ಕರ್ನಾಟಕ

ಟ್ವಿಟರ್‌ ತೆಕ್ಕೆಗೆ ಬೆಂಗಳೂರು ಮೂಲದ ಜಿಪ್‌ ಡಯಲ್‌ ಮೊಬೈಲ್‌ ವ್ಯಾಸ್‌: ರೂ 247 ಕೋಟಿಗೆ ಖರೀದಿ ಅಂದಾಜು

Pinterest LinkedIn Tumblr

twitter-logo-33

ನವದೆಹಲಿ: ಬೆಂಗಳೂರು ಮೂಲದ ಜಿಪ್‌ ಡಯಲ್‌ ಮೊಬೈಲ್‌ ವ್ಯಾಸ್‌ (ಮೌಲ್ಯಾಧಾರಿತ ಸೇವೆ) ಕಂಪೆನಿಯನ್ನು ಜನಪ್ರಿಯ ಸಾಮಾಜಿಕ ಜಾಲ­ತಾಣ ‘ಟ್ವಿಟರ್‌’ ಖರೀದಿಸಿದೆ. ಈ ಮೂಲಕ ಭಾರತ­ದಲ್ಲಿ ತನ್ನ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಖರೀದಿಯ ಮೊತ್ತದ ವಿವರಗಳನ್ನು ಟ್ವಿಟರ್‌ ಬಹಿ­ರಂಗ­ಪಡಿಸಿಲ್ಲ. ಆದರೆ ಇದು ರೂ 185 ಕೋಟಿ­ಯಿಂದ ರೂ 247 ಕೋಟಿಯಷ್ಟು ಎಂದು ಅಂದಾಜು ಮಾಡ­ಲಾಗಿದೆ. ಜಿಪ್‌ ಡಯಲ್‌ ಕಂಪೆನಿ ಟ್ವಿಟರ್‌ ಜತೆ ಈ ಮೊದಲೇ ಪಾಲುದಾರಿಕೆ ಹೊಂದಿತ್ತು.

‘ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ. ಹೀಗಾಗಿ ಹೆಚ್ಚಿನ ಗ್ರಾಹಕರನ್ನು ತಲುಪುವ ಮೂಲಕ ಸೇವೆಯನ್ನು ವೃದ್ಧಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ’ ಎಂದು ಟ್ವಿಟರ್‌ ಮಾರುಕಟ್ಟೆ ನಿರ್ದೇಶಕ (ಭಾರತ ಮತ್ತು ಆಗ್ನೇಯ ಏಷ್ಯಾ) ರಿಶಿ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಭಾರತ, ಬ್ರೆಜಿಲ್‌ ಮತ್ತು ಇಂಡೋನೇಷ್ಯಾ­ದಂತಹ ದೇಶಗಳಲ್ಲಿ ಆನ್‌ಲೈನ್‌ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇವರಲ್ಲಿ ಬಹಳಷ್ಟು ಜನರು ಮೊಬೈಲ್‌ ಮೂಲಕವೇ ತಮ್ಮ ಮೊದಲ ಆನ್‌ಲೈನ್‌ ಬಳಕೆಯ ಅನುಭವವನ್ನು ಪಡೆಯು­ತ್ತಿ­ದ್ದಾರೆ. ಆದರೆ ಮೊಬೈಲ್‌ ಅಂತ­ರ್ಜಾಲದ ಶುಲ್ಕ ಹೆಚ್ಚಿಗೆ ಇರುವುದರಿಂದ ಗ್ರಾಹಕರಿಗೆ ನಿಜವಾದ ಆನ್‌­ಲೈನ್‌ ಬಳಕೆಯ ಅನುಭವ ಸಿಗುತ್ತಿಲ್ಲ.

ಈ  ನಿಟ್ಟಿನಲ್ಲಿ ಟ್ವಿಟರ್‌, ಜಿಪ್‌ ಡಯಲ್ ಸಹ­ಯೋಗ­ದೊಂದಿಗೆ ಪ್ರತಿ­ಯೊ-­ಬ್ಬರಿಗೂ ಆನ್‌ಲೈನ್‌ ಬಳಕೆಯ ಅನುಭವ ದೊರಕುವಂತೆ ಮಾಡಲಿದೆ’ ಎಂದರು.

‘ಈ ಒಪ್ಪಂದದಿಂದಾಗಿ ಜಿಪ್‌ ಡಯಲ್‌ ಮುಂದಿನ ದಿನಗಳಲ್ಲಿ ಸ್ಯಾನ್‌ಫ್ರಾನ್ಸಿಸ್ಕೊ ಮತ್ತು ಸಿಲಿಕಾನ್‌ ವ್ಯಾಲಿಯಲ್ಲಿ ಹೆಚ್ಚು ಚಿರಪರಿಚಿತ­ವಾಗಲಿದೆ’ ಎಂದು ಜಿಪ್‌ ಡಯಲ್‌ ಸಹಸಂಸ್ಥಾಪಕ ಸಂಜೀವ್‌ ಸ್ವಾಮಿ ಹೇಳಿದರು.

ಮಿಸ್ಡ್‌್ ಕಾಲ್‌ಗೆ ಮಾಹಿತಿ ನೀಡುವುದು ‘ಜಿಪ್‌ ಡಯಲ್‌’ ಕಂಪೆನಿ ವಿಶೇಷ. ಗ್ರಾಹಕರು ಅಗತ್ಯ­ವಾದ ಮಾಹಿತಿ ಪಡೆಯಲು ಜಿಪ್‌ ಡಯಲ್‌ಗೆ ಮಿಸ್ಡ್‌ ಕಾಲ್‌ ನೀಡಿದರೆ ಸಾಕು. ಜಿಪ್‌ ಡಯಲ್‌ ಕೇಂದ್ರ­ದಿಂದಲೇ ಕರೆ ಮರಳಿ ಬರುತ್ತದೆ. ಆಗ ಗ್ರಾಹಕರು ತಮಗೆ ಬೇಕಾದ ಮಾಹಿತಿ ಪಡೆಯಬಹುದು.

Write A Comment