ಕರ್ನಾಟಕ

ವಿದ್ಯುತ್‌ ವ್ಯತ್ಯಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಕವಿ ಡಾ.ಸಿದ್ದಲಿಂಗಯ್ಯ ಅವರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ವಿಳಂಬ

Pinterest LinkedIn Tumblr

pvec28jan15Gandhi 04

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲ­ಯದಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಕವಿ ಡಾ.ಸಿದ್ದಲಿಂಗಯ್ಯ ಅವರಿಗೆ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ವಿದ್ಯುತ್‌ ವ್ಯತ್ಯಯದಿಂದ ಸ್ಥಳಾಂತರಗೊಂಡಿತು.

ವಿವಿ ಶಿಕ್ಷಕರು, ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳು ಪ್ರೊ.ವೆಂಕಟಗಿರಿಗೌಡ ಸ್ಮಾರಕ ಭವನದಲ್ಲಿ  ಕಾರ್ಯಕ್ರಮ ಆಯೋಜಿಸಿದ್ದರು.
ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಬೇಕು ಎನ್ನುವಷ್ಟರಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಯಿತು. ಭವನದಲ್ಲಿ ಜನರೇಟರ್‌ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಕೆಲ ಕಾಲ ವಿದ್ಯುತ್‌ಗಾಗಿ ಅತಿಥಿಗಳು ಸೇರಿದಂತೆ ಎಲ್ಲರೂ ಕಾಯ್ದು ಕುಳಿತರು.

ಈ ವೇಳೆ ಜನರೇಟರ್‌ ವ್ಯವಸ್ಥೆ ಮಾಡಲು ಕುಲಪತಿ ಪ್ರೊ.ಬಿ.ತಿಮ್ಮೇ­ಗೌಡ ಅವರು ಎಂಜಿನಿಯರಿಂಗ್‌ ವಿಭಾಗ­ದವರಿಗೆ ಕರೆ ಮಾಡಿ ಪ್ರಯತ್ನಿಸಿದ­ರಾದರೂ ಅದು ಕೈಗೂಡಲಿಲ್ಲ.

ಈ ನಡುವೆ ಮುಖ್ಯ ಅತಿಥಿಯಾಗಿ ಬಂದಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಸ್ವಲ್ಪ ಕಾಲ ಕಾಯ್ದು ನಂತರ ಹೊರಟು ಹೋದರು. ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾ ಗಲಿದೆ’ ಎಂಬುದು  ತಿಳಿಯುತ್ತಿದ್ದಂತೆ ಕಾರ್ಯಕ್ರಮವನ್ನು ಸೆನೆಟ್‌ ಹಾಲ್‌ಗೆ ಸ್ಥಳಾಂತರಿಸಲಾಯಿತು.

‘ರಿಪೇರಿ ಕಾರಣದಿಂದ ವೆಂಕಟಗಿರಿಗೌಡ ಸ್ಮಾರಕ ಭವನವನ್ನು ಮುಚ್ಚಲಾಗಿತ್ತು. ಇತ್ತೀಚೆಗಷ್ಟೇ ₨8 ಲಕ್ಷ ವೆಚ್ಚದಲ್ಲಿ ಅದನ್ನು ನವೀಕರಿಸಲಾಗಿದೆ. ಈ  ಭವನ ಮತ್ತು ಎಚ್‌.ನರಸಿಂಹಯ್ಯ ಸಭಾಂಗಣಗಳಿಗೆ ಜನರೇಟರ್‌ ವ್ಯವಸ್ಥೆ ಮಾಡುವಂತೆ ಕುಲಪತಿ ಅವರು ಎರಡು ತಿಂಗಳ ಹಿಂದೆಯೇ ಸೂಚನೆ ನೀಡಿದ್ದರು. ಈ ಪ್ರಸ್ತಾವಕ್ಕೆ ವಿವಿಯ ಕೇಂದ್ರೀಯ ಖರೀದಿ ಸಮಿತಿ ಮತ್ತು ಸಿಂಡಿಕೇಟ್‌ ಸಭೆಯಲ್ಲಿ ಒಪ್ಪಿಗೆ ದೊರೆಯಬೇಕಾಗಿದೆ’ ಎಂದು ವಿವಿ ಕುಲಸಚಿವರಾದ  ಪ್ರೊ.ಕೆ.ಕೆ.ಸೀತಮ್ಮ ತಿಳಿಸಿದರು.

Write A Comment