ಕರ್ನಾಟಕ

ಒಟ್ಟಿಗೆ ಇರುವ ಖುಷಿಯಲ್ಲಿ ಊರು ಬಿಟ್ಟರು

Pinterest LinkedIn Tumblr

ku

ಮಧುಗಿರಿ (ತುಮಕೂರು ಜಿಲ್ಲೆ): ತಾಲ್ಲೂಕಿನ ಕಸಬಾ ಹೋಬಳಿಯ ಮುದ್ದಯ್ಯನಪಾಳ್ಯದಲ್ಲಿ ಮಂಗಳವಾರ ಸೂರ್ಯೋದಯದ ಮುನ್ನವೇ ಗ್ರಾಮಸ್ಥರು ತಾವು ಸಾಕಿದ ಪ್ರಾಣಿಗಳ ಸಮೇತ ಊರು ಬಿಟ್ಟರು. ಲಗುಬಗೆಯಿಂದ ಹೊರಡುತ್ತಿದ್ದವರ ಮುಖದ ಮೇಲೆ ಸಂತೋಷ, ಖುಷಿ ಇಣುಕುತ್ತಿತ್ತು. ಹೊರಬೀಡು ಆಚರಣೆಗೆ ಗುಂಪುಗುಂಪಾಗಿ ತೆರಳಿದರು.

ಗ್ರಾಮದಲ್ಲಿ 100 ಮನೆಗಳಿದ್ದು, 1500ರಷ್ಟು ಜನಸಂಖ್ಯೆ ಇದೆ. ಎಲ್ಲ ಸಮುದಾಯದವರು 3 ಅಥವಾ 5 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಹೊರಬೀಡು ಆಚರಣೆ ಮಾಡುತ್ತಿರುವುದರಿಂದಲೇ ಗ್ರಾಮದಲ್ಲಿ ರೋಗ–ರುಜಿನ ಕಾಣಿಸಿಕೊಂಡಿಲ್ಲ ಎಂಬುದು ಸ್ಥಳೀಯರ ನಂಬಿಕೆ.

ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಗ್ರಾಮಸ್ಥರು ಪಾತ್ರೆ, ಬಿಂದಿಗೆ, ಆಹಾರ ಪದಾರ್ಥಗಳು ಹಾಗೂ ಸಾಕು ಪ್ರಾಣಿಗಳ ಸಮೇತ ಊರು ತೊರೆದರು. ಆ ನಂತರ ಗ್ರಾಮದ ಎಲ್ಲ ದಾರಿಯನ್ನು ಮುಳ್ಳು ಬೇಲಿಗಳಿಂದ ಮುಚ್ಚಿ, ಕಾವಲುಗಾರರನ್ನು ನೇಮಿಸಿದರು. ಗ್ರಾಮದೊಳಗೆ ಯಾರೂ ಪ್ರವೇಶಿಸದಂತೆ ನಿರ್ಬಂಧ ಹೇರುವ ಪರಿ ಇದು.

ಅಂದ ಹಾಗೆ, ಗ್ರಾಮದ ಅಂಗನವಾಡಿ ಮತ್ತು ಶಾಲೆಗಳಿಗೂ ಮಕ್ಕಳು ತೆರಳುವಂತಿಲ್ಲ. ಗ್ರಾಮಸ್ಥರು ದೂರದ ಜಮೀನುಗಳಿಗೆ ತೆರಳಿ, ಅಡುಗೆ ಮಾಡಿಕೊಂಡು ಒಟ್ಟಿಗೆ ಊಟ ಮಾಡುವುದು ಇವರ ವಾಡಿಕೆಯಾಗಿದೆ.

ಸಂಜೆ 6ರ ನಂತರ ಗೋವುಗಳೊಂದಿಗೆ ಗ್ರಾಮ ಪ್ರವೇಶಿಸಿದ ಗ್ರಾಮಸ್ಥರು, ಬಸವೇಶ್ವರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಆ ನಂತರ ತಮ್ಮ ಮನೆಗಳಿಗೆ ತೆರಳಿ ಪೂಜೆ ಮಾಡಿದರು. ಇದು ತಲೆತಲಾಂತರದಿಂದ ನಡೆದುಬಂದ ಸಂಪ್ರದಾಯ ಎನ್ನುತ್ತಾರೆ ಗ್ರಾಮಸ್ಥರು.

1945ರಲ್ಲಿ ಗ್ರಾಮದಲ್ಲಿ ಪ್ಲೇಗ್ ರೋಗ ಕಾಣಿಸಿಕೊಂಡಿತಂತೆ. ಆಗ ಗ್ರಾಮಸ್ಥರು 3 ತಿಂಗಳು ಊರು ತ್ಯಜಸಿದ್ದರು. ಅಂದು ಆರಂಭವಾದ ಹೊರಬೀಡು ಈವರೆಗೂ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಗ್ರಾಮದ ನಿವಾಸಿ ನಾಗಭೂಷಣ್.

Write A Comment