ಕರ್ನಾಟಕ

ಎಫ್‌ಐಆರ್‌ ದಾಖಲಿಸಿದ ಅಧಿಕಾರಿಗೇ ನೋಟಿಸ್‌!: ಚಿಕ್ಕಮಗಳೂರು ಜಿಲ್ಲಾ ಅರಣ್ಯ ಇಲಾಖೆಯಲ್ಲಿ ಹೀಗೊಂದು ಪ್ರಹಸನ

Pinterest LinkedIn Tumblr

pvec24ckm10_0

ಚಿಕ್ಕಮಗಳೂರು:  ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದ್ದ ವ್ಯಕ್ತಿ ವಿರುದ್ಧ ರಾಜಕೀಯ ಒತ್ತಡ, ಪ್ರಭಾವಕ್ಕೆ ಮಣಿಯದೆ ಎಫ್‌ಐಆರ್‌ ಮತ್ತು ಎಫ್‌ಒಸಿ ದಾಖಲಿಸಿದ್ದ ಅರಣ್ಯ ಸಂಚಾರ ದಳದ ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿಗೆ ಇಲಾಖೆಯ ಮೇಲಧಿ ಕಾರಿಗಳು ಕಾರಣ ಕೇಳಿ ನೋಟಿಸ್‌ ನೀಡಿ, ನೈತಿಕ ಸ್ಥೈರ್ಯ ಕುಗ್ಗಿಸುತ್ತಿರುವ ಪ್ರಸಂಗ ನಡೆದಿದೆ!

ತನಿಖಾಧಿಕಾರಿಯು ಆರೋಪಿಯನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದರೆ, ಮೇಲಧಿಕಾರಿಗಳು ಆರೋಪಿ ಪರ ನಿಂತಿ­ರುವುದು ಈಗ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟಕ್ಕೆ ಎಡೆಮಾಡಿದೆ. ಭದ್ರಾ ಅಭಯಾರಣ್ಯದ ಮುತ್ತೋ ಡಿಯ ಹೊನ್ನಳ್ಳ ಬಳಿ ನೈಸರ್ಗಿಕ ಝರಿಯ ಸ್ವರೂಪಕ್ಕೆ ಧಕ್ಕೆ ತಂದು, ಅರಣ್ಯದೊಳಗೆ ಅಕ್ರಮ ರಸ್ತೆ ನಿರ್ಮಿಸಿ, ಬೃಹತ್‌ ಕಟ್ಟಡ ನಿರ್ಮಿಸು­ತ್ತಿರುವುದನ್ನು ಅರಣ್ಯ ಸಂಚಾರ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೆಂಕ ಟೇಶ್‌ ಮತ್ತು ಸಿಬ್ಬಂದಿ ಪತ್ತೆ ಹಚ್ಚಿ, ಆರೋಪಿ ಸತೀಶ್‌ ಗೌಡ ವಿರುದ್ಧ ಎಫ್‌ಐಆರ್‌ ಮತ್ತು ಅರಣ್ಯ ಅಪರಾಧ ಮೊಕದ್ದಮೆ ದಾಖಲಿಸಿದ್ದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯ ಅಪರಾಧ ತಡೆಗಟ್ಟದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊ­ಳ್ಳುವಂತೆ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗೆ ತನಿಖಾಧಿಕಾರಿ, ಜ.14ರಂದು ಪತ್ರ ಬರೆದಿದ್ದರು. ಸ್ಥಳ ತನಿಖೆ ನಡೆಸಿ ಕ್ರಮ ಜರುಗಿಸಬೇಕಿದ್ದ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷ ಣಾಧಿಕಾರಿ ವೆಂಕಟೇಶನ್‌, ‘ಅಲ್ಲಿ ಅರಣ್ಯೇತರ ಚಟುವಟಿಕೆ ನಡೆದೇ ಇಲ್ಲ, ಆಪಾದಿತ ಸತೀಶ್‌ ಗೌಡ ಕಾಯ್ದೆ ಉಲ್ಲಂಘಿಸಿಲ್ಲ.

ನಿಮ್ಮ ಕಾರ್ಯವ್ಯಾಪ್ತಿ ಮೀರಿ ಮತ್ತು ಮೇಲಧಿಕಾರಿಗಳ ಅನು­ಮತಿ ಇಲ್ಲದೆ ದುರುದ್ದೇಶದಿಂದ ಏಕಪಕ್ಷೀಯವಾಗಿ ಎಫ್‌ಐಆರ್‌ ದಾಖ ಲಿಸಿರುವುದು ಸರಿಯಲ್ಲ. ಶಿಷ್ಟಾಚಾರ ಪಾಲಿಸಿಲ್ಲ’ ಎಂದು ಪ್ರಕರಣದ ತನಿಖಾಧಿಕಾರಿಗೆ ಪತ್ರ ಬರೆದಿದ್ದಾರೆ. ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಗಂಭೀರ ಅಪರಾಧ ಎಸಗಿರುವುದರಿಂದ  ವನ್ಯಜೀವಿ ಪರಿಪಾಲ­ಕರ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)ಗೆ ಶಿಫಾರಸು ಮಾಡುವಂತೆ ಡಿಎಫ್‌ಒ ಮಾಣಿಕ್‌ ಅವರಿಗೂ ತನಿಖಾಧಿಕಾರಿ ಪತ್ರ ಬರೆದಿದ್ದರು.

ಆದರೆ, ತನಿಖೆಗೆ ಅನುಮತಿ ನೀಡಬೇಕಿದ್ದ ಮಾಣಿಕ್‌ ಅವರು ಕೂಡ ತನಿಖಾಧಿ­ಕಾರಿಗೆ ‘ಅಧಿಕಾರ ದುರ್ಬಳಕೆ ಮಾಡಿ­ಕೊಂಡು, ಪ್ರಚಾರಕ್ಕಾಗಿ ಮಾಧ್ಯಮ ಗಳಿಗೆ ಮಾಹಿತಿ ನೀಡಿ ಇಲಾಖೆಗೆ ಮುಜುಗರ ಉಂಟುಮಾಡಿದ್ದೀರಿ, ನಿಮ್ಮ ಕರ್ತವ್ಯ ಲೋಪದ ವಿರುದ್ಧ ಶಿಸ್ತು ಕ್ರಮಕ್ಕೆ ಏಕೆ ಶಿಫಾರಸು ಮಾಡ ಬಾರದು? ಬೇಜವಾ­ಬ್ದಾರಿ ನಡವಳಿಕೆ ಯನ್ನು ನಿಮ್ಮ ವಾರ್ಷಿಕ ವರದಿಯಲ್ಲಿ ಏಕೆ ದಾಖಲಿಸಬಾರದು?’ ಎಂದು ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ. ಎರಡೂ ನೋಟಿಸ್‌ಗಳ ಪ್ರತಿ ‘ಪ್ರಜಾವಾಣಿ’ಗೆ ಲಭಿಸಿವೆ.

ಈ ಬಗ್ಗೆ ‘ಪ್ರಜಾವಾಣಿ’ ಪ್ರಶ್ನಿಸಿದಾಗ ಡಿಎಫ್‌ಒ ಮಾಣಿಕ್‌ ಅವರು ‘ಸಿಬ್ಬಂದಿಯಿಂದ ತನಿಖೆ ನಡೆಸಿ ವರದಿ ಪಡೆದಿದ್ದೇನೆ. ಅರಣ್ಯೇತರ ಚಟುವಟಿಕೆ ನಡೆದಿಲ್ಲ. ಅರಣ್ಯ ಸಂಚಾರ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ತೆಗೆದು­ಕೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿ ಸಿದ್ದಾರೆ.

‘ನನ್ನ ಕಾರ್ಯವ್ಯಾಪ್ತಿಗೆ ಜಿಲ್ಲೆಯ ನಾಲ್ಕು ವಿಭಾಗಗಳಾದ ಕೊಪ್ಪ, ಚಿಕ್ಕಮಗಳೂರು ಉಪ ವಿಭಾಗ, ಭದ್ರಾ ವನ್ಯಜೀವಿ ವಿಭಾಗ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಸೇರಿದೆ. ಆದರೆ, ಅಧಿಕಾರಿಗಳಿಬ್ಬರು ಆರೋಪಿಯ ರಕ್ಷ ಣೆಗೆ ನಿಂತಿದ್ದು, ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ತನಿಖಾಧಿಕಾರಿ ಜಿ.ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಆರೋಪಿಯೇ ಅಭಯಾ ರಣ್ಯದ ನೀರನ್ನು ಪೈಪ್‌ ಮೂಲಕ ಕೃಷಿ ಚಟುವ ಟಿಕೆಗೆ ಬಳಸುತ್ತಿರುವುದಾಗಿ ತಪ್ಪೊಪ್ಪಿಗೆ ನೀಡಿದ್ದಾರೆ. ಆದರೆ, ವನ್ಯ ಜೀವಿ ವಲಯ ಅರಣ್ಯಾಧಿಕಾರಿ ಸಾಕ್ಷ್ಯ ನಾಶಪಡಿಸಿ, ಅಲ್ಲಿ ಅರಣ್ಯೇತರ ಚಟುವ ಟಿಕೆ ನಡೆದಿಲ್ಲ ಎಂದು ವರದಿ ನೀಡಿದ್ದಾರೆ. ಇವರ ವರದಿ ಮೇಲೆ ನನಗೆ ಕಾರಣ ಕೇಳಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಎಲ್ಲ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಕೊಂಡೇ ಪ್ರಕರಣ ದಾಖಲಿಸಿ­ದ್ದೇವೆ. ಆರೋಪ ಪಟ್ಟಿ ಸಲ್ಲಿಸುವಾಗ ಎಲ್ಲವನ್ನೂ ನ್ಯಾಯಾಲಯದ ಮುಂದಿ­ಡುತ್ತೇವೆ. ಸತ್ಯಾಸತ್ಯತೆಯನ್ನು ನ್ಯಾಯಾ­ಲಯ ತೀರ್ಮಾನಿಸಲಿದೆ’ ಎಂದಿದ್ದಾರೆ.

Write A Comment