ಕರ್ನಾಟಕ

ವಂಚನೆ: ನಿವೃತ್ತ ಸೈನಿಕನ ಬಂಧನ

Pinterest LinkedIn Tumblr

pvec1jan15army-arrest

ಬೆಂಗಳೂರು: ದೈಹಿಕ ಸಾಮರ್ಥ್ಯ ಪ್ರಮಾಣ ಪತ್ರ (ಫಿಟ್‌ನೆಸ್ ಸರ್ಟಿ­ಫಿಕೇಟ್) ಕೊಡಿಸುವುದಾಗಿ ನಂಬಿಸಿ ಭಾರತೀಯ ಸೇನೆಗೆ ಸೇರಬಯಸುವ ಅಭ್ಯರ್ಥಿಗಳಿಂದ ಹಣ ಪಡೆದು ವಂಚಿ­ಸುತ್ತಿದ್ದ ನಿವೃತ್ತ ಸೈನಿಕ ಎನ್‌.ಸಿ.ಜನ (42) ಎಂಬಾತನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಜನ, 12 ವರ್ಷಗಳ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿದ್ದ. 2009ರಲ್ಲಿ ಸ್ವಯಂ ನಿವೃತ್ತಿ ಪಡೆದ ಆತ, ನಂತರ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ನಗರಕ್ಕೆ ಬಂದು ಕೋರಮಂಗಲದ ಆರನೇ ಬ್ಲಾಕ್‌ನಲ್ಲಿ ವಾಸ­ವಾ­ಗಿದ್ದ. ಸೇನಾ ಅಧಿಕಾರಿಗಳು ನೀಡಿದ ಸುಳಿವು ಆಧರಿಸಿ ಆರೋಪಿ­ಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಭಾರತೀಯ ಸೇನೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಕೆಲ ಅಭ್ಯರ್ಥಿಗಳಿಗೆ ವಿವೇಕನಗರದ ಪಯೊನಿಯರ್ ಕಾರ್ಪ್ಸ್‌್ ಟ್ರೈನಿಂಗ್ ಸೆಂಟರ್‌ನಲ್ಲಿ (ಪಿಸಿಟಿಸಿ) ಜ.28ರಂದು ಸಂದರ್ಶನ ನಿಗದಿಯಾಗಿತ್ತು. ಹೀಗಾಗಿ ಉತ್ತರಪ್ರದೇಶ, ಉತ್ತರಾಂಚಲ, ಜಾರ್ಖಂಡ್ ಹಾಗೂ ಬಿಹಾರ ಮೂಲದ ಅಭ್ಯರ್ಥಿಗಳು ಜ.27ರಂದು ನಗರಕ್ಕೆ ಬಂದಿದ್ದರು.

ಜ.28ರಂದು ಸಂದರ್ಶನ ನಡೆಯಲಿರುವ ವಿಷಯ ತಿಳಿದಿದ್ದ ಆರೋಪಿ, ಆನ್‌ಲೈನ್‌ ಮೂಲಕ  ಅಭ್ಯರ್ಥಿಗಳ ಅರ್ಜಿಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದ. ನಂತರ ಏಳು ಅಭ್ಯರ್ಥಿ­ಗಳಿಗೆ ಕರೆ ಮಾಡಿ, ‘ನಾನು ಸಹ ನಿವೃತ್ತ ಸೈನಿಕ. ಹೀಗಾಗಿ ಪಿಸಿಟಿಸಿಯ ಅಧಿಕಾರಿಗಳ ಪರಿಚಯವಿದೆ. ಅವರಿಗೆ ಹೇಳಿ ನಿಮ್ಮ ಕೆಲಸ ಮಾಡಿಸಿಕೊಡುತ್ತೇನೆ’ ಎಂದು ಹೇಳಿದ್ದ.

ಈ ಬಗ್ಗೆ ಮಾಹಿತಿ ಪಡೆದ ನಾಯಕ್‌ ಸುಬೇದಾರ್‌ ತ್ರಿಪಾಟಿ, ರಾಜೇಶ್‌ ಹಾಗೂ ಮೇಜರ್‌ ಯಾದವ್ ಅವರು ಕೋರಮಂಗಲ ಠಾಣೆಗೆ ದೂರು ಕೊಟ್ಟರು.
‘ಆರೋಪಿ ಕೆಲ ಅಭ್ಯರ್ಥಿಗಳಿಗೆ ತನ್ನ ವಿಸಿಟಿಂಗ್ ಕಾರ್ಡ್‌ ಕೊಟ್ಟಿದ್ದ. ಅದರ ಆಧಾರದ ಮೇಲೆ ಜ.28ರ ಬೆಳಿಗ್ಗೆ ಆತನ ಮನೆ ಮೇಲೆ ದಾಳಿ ನಡೆಸಿ ಬಂಧಿಸಲಾಯಿತು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

Write A Comment