ಕರ್ನಾಟಕ

ಕೆರೆ ಒತ್ತುವರಿ: ವಲಸೆ ಪಕ್ಷಿ ಸಂಖ್ಯೆ ಇಳಿಮುಖ

Pinterest LinkedIn Tumblr

pvec28janp5mys500

ಮೈಸೂರು: ಕೆರೆಗಳ ಒತ್ತುವರಿ, ಪಕ್ಷಿ ತಾಣಗಳ ನಾಶ ಇತ್ಯಾದಿ ಕಾರಣ­ಗಳಿಂ­ದಾಗಿ ಸೈಬೀರಿಯಾ, ಮಂಗೋಲಿಯಾ ಮೊದ­ಲಾದ ಕಡೆಗಳಿಂದ ಚಳಿಗಾಲ­ದಲ್ಲಿ ದಕ್ಷಿಣ ಕರ್ನಾಟಕಕ್ಕೆ ವಲಸೆ ಬರುತ್ತಿದ್ದ ಹಕ್ಕಿಗಳ ಸಂಖ್ಯೆ ಕಳೆದ ಎರಡು ದಶಕ­ಗಳಿಗೆ ಹೋಲಿಸಿದರೆ ಈಗ ಅರ್ಧದಷ್ಟು ಕಡಿಮೆಯಾಗಿದೆ.

ಸೈಬೀರಿಯಾ, ಮಂಗೋಲಿಯಾ­ದಲ್ಲಿ ಚಳಿಗಾಲದಲ್ಲಿನ ಅತೀವ ಚಳಿ­ಯನ್ನು ತಾಳಲಾರದೇ ಅಲ್ಲಿನ ಪಕ್ಷಿಗಳು ಕೆರೆ, ತೊರೆ, ವನ ಸಮೃದ್ಧ ತಾಣವಾದ ದಕ್ಷಿಣ ಕರ್ನಾಟಕದೆಡೆಗೆ ಪ್ರತಿ ವರ್ಷ ವಲಸೆ ಬರುತ್ತವೆ. ಕೆರೆಗಳ ಒತ್ತುವರಿ, ಪಕ್ಷಿ ನೆಲೆ­ಗಳು ನಾಶಗೊಳ್ಳುತ್ತಿರುವ ಕಾರಣ ವಲಸೆ ಬರುವ ಪಕ್ಷಿಗಳ ಸಂಖ್ಯೆ ತೀವ್ರ ಕಡಿಮೆ­ಯಾಗಿದೆ ಎಂದು ಕೆಲ ವರ್ಷಗಳಿಂದ ಪಕ್ಷಿ ಸಮೀಕ್ಷೆ ನಡೆಸುತ್ತಿರುವ ಪಕ್ಷಿಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಉತ್ತರ ಏಷ್ಯಾದ ಕಡೆಯಿಂದ ಬರುವ ಪಕ್ಷಿಗಳಲ್ಲಿ ‘ಪರ್ವತಹಕ್ಕಿ’ ಅಥವಾ ‘ಗೀರು­­ಬಾತು’ (ಬಾರ್‌ ಹೆಡೆಡ್‌ ಗೀಸ್‌), ‘ಬಾತು’ (ಗಾರ್ಗೆನಿ), ‘ಸಲಾಕೆ’ (ಶೊವ್ಲರ್‌), ‘ಸೂಜಿ ಬಾಲದ ಬಾತು’ (ಪಿನ್‌ ಟೈಲ್ಡ್‌ ಡಕ್‌), ‘ವಿಜನ್‌’ ಪ್ರಮುಖ­ವಾದವು. ಸಾಮಾನ್ಯವಾಗಿ ಈ ಪಕ್ಷಿಗಳು ನವೆಂಬ­ರ್‌­ನಲ್ಲಿ ಮೈಸೂರು ಮತ್ತು ಸುತ್ತ­ಮುತ್ತಲಿನ ಹದಿನಾರು, ಕಗ್ಗಲಿ­ಪುರ ಗ್ರಾಮಗಳ ಕೆರೆ–ಕಟ್ಟೆಗಳು, ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶ­ಗಳಿಗೆ ವಲಸೆ ಬರುತ್ತವೆ. ಫೆಬ್ರುವರಿ ಎರಡು ಅಥವಾ ಮೂರನೇ ವಾರದಲ್ಲಿ ವಾಪ­ಸಾ­ಗುತ್ತವೆ. ಹಿಮಾ­ಲಯದ ಮೂಲಕ ಸುಮಾರು ಐದು ಸಾವಿರ ಕಿಲೋ ಮೀಟರ್‌ ಹಾರಿಕೊಂಡು ಇಲ್ಲಿಗೆ ಬರುತ್ತವೆ ಎಂದು ಪಕ್ಷಿ ವೀಕ್ಷಕ ಗುರುಪ್ರಸಾದ್‌ ವಿವರಿಸುತ್ತಾರೆ.

ಮಂಗೋಲಿಯಾ ಮತ್ತು ಸೈಬೀರಿ­ಯಾ­ದಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ಶೂನ್ಯ ಡಿಗ್ರಿ ಸೆಲ್ಸಿಯಸ್‌ ಇರುತ್ತದೆ. ಹೀಗಾಗಿ, ಅಲ್ಲಿನ ಪಕ್ಷಿಗಳು ದಕ್ಷಿಣ ಕರ್ನಾಟಕದ ಕಡೆಗೆ ವಲಸೆ ಬಂದು 2–3 ತಿಂಗಳು ಇಲ್ಲಿ ತಂಗುತ್ತವೆ. ಆದರೆ ಈ ಅವಧಿ­ಯಲ್ಲಿ ಪರ್ವತ ಹಕ್ಕಿಗಳು ಇಲ್ಲಿ ಸಂತಾನೋತ್ಪತ್ತಿ ಮಾಡು­ವು­ದಿಲ್ಲ ಎಂದು ಅವರು ಹೇಳುತ್ತಾರೆ.

ಎರಡು ದಶಕಗಳ ಹಿಂದೆ ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಚಳಿಗಾಲದಲ್ಲಿ ಸುಮಾರು ಒಂದು ಲಕ್ಷ  ಬಾನಾಡಿಗಳು ವಲಸೆ ಬರುತ್ತಿದ್ದವು. ಈಗ ಈ ಪ್ರಮಾಣ ಬಹಳ ಕಡಿಮೆ­ಯಾ­ಗಿದೆ. ಪಾರಂಪರಿಕ ನಗರಿಯ ಕುಕ್ಕರ­ಹಳ್ಳಿ ಮತ್ತು ಕಾರಂಜಿ ಕೆರೆಗಳು ಈ ಕಾಲ­ದಲ್ಲಿ ವಲಸೆ ಪಕ್ಷಿಗಳ ಹಾರಾಟ­ದಿಂದ ಕಂಗೊಳಿ­ಸುತ್ತಿದ್ದವು. 2015ರ ಸಮೀಕ್ಷೆ ಪ್ರಕಾರ ಸಮಾರು 40 ಸಾವಿರ ಪಕ್ಷಿಗಳು ವಲಸೆ ಬಂದಿವೆ ಎಂದು ‘ಮೈಸೂರು ನೇಚರ್‌’ ಸಮೂಹದ ಎ.ಶಿವಪ್ರಕಾಶ್‌ ಅವರ ಅಭಿಪ್ರಾಯ.

ಹಿಂದೆ ಸುಮಾರು 2,500ಕ್ಕೂ ಹೆಚ್ಚು ಪರ್ವತ ಹಕ್ಕಿಗಳು ವಲಸೆ ಬರುತ್ತಿ­ದ್ದವು. ಈಚಿನ ವರ್ಷಗಳಲ್ಲಿ ವಲಸೆ ಬರುವ ಈ ಹಕ್ಕಿಗಳ ಪ್ರಮಾಣ ಸುಮಾರು 400ರಿಂದ 500 ಆಗಿದೆ. ಪಕ್ಷಿ ನೆಲೆಗಳ ನಾಶವೇ ಪಕ್ಷಿಗಳ ವಲಸೆ ಬರುವುದು ಇಳಿಮುಖವಾಗಿರುವುದಕ್ಕೆ ಕಾರಣ. ಪರ್ವತ ಹಕ್ಕಿಗಳು ಸಾಮಾನ್ಯ­ವಾಗಿ ವಾಸಕ್ಕೆ ಸ್ವಚ್ಛ ನೀರಿನ ತಾಣಗಳನ್ನು ಅರಸಿ ಬರುತ್ತವೆ. ಆದರೆ, ಈಗ ಕೆರೆ­ಗಳೂ ಕಲುಷಿತವಾಗಿವೆ, ಕೆರೆಗಳ ಒತ್ತುವರಿ ಇತ್ಯಾದಿ ಕಾರಣ­ದಿಂದ ವಲಸೆ ಇಳಿ­ಯಲು ಮತ್ತೊಂದು ಪ್ರಮುಖ ಕಾರಣ. ಇದಕ್ಕಾಗಿ ಪಕ್ಷಿಗಳ ತಾಣ ಮತ್ತು ಕೆರೆಗಳ ರಕ್ಷಣೆ ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳುತ್ತಾರೆ.

Write A Comment