ಕರ್ನಾಟಕ

ಅರ್ಕಾವತಿ ದಾಖಲೆಗಳಿದ್ದರೆ ದೂರು ನೀಡಿ : ಪರಮೇಶ್ವರ್

Pinterest LinkedIn Tumblr

Congress-Office

ಬೆಂಗಳೂರು, ಜ.26: ಅರ್ಕಾವತಿ ಡಿ-ನೋಟಿಫಿಕೇಷನ್ ಕುರಿತು ಬಿಜೆಪಿಯವರ ಬಳಿ ದಾಖಲೆಗಳಿದ್ದರೆ ನೇರವಾಗಿ ರಾಜ್ಯಪಾಲರಿಗೆ ಅಥವಾ ತನಿಖಾ ಸಂಸ್ಥೆಗಳಿಗೆ ನೀಡಲಿ. ಅದನ್ನು ಬಿಟ್ಟು ದೂರು ನೀಡುತ್ತೇವೆ ಎಂದು ಹೇಳುತ್ತಲೇ ಕಾಲಹರಣ ಮಾಡಿ ಅಗ್ಗದ ಪ್ರಚಾರ ಪಡೆಯಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಪಕ್ಷದ ಕಚೇರಿಯಲ್ಲಿಂದು 66ನೇ ಗಣರಾಜ್ಯೋತ್ಸವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಆದೇಶದಂತೆ ಮುಖ್ಯಮಂತ್ರಿ ರಿ-ಡೂ ಮಾಡಿದ್ದಾರೆ. ಅದನ್ನು ಹಗರಣ ಎಂದು ಬಿಂಬಿಸಿ ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕಿಡಿಕಾರಿದರು.

ಅರ್ಕಾವತಿ ಡಿ-ನೋಟಿಫಿಕೇಷನ್ ವಿಚಾರಣೆಗೆ ಬಿಜೆಪಿಯೇ ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿ ಅನುಮತಿ ಕೋರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಈ ಮೊದಲು ಹೇಳಿದ್ದರು. ಈಗ ವಕೀಲರ ಮೂಲಕ ಅರ್ಜಿ ಹಾಕಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ಬಳಿ ಯಾವುದೇ ದಾಖಲೆಗಳಿಲ್ಲ ಅದಕ್ಕಾಗಿ ಸುಮ್ಮನ್ನೇ ಹೇಳಿಕೆಗಳನ್ನು ನೀಡಿ ಕಾಲ ಹರಣ ಮಾಡಲಾಗುತ್ತಿದೆ ಎಂದು ಲೇವಡಿ ಮಾಡಿದರು. ರಾಜ್ಯ ಸರ್ಕಾರ ಅರ್ಕಾವತಿ ಡಿ-ನೋಟಿಫಿಕೇಷನ್ ಕುರಿತು ವಿಚಾರಣೆಗಾಗಿಯೇ ನ್ಯಾಯಮೂರ್ತಿ ಕೆಂಪಣ್ಣ ಅವರ ನ್ಯಾಯಾಂಗ ಆಯೋಗ ರಚನೆ ಮಾಡಿದೆ. ಈವರೆಗೆ ಆಯೋಗದ ಮುಂದೆ 59 ಅರ್ಜಿಗಳು ಸಲ್ಲಿಕೆಯಾಗಿವೆ. ನನಗಿರುವ ಮಾಹಿತಿ ಪ್ರಕಾರ ಬಿಜೆಪಿ ಕಡೆಯಿಂದ ಯಾವ ಅರ್ಜಿಯೂ ಸಲ್ಲಿಕೆಯಾಗಿಲ್ಲ. ಆರೋಪ ಮಾಡುವ ಬಿಜೆಪಿ ನಾಯಕರ ಬಳಿ ದಾಖಲೆಗಳಿದ್ದರೆ ವಿಚಾರಣಾ ಆಯೋಗಕ್ಕೆ ನೀಡಿ, ಇಲ್ಲ ಲೋಕಾಯುಕ್ತಕ್ಕೆ ಸಲ್ಲಿಸಿ ಅಥವಾ ಅವರೇ ಹೇಳುವಂತೆ ರಾಜ್ಯಪಾಲರಿಗಾದರೂ ದೂರು ನೀಡಲಿ. ಏನನ್ನೂ ಮಾಡದೇ ಬೀದಿಯಲ್ಲಿ ಆಧಾರ ರಹಿತ ಆರೋಪ ಮಾಡಿಕೊಂಡು ರಾಜಕಾರಣ ಮಾಡಬೇಡಿ. ಗೊಂದಲ ಮೂಡಿಸುವ ನಿಮ್ಮನ್ನು ಜನ ನಂಬುವುದಿಲ್ಲ ಎಂದು ಬಿಜೆಪಿ ನಾಯಕರನ್ನು ಕೆಣಕಿದರು.

ಸಮನ್ವಯ ಸಮಿತಿ ಸಭೆ:

ಇದೇ ತಿಂಗಳ 29 ರಿಂದ ಮೂರು ದಿನಗಳ ಕಾಲ ಪಕ್ಷ ಸಂಘಟನೆಯ ಕುರಿತು ಚರ್ಚಿಸಲು ಕಾಂಗ್ರೆಸ್‌ನ ಹಿರಿಯ-ಕಿರಿಯ ನಾಯಕರ ಜೊತೆ ಸಭೆ ನಡೆಸಲಾಗುತ್ತಿದೆ. ಶಾಸಕರು, ಸಚಿವರು, ಸಂಸದರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನಾಯಕರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಉಸ್ತುವಾರಿ ನಾಯಕ ದಿಗ್ವಿಜಯ್ ಸಿಂಗ್ ಸಮಾಲೋಚನೆ ನಡೆಸಲಿದ್ದಾರೆ. ಜ.30ರಂದು ಮಧ್ಯಾಹ್ನ ಒಂದು ಗಂಟೆಗೆ ರಾಜ್ಯ ಕಾಂಗ್ರೆಸ್‌ನ ಸಮನ್ವಯ ಸಮಿತಿ ಸಭೆ ನಡೆಯಲಿದೆ ದಿಗ್ವಿಜಯ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಜನರಿಗೆ ನೀಡಿದ್ದ ಭರವಸೆಗಳು ಈಡೇರಿವೇಯೇ ? ಸೌಲಭ್ಯಗಳು ಜನರಿಗೆ ತಲುಪಿವೆಯೇ ? ಮತ್ತೆ ಹೊಸದಾಗಿ ಇನ್ನೂ ಯಾವುದಾರೂ ಹೊಸ ಯೋಜನೆಗಳನ್ನು ರೂಪಿಸುವ ಅಗತ್ಯವಿದೆಯೇ ಎಂಬುದನ್ನು ಸಮನ್ವಯ ಸಭೆಯಲ್ಲಿ ಚರ್ಚಿಸಲಾಗುವುದು.

ಮೂರು ದಿನಗಳ ಪಕ್ಷದ ಸಭೆಯಲ್ಲಿ ಅರ್ಕಾವತಿ ಡಿ-ನೋಟಿಫಿಕೇಷನ್ ಕುರಿತು ಚರ್ಚಿಸಲಾಗುತ್ತದೆ. ಆದರೆ ಅದನ್ನು ಮಾಧ್ಯಮಗಳಿಗಾಗಲಿ ಅಥವಾ ಸಾರ್ವಜನಿಕರಿಗಾಗಲಿ ಹೇಳುವುದಿಲ್ಲ ಎಂದರು. ಪಕ್ಷ ತನ್ನದೇ ನೆಲೆಯಲ್ಲಿ ನೀತಿಗಳನ್ನು ರೂಪಿಸುತ್ತದೆ, ಅದಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ. ಸರ್ಕಾರದ ಕಾರ್ಯವೈಖರಿಯಲ್ಲಿ ಪಕ್ಷ ಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾಪ್ರಭುತ್ವಕ್ಕೆ ಅಪಾಯ:
ಗಣರಾಜ್ಯೋತ್ಸವದ ಅಂಗವಾಗಿ ಕೆಪಿಸಿಸಿ ಕಚೇರಿಯ ಮುಂದೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪರಮೇಶ್ವರ್ ಅವರು, ಹತ್ತಾರು ಧರ್ಮಗಳನ್ನು ಒಗ್ಗೂಡಿಸಿಕೊಂಡು ಸಮಗ್ರ ಭಾರತ ರೂಪಿತಗೊಂಡಿದೆ. ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಶ್ರೇಷ್ಠವಾಗಿದೆ. ಪ್ರಜಾಪ್ರಭುತ್ವದ ಉಳಿವೆಗೆ ಎಲ್ಲರೂ ಒಗ್ಗೂಡಿ ಪ್ರಯತ್ನ ನಡೆಸಬೇಕು ಎಂದು ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಕೆಲ ಪಕ್ಷಗಳು ಧರ್ಮಾಧಾರಿತವಾಗಿ ದೇಶ ವಿಭಜಿಸುವ ಪ್ರಯತ್ನವನ್ನು ನಡೆಸುತ್ತಿವೆ. ದೇಶದ ಸಮಗ್ರತೆಗೆ ಹಾಗೂ ಪ್ರಜಾಪ್ರಭುತ್ವ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್‌ನಿಂದ ಮಾತ್ರ ದೇಶದ ಸಮಗ್ರತೆ ರಕ್ಷಣೆ ಸಾಧ್ಯ. ರಾಜ್ಯದಲ್ಲಿ ಇಂತಹ ಕೃತ್ಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ನೀಡಬಾರದು ಎಂದು ಪರಮೇಶ್ವರ್ ಸಲಹೆ ನೀಡಿದರು.

ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜೀ ಸೇರಿದಂತೆ ಪದ್ಮ ಪ್ರಶಸ್ತಿಗೆ ಭಾಜನರಾದ ರಾಜ್ಯದ ಎಂಟು ಜನರನ್ನು ಪರಮೇಶ್ವರ್ ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಶಾಸಕರಾದ ಎಸ್.ಟಿ.ಸೋಮಶೇಖರ್, ಎನ್.ಎ.ಹ್ಯಾರಿಸ್, ಮಾಜಿ ಸಂಸದ ಎಚ್.ಹನುಮಂತಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Write A Comment