ಚಿತ್ರದುರ್ಗ: ಬನ್ನಿ ಅಂತ ಹೇಳಿದ್ದು 10 ಗಂಟೆಗೆ, ನೀವು ಬಂದಿರೋದು ಎಷ್ಟು ಹೊತ್ತಿಗೆ ನೋಡಿ ? ಹೋಗ್ಲಿ ಅಂತ 10.30ವರೆಗೂ ಮಾರ್ಜಿನ್ ಕೊಟ್ಟಿದ್ವಿ. ಆಗಲೂ ಬರಲಿಲ್ಲ, ಲೇಟ್ ಆಗಿ ಬಂದವರನ್ನೆಲ್ಲ ಆಚೆಗೆ ಕಳಿಸ್ರಿ..!
ಇದು ಯಾವುದೋ ಶಾಲಾ– ಕಾಲೇಜಿನಲ್ಲಿ ತಡವಾಗಿ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಹೊರಗೆ ಅಟ್ಟಿದ ಪ್ರಸಂಗ ಎಂದುಕೊಂಡರೆ, ನಿಮ್ಮ ಊಹೆ ತಪ್ಪು. ಇದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ, ಮಂಗಳವಾರ ಜಿಲ್ಲಾ ಪಂಚಾಯ್ತಿಯ ತ್ರೈಮಾಸಿಕ ಕೆಡಿಪಿ ಸಭೆಗೆ ತಡವಾಗಿ ಬಂದ ಅಧಿಕಾರಿಗಳನ್ನು ಹೊರಗೆ ಕಳಿಸಿದ ಪರಿ!
ಸಚಿವ ಆಂಜನೇಯ, ಅಧಿಕಾರಿಗಳನ್ನು ಹೀಗೆ ಹೊರ ಕಳಿಸುತ್ತಿದ್ದಾಗ, ವೇದಿಕೆಯಲ್ಲಿದ್ದ ಸಂಸದರು, ಶಾಸಕರು ಅವರ ಮಾತಿಗೆ ದನಿಗೂಡಿಸಿದರು.
ಸಭೆಯಲ್ಲಿ ಹೀಗಾಯ್ತು: ಪೂರ್ವ ನಿಗದಿಯಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿಯ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆಯನ್ನು 10 ಗಂಟೆಗೆ ಜಿ.ಪಂ ಸಭಾಂಗಣದಲ್ಲಿ ನಿಗದಿಪಡಿಸಲಾಗಿತ್ತು.10ಗಂಟೆಗೆ ಸರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ, ಸಂಸದ ಬಿ.ಎನ್. ಚಂದ್ರಪ್ಪ, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸೇರಿದಂತೆ ಜಿಲ್ಲೆಯ ಕೆಲವು ಶಾಸಕರು, ಮೇಲ್ಮನೆ ಸದಸ್ಯರು, ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಜಿ.ಪಂ ಸಿಇಒ ಬಂದಿದ್ದರು.
ಆದರೆ, ಹಲವು ಇಲಾಖೆಯ ಅಧಿಕಾರಿಗಳು ಇನ್ನೂ ಬಂದಿರಲಿಲ್ಲ. ಇದರಿಂದ ಕೋಪಗೊಂಡ ಉಸ್ತುವಾರಿ ಸಚಿವರು, ತಡವಾಗಿ ಸಭೆಗೆ ಬಂದ ಅಧಿಕಾರಿಗಳನ್ನು ಹೊರಗೆ ನಿಲ್ಲಿಸುವಂತೆ ಅಟೆಂಡರ್ಗಳಿಗೆ ತಾಕೀತು ಮಾಡಿದರು.
ವಿಷಯ ಬಂದಾಗ ಕರೆ: ಪ್ರಗತಿಪರಿಶೀಲನಾ ಸಭೆಯಲ್ಲಿ ಆಯಾ ಇಲಾಖೆಯ ವಿಷಯ ಚರ್ಚೆಗೆ ಬಂದಾಗ ಹೊರಗಿದ್ದ ಅಧಿಕಾರಿಗಳನ್ನು ಕರೆಸಿ, ಅವರಿಂದ ಮಾಹಿತಿ ಒಪ್ಪಿಸಿಕೊಂಡು ಪುನಃ ಹೊರಗೆ ಕಳಿಸಬೇಕೆಂದು ಸಚಿವರು ತಾಕೀತು ಮಾಡಿದರು. ಸಚಿವರ ಆಣತಿಯಂತೆ ಕೃಷಿ, ಲೋಕೋಪಯೋಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು, ಅವರ ಪಾಳಿ ಬಂದಾಗ, ಸಭೆಗೆ ಬಂದು ಪ್ರಗತಿ ಒಪ್ಪಿಸಿ, ಹೊರ ನಡೆದರು. ಇನ್ನು ಕೆಲವು ಅಧಿಕಾರಿಗಳು, ಸಭೆಗೆ ತಡವಾಗಿದ್ದಕ್ಕೆ ಕಾರಣ ನೀಡುತ್ತಿದ್ದರು!
ಈ ಕ್ರಮ ಸಾಲದು ಎಂಬಂತೆ ಸಚಿವರು, ‘ತಡವಾಗಿ ಸಭೆಗೆ ಬಂದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ’ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು. ಜಿಲ್ಲಾಧಿಕಾರಿ, ಪ್ರಾದೇಶಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಪೂರ್ವಾನುಮತಿ ಪಡೆದಿದ್ದರಿಂದ ಅವರಿಗೆ ರಿಯಾಯಿತಿ ನೀಡಲಾಯಿತು.
11ರ ಸಭೆ, 10ಕ್ಕೆ ನಿಗದಿಯಾಗಿದ್ದು..!
ಸಾಮಾನ್ಯವಾಗಿ ಪ್ರತಿ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆ 11ಕ್ಕೆ ನಿಗದಿಯಾಗುತ್ತಿತ್ತು. ಸಾಮಾನ್ಯವಾಗಿ 15 ನಿಮಿಷ ತಡವಾಗುತ್ತಿತ್ತು. ಆದರೆ, ಈ ಬಾರಿ 10ಕ್ಕೆ ನಿಗದಿಯಾಗಿದ್ದರಿಂದ ಅಧಿಕಾರಿಗಳು ತಡವಾಗಿ ಬರಲು ಕಾರಣವಾಯಿತು ಎಂದು ಸಭೆಯ ಹೊರಗಡೆಯಿದ್ದ ಕೆಲವು ಅಧಿಕಾರಿಗಳು ಮಾತನಾಡಿಕೊಳ್ಳುತ್ತಿದ್ದರು. ಸಭೆಯ ಹೊರಗೆ ನಿಂತಿದ್ದ ಅಧಿಕಾರಿಗಳು, ಪ್ರಗತಿ ಪರಿಶೀಲನೆಯ ಮಾಹಿತಿಯೊಂದಿಗೆ ಪಾಳಿಯ ನಿರೀಕ್ಷೆಯಲ್ಲಿದ್ದರು.
