ಕರ್ನಾಟಕ

ಟ್ವೀಟ್‌ಗಳ ಪರಿಶೀಲನಾ ಕಾರ್ಯ ಪೂರ್ಣ: ಮೆಹದಿ ವಿರುದ್ಧ ಸಾಕ್ಷ್ಯ ಲಭ್ಯ; ಶೀಘ್ರ ಆರೋಪಪಟ್ಟಿ

Pinterest LinkedIn Tumblr

mehadi

ಬೆಂಗಳೂರು: ‘ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್) ಭಯೋ­­ತ್ಪಾದನಾ ಸಂಘಟನೆಯ ಟ್ವಿಟರ್‌ ಖಾತೆ ನಿರ್ವ­ಹಿಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಮೆಹದಿ ಮಸ್ರೂರ್‌ ಬಿಸ್ವಾಸ್‌ನ ವಿರುದ್ಧ ಆರೋಪ­ಪಟ್ಟಿ ಸಲ್ಲಿಸುವಷ್ಟು ಸಾಕ್ಷ್ಯಗಳು ಲಭ್ಯವಾಗಿವೆ’ ಎಂದು ತನಿಖಾಧಿ­ಕಾರಿಗಳು ಹೇಳಿದ್ದಾರೆ.

‘ಮೆಹದಿ ನಿರ್ವಹಿಸುತ್ತಿದ್ದ ‘@shami witness’ ಖಾತೆಯಲ್ಲಿನ  ಎಲ್ಲ 1.24 ಲಕ್ಷ ಟ್ವೀಟ್‌ಗಳನ್ನು ಪರಿಶೀಲಿಸುವ ಕಾರ್ಯ ಪೂರ್ಣಗೊಂಡಿದೆ. ಅದರಲ್ಲಿ ಐ.ಎಸ್‌ ಸಂಘಟನೆಗೆ ಸೇರಲು ಯುವ­ಕರನ್ನು ಪ್ರೇರೇಪಿ­ಸು­ವಂಥ 15 ಸಾವಿರ ಟ್ವೀಟ್‌ಗಳಿವೆ. ಕೆಲ ಟ್ವೀಟ್‌­ಗಳನ್ನು ಆತ ಅಳಿಸಿ ಹಾಕಿದ್ದಾನೆ. ಜತೆಗೆ ವಿಚಾರಣೆ ವೇಳೆ ಮೆಹದಿ ನೀಡಿದ ಹೇಳಿಕೆಗಳನ್ನು ರೆಕಾರ್ಡ್‌ ಮಾಡಿಕೊಳ್ಳಲಾಗಿದೆ. 30 ದಿನಗಳಲ್ಲಿ ನ್ಯಾಯಾಲ­ಯಕ್ಕೆ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಸಲಾಗು­ವುದು. ನಂತರದ 15 ದಿನಗಳಲ್ಲಿ ಅಂತಿಮ ಪಟ್ಟಿ ಸಲ್ಲಿಸಲಾಗುವುದು’ ಎಂದರು.

‘ಆರೋಪಿಯು ಮೊಬೈಲ್ ಮತ್ತು ಲ್ಯಾಪ್‌­­ಟಾಪ್‌ ಎರಡರಲ್ಲೂ ಟ್ವಿಟರ್‌  ಖಾತೆ ನಿರ್ವಹಿಸುತ್ತಿದ್ದ. ಲ್ಯಾಪ್‌­ಟಾಪ್‌ನ ಒಂದು ಫೋಲ್ಡರ್‌ನಲ್ಲಿ ಸಿರಿಯಾ– ಇರಾಕ್‌ ಯುದ್ಧಗಳು ಹಾಗೂ ಐ.ಎಸ್‌ ಸಂಘಟನೆಗೆ ಸೇರಿದ 1.5 ಜಿ.ಬಿಯಷ್ಟು ಮಾಹಿತಿ ಸಂಗ್ರಹಿಸಿದ್ದ. ಅಲ್ಲದೆ, ಐ.ಎಸ್ ಸಂಘಟನೆ ಜತೆ ಗುರುತಿಸಿ­ಕೊಂಡಿರುವ ಮಹಾರಾಷ್ಟ್ರದ ಮೂವರ ಜತೆ ಮೆಹದಿ ನೇರ ಸಂಪರ್ಕ ಹೊಂದಿದ್ದ. ಆತನ ಟ್ವೀಟ್‌ಗಳ ಕುರಿತು ಈಗಾಗಲೇ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ನಾಲ್ಕು ಪುಟಗಳ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿ­ದರು.

‘ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕ­ರ­ಣ­ಗಳಲ್ಲಿ ಆರೋಪಿಗಳ ಬಂಧನವಾದ 180 ದಿನಗಳೊಳಗೆ ಆರೋಪಪಟ್ಟಿ ಸಲ್ಲಿಸಬೇಕಾಗುತ್ತದೆ. ಮೆಹದಿ ಬಂಧನ­ವಾಗಿ ಕೇವಲ 42 ದಿನಗಳಾಗಿದೆ. ಹೀಗಾಗಿ ಆರೋಪ ಪಟ್ಟಿ ಸಲ್ಲಿಕೆಗೆ ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಆದರೆ, ಅಗತ್ಯ ಸಾಕ್ಷ್ಯಗಳು ಈಗಾಗಲೇ ಲಭ್ಯವಾಗಿ­ರುವುದರಿಂದ ಆರೋಪ ಪಟ್ಟಿ ಸಲ್ಲಿಸಲು ತಡ ಮಾಡುವುದಿಲ್ಲ’ ಎಂದು ಅವರು ಹೇಳಿದರು.

ಇಂಗ್ಲೆಂಡ್‌ನ ಸುದ್ದಿ ವಾಹಿನಿ ಮಾಡಿದ್ದ ವರದಿ ಆಧರಿಸಿ, ಡಿ.12ರಂದು ಜಾಲಹಳ್ಳಿಯಲ್ಲಿ ಪೊಲೀಸರು ಮೆಹದಿಯನ್ನು  ಬಂಧಿಸಿದ್ದರು.

‘ಹುಬ್ಬಳ್ಳಿಯಿಂದಲೂ ಟ್ವೀಟ್‌’
ಹುಬ್ಬಳ್ಳಿ:  ‘ಶಂಕಿತ ಐ.ಎಸ್‌ ಉಗ್ರ ಮೆಹದಿ ಬಿಸ್ವಾಸ್‌ಗೆ ಹುಬ್ಬಳ್ಳಿಯಿಂದಲೂ ಕೆಲ­ವರು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಿದ್ದು, ಈ ಕುರಿತು ಬೆಂಗ­ಳೂರಿನ ಪೊಲೀಸರು ತನಿಖೆ ನಡೆಸು­ತ್ತಿದ್ದಾರೆ’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮೀಷನರ್‌ ರವೀಂದ್ರ ಪ್ರಸಾದ್‌ ಹೇಳಿದರು.

ಮೆಹದಿಗೆ ದೇಶದಾದ್ಯಂತ ಸಾವಿ­ರಾರು ಜನ ಟ್ವೀಟ್‌ ಮಾಡಿದ್ದು, ಅದರಲ್ಲಿ ಹುಬ್ಬಳ್ಳಿಯವರೂ ಕೆಲವರಿದ್ದಾರೆ. ಅವರನ್ನು ಬಂಧಿಸುವಂತೆ ಅಥವಾ ಅವರ ಚಲನವಲನಗಳನ್ನು ಗಮನಿಸುವಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಯಾವುದೇ ಸೂಚನೆ ನೀಡಿಲ್ಲ. ಆದ್ದರಿಂದ  ನಾವು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Write A Comment