ಕರ್ನಾಟಕ

ರಾಜೀನಾಮೆ ನೀಡಿರುವ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಮನವೊಲಿಸುವ ಸಿಎಂ ಯತ್ನ !

Pinterest LinkedIn Tumblr

satish-jarkiholi

ಬೆಂಗಳೂರು, ಜ.28: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡವಳಿಕೆಯಿಂದ ಬೇಸರಗೊಂಡು ಸಂಪುಟಕ್ಕೆ ರಾಜೀನಾಮೆ ನೀಡಿರುವ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿಯವರ ಆಹ್ವಾನದ ಮೇರೆಗೆ ಇಂದು ಸತೀಶ್ ಜಾರಕಿ ಹೊಳಿ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದು, ನಾಳೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಹಲವು ದಿನಗಳಿಂದ ಮುಖ್ಯಮಂತ್ರಿ ಅವರ ಮೇಲೆ ಮುನಿಸಿಕೊಂಡು ಮಾತುಕತೆ ಬಿಟ್ಟಿದ್ದ ಸತೀಶ್ ಜಾರಕಿಹೊಳಿ ನಿನ್ನೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದರು. ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಬೇಕಿರುವುದರಿಂದ ಸಚಿವ ಸ್ಥಾನದ ಜವಾಬ್ದಾರಿಯಿಂದ ಬಿಡುಗಡೆ ನೀಡಿ ಎಂದು ಪತ್ರದಲ್ಲಿ ಜಾರಕಿ ಹೊಳಿ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ಪತ್ರದ ಮಾದರಿ ತಾಂತ್ರಿಕವಾಗಿ ಅಂಗೀಕಾರಗೊಳ್ಳುವ ರೀತಿಯಲ್ಲಿ ಇಲ್ಲ. ಇದರಿಂದ ಸತೀಸ್ ಜಾರಕಿ ಹೊಳಿ ಮುಖ್ಯಮಂತ್ರಿಯವರನ್ನು ಬ್ಲಾಕ್‌ಮೇಲ್‌ಮಾಡುವ ಸಲುವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸತೀಶ್ ಜಾರಕಿಹೊಳಿ ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆಯಿಂದಲೂ ಪ್ರಯತ್ನ ನಡೆಸುತ್ತಿದ್ದಾರೆ. ದೂರವಾಣಿಯ ಮೂಲಕ ಜಾರಕಿ ಹೊಳಿ ಅವರನ್ನು ಸಂಪರ್ಕಿಸುವ ಮುಖ್ಯಮಂತ್ರಿಯುವರ ಪ್ರಯತ್ನ ಫಲ ನೀಡಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಜಾರಕಿ ಹೊಳಿ ಅವರ ಬಳಿ ಕಳುಹಿಸಲಾಗಿತ್ತು. ಇದರಿಂದ ಮತ್ತಷ್ಟು ಸಿಟ್ಟಾದ ಜಾರಕಿ ಹೊಳಿ ಕೆಂಪಯ್ಯ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ನಮ್ಮ ಬಹಳಷ್ಟು ಸಮಸ್ಯೆಗಳಿಗೆ ಮುಖ್ಯಮಂತ್ರಿ ಅವರ ಸುತ್ತಮುತ್ತಲಿರುವ ನಿಮ್ಮಂತಹವರೇ ಕಾರಣ ಎಂದು ಕೆಂಡಾಮಂಡಲವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವೇನೂ ಹೈಕಮಾಂಡಾ ನಿಮ್ಮ ಬಳಿ ನನ್ನ ಸಮಸ್ಯೆ ಹೇಳಿಕೊಂಡರೆ ಪರಿಹಾರ ಸಿಗುತ್ತದೆಯೇ ಎಂದು ಕೆಂಪಯ್ಯ ಅವರನ್ನು ಜಾರಕಿಹೊಳಿ ಖಾರವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಕೆಂಪಯ್ಯ ಅವರು ಜಾರಕಿ ಹೊಳಿ ಅವರಿಗೆ ಕರೆ ಮಾಡಿ ಮುಖ್ಯಮಂತ್ರಿಯವರಿಂದ ಮಾತನಾಡಿಸಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರಿಗೆ ಬರಲು ಒಪ್ಪಿಕೊಂಡಿರುವ ಜಾರಕಿ ಹೊಳಿ ನಾಳೆ ಭೇಟಿ ಯಾಗುವುದಾಗಿ ಭರವಸೆ ನೀಡಿದ್ದಾರೆ. ಸಂಧಾನದ ಪ್ರಯತ್ನ ಭಾಗಶಃ ಫಲ ನೀಡಿದ್ದು, ನಾಳೆ ಯಾವ ಬೆಳವಣಿಗೆ ನಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

Write A Comment