತರ ಅದರ ಬಗ್ಗೆ ತೀರ್ಮಾನಿಸಲು ನಿರ್ಧರಿಸಿದ್ದೇವು ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ವಿಸ್ತೃತವಾಗಿ ಮಾತನಾಡಿದ ಅವರು, ದಕ್ಷ ಹಾಗೂ ನಿಷ್ಠಾವಂತ ರವಿ ಅವರ ಸಾವಿನ ಬಗ್ಗೆ ನಮಗೂ ನೋವಿದೆ.

ಪ್ರಕರಣ ನಡೆದ ತಕ್ಷಣವೇ ಸಿಬಿಐಗೆ ವಹಿಸಿರುವ ಯಾವುದೇ ಉದಾಹರಣೆಗಳಿಲ್ಲ. ನಮ್ಮ ರಾಜ್ಯದ ಪೊಲೀಸರ ಬಗ್ಗೆ ನಮಗೆ ನಂಬಿಕೆ ಇದೆ ಮತ್ತು ಸಿಬಿಐನಲ್ಲೂ ಇದೇ ಪೊಲೀಸ್ ಅಧಿಕಾರಿಗಳು ನಿಯುಕ್ತಿ ಮೇಲೆ ತೆರಳುತ್ತಾರೆ. ಆದ್ದರಿಂದ ಇಷ್ಟು ದಿನ ಕಾಯಲಾಯಿತೇ ಹೊರತು ಇದರಲ್ಲಿ ಬೇರ್ಯಾೆವುದೇ ಉದ್ದೇಶ ಇರಲಿಲ್ಲ ಎಂದು ಹೇಳಿದರು. ಇದೇ ವೇಳೆ ವಿಪಕ್ಷಗಳ ಆರೋಪವನ್ನು ಸಾರಸಗಾಟ ತಳ್ಳಿ ಹಾಕಿದ ಸಿಎಂ, ನೀವು ಅಧಿಕಾರದಲ್ಲಿದ್ದಾಗ ಯಾವ ತನಿಖೆಯನ್ನು ಕೂಡ ಸಿಬಿಐಗೆ ವಹಿಸಲಿಲ್ಲ. ಇಂದು ನೀವು ಮಾಡುತ್ತಿರುವ ಹೋರಾಟ ನಾಚಿಕೆಗೇಡು ಎಂದು ಟೀಕಿಸಿದರು.

ಇದಕ್ಕೆ ವಿಪಕ್ಷ ಶಾಸಕರು ಆಕ್ರೋಶ ವ್ಯಕ್ತಪಡಿಸಿ, ಏರುಧ್ವನಿಯಲ್ಲೇ ಸಿಎಂ ವಿರುದ್ಧ ಹರಿಹಾಯ್ದರು. ಕೊನೆಗೂ ಸಿಎಂ ಸಿದ್ದರಾಮಯ್ಯ ನಮ್ಮ ಜನರ ಭಾವನೆಗಳಿಗೆ ಬೆಲೆ ಕೊಟ್ಟು ಮತ್ತು ಸತ್ಯ ಹೊರಬರಬೇಕೆಂಬ ದೃಷ್ಟಿಯಿಂದ ಸರ್ಕಾರ ಸಿಬಿಐ ತನಿಖೆಗೆ ವಹಿಸಲು ತೀರ್ಮಾನಿಸಿರುವುದಾಗಿ ಪ್ರಕಟಿಸಿದರು. ಯಾವುದೇ ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆದಾಗ ತಕ್ಷಣವೇ ಯಾರೂ ಸಿಬಿಐಗೆ ವಹಿಸುವುದಿಲ್ಲ. ಸ್ಥಳೀಯರ ಪೊಲೀಸರ ತನಿಖೆ ನಂತರ ಪ್ರಕರಣದ ಗಂಭೀರತೆಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ಪೊಲೀಸರ ನೈತಿಕ ಸ್ಥೈರ್ಯಕ್ಕೆ ಹೊಡೆತ ಬೀಳುತ್ತದೆ. ಈ ದೃಷ್ಟಿಯಿಂದ ಸಿಐಡಿ ವರದಿಗಾಗಿ ಕಾಯುತ್ತಿದ್ದೆವು. ಆದರೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆ ವರದಿಯನ್ನು ಇಲ್ಲಿ ಮಂಡಿಸುವಂತಿಲ್ಲ.

ನಮಗೆ ಯಾವುದೇ ಅಧಿಕಾರಿಗಳ ರಕ್ಷಣೆ ಮಾಡುವ ಅಥವಾ ಮತ್ತೊಬ್ಬರಿಗೆ ಅನ್ಯಾಯ ಮಾಡುವ ಅಗತ್ಯವಿಲ್ಲ . ನಾವು ಹಾಗೆ ಮಾಡುವುದೂ ಇಲ್ಲ. ಯಾವುದೇ ಅಧಿಕಾರಿಗಳ ಸಾವಿನ ಸಂದರ್ಭ ಯಾರೂ ರಾಜಕಾರಣ ಮಾಡಬಾರದು. ಪ್ರತಿಪಕ್ಷಗಳೂ ಮಾಡಬಾರದು. ನಾವೂ ಮಾಡುವುದಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ನಾವು ಕೂಡ ಸಿಬಿಐ ತನಿಖೆಗೆ ಒತ್ತಾಯಿಸಿದ್ದೇವೆ. ಆದರೆ ಬಿಜೆಪಿ ಯಾವ ಪ್ರಕರಣವನ್ನೂ ಸಿಬಿಐಗೆ ವಹಿಸಲಿಲ್ಲ. ಸಿಬಿಐ ಎಂದರೆ ಕಾಂಗ್ರೆಸ್ ಕೈಗೊಂಬೆ. ಕೇಂದ್ರದ ಆಜ್ಞಾನಧಾರಕ ಎಂದೆಲ್ಲ ಅಂದು ಇದೇ ಬಿಜೆಪಿ ವ್ಯಂಗ್ಯ ಮಾಡುತ್ತಿತ್ತು. ಆದರೆ ಇಂದು ಬಿಜೆಪಿ, ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಡಿ.ಕೆ.ರವಿಯವರು ಒಬ್ಬ ದಕ್ಷ ಅಧಿಕಾರಿ. ಹಾಗೆಂದೇ ಅವರನ್ನು ವಾಣಿಜ್ಯ ತೆರಿಗೆ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಿಸಿದ್ದೆ. ಅವರ ಬಗ್ಗೆ ನನಗೆ ತುಂಬ ಗೌರವವಿದೆ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕಳೆದ ಒಂದು ವಾರದಿಂದ ನಡೆದಿದ್ದ ಹೋರಾಟಗಳು ಸದ್ಯ ತಣ್ಣಗಾಗುವ ಲಕ್ಷಣಗಳು ಕಂಡುಬಂದಿದೆ.

* ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧಕ್ಕೆ ಇಂದು ಪೊಲೀಸರ ಭಾರೀ ಬಿಗಿಭದ್ರತೆ

ಬೆಂಗಳೂರು, ಮಾ.23-ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಬಹುದಾದ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧಕ್ಕೆ ಇಂದು ಪೊಲೀಸರ ಭಾರೀ ಬಿಗಿಭದ್ರತೆ ಕಲ್ಪಿಸಲಾಗಿತ್ತು. ವಿಧಾನಸೌಧದ ಪೂರ್ವ-ಪಶ್ಚಿಮ ದ್ವಾರಗಳೂ ಸೇರಿದಂತೆ ನಾಲ್ಕೂ ದ್ವಾರಗಳ ಬಳಿ ಪೊಲೀಸರ ದಂಡೇ ನೆರೆದು ತಪಾಸಣೆ ನಡೆಸಿ ವಿಧಾನಸೌಧದೊಳಕ್ಕೆ ತೆರಳಲು ಅವಕಾಶ ನೀಡಲಾಗುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಕಾರುಗಳನ್ನು ಹೊರತುಪಡಿಸಿ ಶಾಸಕರ, ಹಿರಿಯ ಅಧಿಕಾರಿಗಳ, ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳು ಹಾಗೂ ವಿಧಾನಸೌಧದ ಸಿಬ್ಬಂದಿಗಳ ವಾಹನದ ತಪಾಸಣೆ ಹಾಗೂ ಗುರುತಿನ ಚೀಟಿ ಪರಿಶೀಲಿಸಿ ನಂತರ ಒಳಗೆ ಬಿಡಲಾಗುತ್ತಿತ್ತು. ಬೆಳಗ್ಗೆ 9 ರಿಂದಲೇ ಪ್ರತಿ ಗೇಟ್‌ನ ಬಳಿಯೂ ಒಬ್ಬ ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ತಪಾಸಣೆ ಕಾರ್ಯ ಆರಂಭಿಸಿದ್ದರು.

ಡಿ.ಕೆ.ರವಿ ಅವರ ಸಾವಿನ ಹಿನ್ನೆಲೆಯಲ್ಲಿ ಅವರ ತಾಯಿ ಗೌರಮ್ಮ, ತಂದೆ ಕರಿಯಪ್ಪ, ಸಹೋದರ ರಮೇಶ್, ಸಹೋದರಿ ಭಾರತಿ ಸೇರಿದಂತೆ ಸಂಬಂಧಿಕರು ವಿಧಾನಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದಾಗ ಉಂಟಾಗಿದ್ದ ಪರಿಸ್ಥಿತಿ ಹಿನ್ನೆಲೆಯಲ್ಲಿ ಇಂದು ಅಂತಹ ಯಾವುದೇ ಸನ್ನಿವೇಶ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಾರೂ ವಿಧಾನಸೌಧದ ಆವರಣಕ್ಕೆ ಪ್ರವೇಶಿಸದ ರೀತಿಯಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು.

Write A Comment