ಕರ್ನಾಟಕ

ಸಿಎಂ ವಿರುದ್ಧ ಪ್ರಾಸಿಕ್ಯೂಶನ್ ಗೆ ಮನವಿ : ಇನ್ನೂ ಸಿಕ್ಕಿಲ್ಲ ಅವಕಾಶ

Pinterest LinkedIn Tumblr

Siddaramayya-Tention

ಬೆಂಗಳೂರು, ಜ.28: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಲು ಆಗಮಿಸುವ ವಕೀಲ ನಟರಾಜ್ ಶರ್ಮ ಅವರಿಗೆ ಕಳೆದ ಒಂದು ವಾರದಿಂದ ರಾಜಭವನ ಭೇಟಿಯ ಅವಕಾಶವನ್ನೇ ಕಲ್ಪಿಸಿಲ್ಲ. ಮತ್ತೆ ಒಂದು ವಾರಕಾಲ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ವ್ಯಾಖ್ಯಾನಿಸುತ್ತಿವೆ. ಬಿಡಿಎ ನಿರ್ಮಿಸಿರುವ ಅರ್ಕಾವತಿ ಬಡಾವಣೆ ಡಿ ನೋಟಿಫಿಕೇಷನ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿತರಾಗಿದ್ದು, ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಲು ನಟರಾಜ್‌ಶರ್ಮ ಕಳೆದ ಒಂದು ವಾರದಿಂದ ರಾಜ್ಯಪಾಲ ವಿ.ಆರ್.ವಾಲಾ ಅವರ ಭೇಟಿಗೆ ಸಮಯ ನಿಗದಿಪಡಿಸುವುದನ್ನೇ ಎದುರು ನೋಡುತ್ತಿದ್ದಾರೆ.

ಆದರೆ, ರಾಜಭವನ ಭೇಟಿಗೆ ಅವಕಾಶ ನೀಡುವುದನ್ನು ನಿರಾಕರಿಸಿಲ್ಲ. ಬದಲಿಗೆ ಭೇಟಿಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದೆ. ಯಾವಾಗ ರಾಜ್ಯಪಾಲರನ್ನು ಭೇಟಿ ಮಾಡಬಹುದು ಎಂಬುದನ್ನು ಕನಿಷ್ಟ ಒಂದು ಗಂಟೆ ಮುಂಚಿತವಾಗಿ ತಮ್ಮ ಗಮನಕ್ಕೆ ತರುವುದಾಗಿ ರಾಜಭವನದ ಮೂಲಗಳು ನಟರಾಜ್‌ಶರ್ಮ ಅವರಿಗೆ ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ವಿರುದ್ಧ ಮೊಕದ್ದಮೆ ದಾಖಲಿಸಲು ಎಲ್ಲ ರೀತಿಯ ದಾಖಲೆ ಪತ್ರಗಳೊಂದಿಗೆ ಸಜ್ಜಾಗಿ ರಾಜ್ಯಪಾಲರ ಅನುಮತಿಯನ್ನೇ ನಟರಾಜ್‌ಶರ್ಮ ಎದುರು ನೋಡುತ್ತಿದ್ದಾರೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಮುಖಾಮುಖಿಯಾಗುವ ಸನ್ನಿವೇಶ ಇದ್ದುದರಿಂದ ಅನುಮತಿ ಕೋರುವ ಅರ್ಜಿದಾರರಿಗೆ ಭೇಟಿ ನೀಡುವ ಅವಕಾಶ ಮುಂದೂಡಲಾಗಿತ್ತು.

ಗಣರಾಜ್ಯೋತ್ಸವ ಮುಗಿದಿದ್ದರೂ ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಬೇಕಾಗಿದೆ. ಆ ಸಂದರ್ಭದಲ್ಲಿ ರಾಜ್ಯಸರ್ಕಾರವನ್ನು ತಮ್ಮ ಸರ್ಕಾರ ಎಂದು ಸಮರ್ಥಿಸಿಕೊಂಡು ಭಾಷಣ ಮಾಡಬೇಕು. ಈ ಸಂದರ್ಭದಲ್ಲಿ ಮುಜುಗರದ ಸನ್ನಿವೇಶ ಉಂಟಾಗದಿರಲಿ ಎಂದು ರಾಜ್ಯಪಾಲರು ಭೇಟಿಯ ಅವಕಾಶವನ್ನೇ ಮುಂದೂಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ವ್ಯಾಖ್ಯಾನಿಸುತ್ತಿದ್ದಾರೆ. ಡಿ ನೋಟಿಫಿಕೇಷನ್ ವಿಚಾರದಲ್ಲಿ ನ್ಯಾಯಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ಡಿ ನೋಟಿಫಿಕೇಷನ್ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದು, ಮುಖ್ಯಮಂತ್ರಿ ಅಧೀನದಲ್ಲಿ ಬಿಡಿಎ ಬರುವುದರಿಂದ ಅವರ ಮೇಲೆ ಕೂಡ ಭ್ರಷ್ಟಾಚಾರದ ಆರೋಪವಿದೆ ಎಂಬುದು ಬಿಜೆಪಿಯ ಪ್ರತಿಪಾದನೆ.

ಇದರಿಂದ ನೇರವಾಗಿ ಕಾನೂನು ಹೋರಾಟ ನಡೆಸಲು ಮುಂದಾಗಿದ್ದ ಬಿಜೆಪಿ ಈಗ ಪರೋಕ್ಷ ಮಾರ್ಗವನ್ನು ಹಿಡಿದಿದೆ. ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡದಿದ್ದರೆ ಆಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ಬೇರೊಬ್ಬರ ಮೂಲಕ ಅರ್ಜಿ ಸಲ್ಲಿಸುವ ಜಾಣ್ಮೆಯನ್ನು ಬಿಜೆಪಿ ಪ್ರದರ್ಶಿಸಿದೆ.

ಒಂದು ವೇಳೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಿದ್ದರೂ ಪಕ್ಷಕ್ಕೆ ಮುಜುಗರವಾಗುವುದಿಲ್ಲ. ರಾಜಭವನವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಅಪವಾದದಿಂದ ಮುಕ್ತವಾದಂತಾಗುತ್ತದೆ ಎಂಬ ಉದ್ದೇಶ ಬಿಜೆಪಿಯದು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ದೂರುದಾರರಿಗೆ ಭೇಟಿ ನೀಡುವ ಅವಕಾಶ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

Write A Comment