ರಾಷ್ಟ್ರೀಯ

ಕಿರಣ್‌ ಬೇಡಿಗೆ ಮಣೆ: ಬಿಜೆಪಿಯಲ್ಲಿ ಭುಗಿಲೆದ್ದ ಪ್ರತಿಭಟನೆ: ರಂಗೇರಿದ ಕಣ, ಸಾರ್ವಜನಿಕ ಚರ್ಚೆಗೆ ಕೇಜ್ರಿ ಪಂಥ, ಬೇಡಿ ನಕಾರ, ಕಾಂಗ್ರೆಸ್ ಸ್ವಾಗತ

Pinterest LinkedIn Tumblr

bjp

ಹೊಸದಿಲ್ಲಿ: ಮುಂಬರುವ ಫೆ.7ರಂದು ನಡೆಯುವ ದಿಲ್ಲಿ ವಿಧಾನಸಭೆ ಚುನಾವಣೆಗೆ ಬಿಜೆಪಿಯು ಸೋಮವಾರ ತಡರಾತ್ರಿ ತನ್ನ 62 ಹುರಿಯಾಳುಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದಿಲ್ಲಿ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಾಯರಿಗೆ ಟಿಕೆಟ್ ನಿರಾಕರಣೆ ಮಾಡಲಾಗಿದ್ದು, ಇವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಪಕ್ಷದ ಕಚೇರಿ ಮುಂದೆ ಜಮಾಯಿಸಿದ ಉಪಾಧ್ಯಾಯರ ನೂರಾರು ಬೆಂಬಲಿಗರು, ತಮ್ಮ ನಾಯಕನಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ಘೋಷಣೆ ಕೂಗಿದರು. ಕಚೇರಿಯಿಂದ ಹೊರ ಬಂದ ಉಪಾಧ್ಯಾಯರು, ಸ್ಪರ್ಧೆಯಿಂದ ಹಿಂದೆ ಸರಿದಿರುವುದು ತಮ್ಮದೇ ನಿರ್ಧಾರ ಎಂದರು.

”ಚುನಾವಣೆ ಗೆಲ್ಲುವ ಕಡೆ ಗಮನವಹಿಸಬೇಕು. ಪಕ್ಷದ ಬೆಂಬಲಿಗರು ಶಾಂತ ರೀತಿಯಲ್ಲಿ ಪ್ರಚಾರ ಆರಂಭಿಸಬೇಕು,” ಎಂದು ಕರೆ ನೀಡಿದರು.

ಈ ವೇಳೆ ಕೆಲವು ಕಾರ್ಯಕರ್ತರು ಉಪಾಧ್ಯಾಯರ ವಿರುದ್ಧವೇ ಸಿಡಿದೆದ್ದರು. ಉಪಾಧ್ಯಾಯರ ವಿರುದ್ಧವೇ ಬೆಂಬಲಿಗರು ಘೋಷಣೆ ಕೂಗಿದರು. ಸಂಸದ ರಮೇಶ್ ಬಿಧೂರಿ ಮಾತನಾಡಲು ಮುಂದಾದಾಗಲೂ ಅವರ ವಿರುದ್ಧ ಘೋಷಗಳು ಮೊಳಗಿದವು. ಇದರಿಂದ ಇಬ್ಬರೂ ತಬ್ಬಿಬ್ಬಾದರು.

ಉಪಾಧ್ಯಾಯರ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಸಂಘರ್ಷ ಭುಗಿಲೇಳಲಿದ್ದ ಸೂಚನೆ ಅರಿತ ನಾಯಕರು, ಕೂಡಲೇ ಪೊಲೀಸರನ್ನು ಕರೆಸಿಕೊಂಡರು. ಕಚೇರಿ ಮುಂದಿನ ಪ್ರತಿಭಟನಾ ನಿರತರನ್ನು ಪೊಲೀಸರು ಬಲವಂತವಾಗಿ ಬೇರೆಡೆ ಕರೆದೊಯ್ದರು. ಕಚೇರಿಗೆ ಹೆಚ್ಚಿನ ಭದ್ರತೆ ಕೊಟ್ಟರು.

ಬಿಜೆಪಿಯ ಕೇಂದ್ರ ಚುನಾವಣೆ ಸಮಿತಿ ಮತ್ತು ಸಂಸದೀಯ ಮಂಡಳಿ ಸಭೆ ಬಳಿಕ ಉಮೇದುವಾರರ ಪಟ್ಟಿ ಬಿಡುಗಡೆ ಮಾಡಿದ್ದ ಮಾಜಿ ಕೇಂದ್ರ ಸಚಿವ ಜೆ ಪಿ ನಡ್ಡಾ ಅವರು, ”ಉಪಾಧ್ಯಾಯರು ಈ ಸರ್ತಿ ಚುನಾವಣೆಗೆ ನಿಲ್ಲುತ್ತಿಲ್ಲ. ಸ್ಪರ್ಧೆಗಿಂತಲೂ ಹೆಚ್ಚಿನ ಜವಾಬ್ದಾರಿ ಅವರ ಹೆಗಲೇರಿದೆ. ದಿಲ್ಲಿಯಲ್ಲಿ ಪಕ್ಷಕ್ಕೆ ಗೆಲುವು ಖಾತ್ರಿಪಡಿಸುವ ಗುರುತರ ಹೊಣೆ ಅವರದಾಗಿದೆ,” ಎಂದಿದ್ದರು.

*ತಿವಾರಿ ಟಾಂಗ್: ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದಕ್ಕೆ ಉಪಾಧ್ಯಾಯ, ಕೇಂದ್ರ ಸಚಿವ ಹಾಗೂ ಹಿಂದಿನ ಚುನಾವಣೆಯ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಡಾ.ಹರ್ಷವರ್ಧನ್, ಸಂಸದ ಮನೋಜ್ ತಿವಾರಿ ಸೇರಿ ಬಿಜೆಪಿಯ ಕೆಲ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

”ಬೇಡಿ ಅವರು ಕಾರ್ಯಕರ್ತರಾಗಿಯಷ್ಟೇ ಪಕ್ಷ ಸೇರಿದ್ದಾರೆ. ಅವರು ಕಾರ್ಯಕರ್ತರ ಜತೆ ನಡೆದುಕೊಳ್ಳುವ ರೀತಿ ಸರಿಯಿಲ್ಲ. ಮೊದಲು ಆಕೆ ವಿನಯ ಕಲಿತುಕೊಳ್ಳಬೇಕು,” ಎಂದು ಬಿಹಾರ ಮೂಲದ ನಟ, ನಿರ್ದೇಶಕರೂ ಆಗಿರುವ ತಿವಾರಿ ಅಸಮಾಧಾನ ತೋಡಿಕೊಂಡಿದ್ದರು.

ಪಕ್ಷದ ಕಚೇರಿ ಮುಂದೆ ಹಾಕಲಾಗಿದ್ದ ಬೃಹತ್ ಫಲಕದಿಂದ ಬೇಡಿ ಹಾಗೂ ಉಪಾಧ್ಯಾಯರ ಮುಖದ ಭಾಗವನ್ನು ಕತ್ತರಿಸಲಾಗಿತ್ತು. ಆದರೆ, ಪಕ್ಷದಲ್ಲಿ ಅಸಮಾಧಾನವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

*ಕೇಜ್ರಿ ವಿರುದ್ಧ ನೂಪುರ್: ಹೊಸದಿಲ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಕ್ಷದ ಯುವ ಸದಸ್ಯೆ ನೂಪುರ್ ಶರ್ಮಾರನ್ನು ಬಿಜೆಪಿ ಕಣಕ್ಕಿಳಿಸಿದೆ. ನೂಪರ್ ಅವರು ದಿಲ್ಲಿ ವಿವಿಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾಗಿದ್ದವರು. ಬಿಜೆಪಿ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜತೆ ನಿಕಟ ಸಂಪರ್ಕ ಹೊಂದಿರುವವರು. 2013ರ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲೂ ನೂಪರ್ ಅವರನ್ನು ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಸಲು ಬಿಜೆಪಿ ಯೋಜಿಸಿತ್ತು. ಕಾಂಗ್ರೆಸ್‌ನಿಂದ ಕೇಜ್ರಿವಾಲ್ ವಿರುದ್ಧ ದಿಲ್ಲಿಯ ಮಾಜಿ ಸಚಿವ ಕಿರಣ್ ವಾಲಿಯಾ ಕಣಕ್ಕಿಳಿದಿದ್ದಾರೆ.

*ಹರ್ಷವರ್ಧನ್ ಕ್ಷೇತ್ರದಲ್ಲಿ ಬೇಡಿ: ಕಿರಣ್ ಬೇಡಿ ಅವರು ದಿಲ್ಲಿಯ ಕೃಷ್ಣನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಸಾಮಾನ್ಯವಾಗಿ ಈ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಡಾ.ಹರ್ಷವರ್ಧನ್ ಸ್ಪರ್ಧಿಸುತ್ತಿದ್ದರು.

ಉಳಿದಂತೆ ಇತ್ತೀಚೆಗೆ ಕಾಂಗ್ರೆಸ್ ತೊರೆದು ಕಮಲ ಹಿಡಿದಿದ್ದ ಮಾಜಿ ಕೇಂದ್ರ ಸಚಿವೆ ಕೃಷ್ಣಾ ತೀರತ್ ಅವರು ಪಟೇಲ್ ನಗರದಿಂದ, ಆಪ್‌ನ ಉಚ್ಛಾಟಿತ ಶಾಸಕ ವಿನೋದ್ ಕುಮಾರ್ ಬಿನ್ನಿ ಅವರು ಪತ್ಪರ್‌ಗಂಜ್‌ನಿಂದ, ವಿಜೇಂದ್ರ ಗುಪ್ತಾ ಅವರು ರೋಹಿಣಿಯಿಂದ, ಜನಕಪುರಿಯಿಂದ ಜಗದೀಶ್ ಮುಖಿ, ದಿಲ್ಲಿ ಕಂಟೋನ್ಮೆಂಟ್‌ನಿಂದ ಕರಣ್ ಸಿಂಗ್ ತನ್ವಾರ್, ಜಂಗ್ಪುರದಿಂದ ಆಪ್‌ನ ಮಾಜಿ ಶಾಸಕ ಹಾಗೂ ಮಾಜಿ ದಿಲ್ಲಿ ಸ್ಪೀಕರ್ ಎಂ ಎಸ್ ಧೀರ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

*ಚರ್ಚೆಗೆ ಕೇಜ್ರಿ ಪಂಥ, ಬೇಡೆಂದ ಬೇಡಿ
ಅಭ್ಯರ್ಥಿಗಳ ನಡುವೆ ನೀತಿ, ನಿಲುವುಗಳ ಕುರಿತು ಸಾರ್ವಜನಿಕ ಚರ್ಚೆ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮಾದರಿಯಲ್ಲಿ ದಿಲ್ಲಿ ಅಭಿವೃದ್ಧಿಗೆ ಸಂಬಂಧ ಸಾರ್ವಜನಿಕ ಚರ್ಚೆಗೆ ಬರುವಂತೆ ಕಿರಣ್ ಬೇಡಿ ಅವರಿಗೆ ಟ್ವೀಟ್ ಮೂಲಕ ಕೇಜ್ರಿವಾಲ್ ಆಹ್ವಾನ ನೀಡಿದ್ದಾರೆ. ಆದರೆ ಇದನ್ನು ಬೇಡಿ ನಿರಾಕರಿಸಿದ್ದಾರೆ.

”ಚರ್ಚೆ ಏನಿದ್ದರೂ ಸದನದಲ್ಲಿ ಮಾತ್ರ. ದಿಲ್ಲಿ ಅಭಿವೃದ್ಧಿಗಾಗಿ ನಾನು ಹಾಕಿಕೊಂಡಿರುವ ಗುರಿಗಳು, ಯೋಜನೆಗಳನ್ನು ಸಾಕಾರಗೊಳಿಸಿರುವುದರಲ್ಲಿ ನಾನು ನಂಬಿಕೆ ಇರಿಸಿರುವೆ. ಆದರೆ ಕೇಜ್ರಿವಾಲ್ ಅವುಗಳ ಕುರಿತು ಬರೀ ಚರ್ಚಿಸುವುದರಲ್ಲೇ ಆಸಕ್ತಿ ಹೊಂದಿದ್ದಾರೆಯೇ ಹೊರತು ಕೆಲಸ ಮಾಡಿ ತೋರಿಸುವುದರಲ್ಲಿ ಅಲ್ಲ,” ಎಂದು ಬೇಡಿ ಪ್ರತಿಕ್ರಿಯಿಸಿದ್ದಾರೆ.

ಆದರೆ, ಕೇಜ್ರಿವಾಲ್ ಆಹ್ವಾನವನ್ನು ಕಾಂಗ್ರೆಸ್ ಸ್ವಾಗತಿಸಿದೆ. ”ಇದೊಂದು ಆರೋಗ್ಯಕರ ಬೆಳವಣಿಗೆ. ಸಾರ್ವಜನಿಕ ಚರ್ಚೆಗೆ ನಾನು ಸಿದ್ಧ. ದಿಲ್ಲಿ ಜನತೆ ಹೋಲಿಕೆ ಮಾಡಿ ನಮ್ಮ ಮೌಲ್ಯಮಾಪನ ಮಾಡಲಿ. ಎಲ್ಲರಿಗೂ ಒಪ್ಪಿತ ರೀತಿಯಲ್ಲಿ ಟಿವಿ ವಾಹಿನಿಯಲ್ಲಿ ಚರ್ಚೆ ಮಾಡೋಣ. ಸಂಕೀರ್ಣ ಪ್ರಶ್ನೆಗಳಿಗೆ ಉತ್ತರಿಸುವುದರ ಮೂಲಕ ನಮ್ಮ ನಿಲುವುಗಳನ್ನು ಮಂಡಿಸೋಣ,” ಎಂದು ಕಾಂಗ್ರೆಸ್ ಧುರೀಣ ಅಜಯ್ ಮಾಕೆನ್ ತಿಳಿಸಿದ್ದಾರೆ.

*ಮುಚ್ಚಿದ ಬಾಗಿಲು: ಸಾರ್ವಜನಿಕ ಚರ್ಚೆಗೆ ಬರುವಂತೆ ಬೇಡಿ ಅವರಿಗೆ ಟ್ವೀಟ್ ಮೂಲಕ ಕೇಜ್ರಿವಾಲ್ ಆಹ್ವಾನ ನೀಡಿದ್ದರೂ, ಬೇಡಿ ಅವರು ಒಂದು ವರ್ಷದ ಹಿಂದೆಯೇ ತಮ್ಮ ಟ್ವೀಟರ್ ಖಾತೆಯಲ್ಲಿ ಕೇಜ್ರಿವಾಲ್ ಅವರನ್ನು ಸ್ಥಗಿತಗೊಳಿಸಿದ್ದಾರೆ. ಈ ಸ್ಥಗಿತವನ್ನು ತೆರವುಗೊಳಿಸುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಇದಕ್ಕೆ ಬೇಡಿ ಪ್ರತಿಕ್ರಿಯೆ ನೀಡಿಲ್ಲ.
———-
*ಒಳಿತು ಕೆಡುಕಿನ ಧರ್ಮಯುದ್ಧ: ದಿಲ್ಲಿಯ ಕೇಂದ್ರದಲ್ಲಿರುವ ವಾಲ್ಮೀಕಿ ಮಂದಿರದಿಂದ ಜಂತರ್ ಮಂತರ್‌ವರೆಗೆ ಕೇಜ್ರಿವಾಲ್ ಅವರು ಮಂಗಳವಾರ ರೋಡ್‌ಶೋ ನಡೆಸಿದರು. ”ಈ ಸರ್ತಿಯ ಚುನಾವಣೆ ಸತ್ಯದ ವಿರುದ್ಧ ಸುಳ್ಳು ಮತ್ತು ಭ್ರಷ್ಟಾಚಾರದ ಧರ್ಮಯುದ್ಧ,” ಎಂದು ಅವರು ಬಣ್ಣಿಸಿದರು. ಟ್ರಕ್‌ನ ಮೇಲೆ ನಿಂತಿದ್ದ ಕೇಜ್ರಿವಾಲ್ ಜತೆ ಮನೀಶ್ ಸಿಸೋದಿಯಾ ಮುಂತಾದ ನಾಯಕರು ಹಾಗೂ ಬೆಂಬಲಿಗರಿದ್ದರು. ಇವರ ರೋಡ್‌ಶೋಗೆ ಜನತೆ ಅಭೂತಪೂರ್ವವಾಗಿ ಸ್ಪಂದಿಸಿದರು. 2014ರ ಅ.2ರಂದು ಇದೇ ವಾಲ್ಮೀಕಿ ಮಂದಿರದಿಂದ ಪ್ರಧಾನಿ ಮೋದಿ ಅವರು ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ಕೊಟ್ಟಿದ್ದರು.
*ಕೇಜ್ರಿವಾಲ್‌ಗೆ ನೋಟಿಸ್: ಮತದಾರರಿಗೆ ಲಂಚ ಪಡೆಯುವಂತೆ ಕರೆ ನೀಡಿದ್ದ ಕೇಜ್ರಿವಾಲ್ ಅವರಿಗೆ ಚುನಾವಣೆ ಆಯೋಗವು ನೋಟಿಸ್ ಜಾರಿ ಮಾಡಿದೆ. ಹೇಳಿಕೆ ಕುರಿತು ಸ್ಪಷ್ಟನೆ ಕೊಡುವಂತೆ ಸೂಚಿಸಿದೆ. ಕಳೆದ ಭಾನುವಾರ ನಡೆದ ರ‌್ಯಾಲಿಯೊಂದರಲ್ಲಿ ಕೇಜ್ರಿವಾಲ್, ”ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳು ಕೊಡುವ ಹಣ ತಗೊಳ್ಳಿ. ಆದರೆ ಮತವನ್ನು ಮಾತ್ರ ಆಪ್‌ಗೇ ಹಾಕಿ,” ಎಂದಿದ್ದರು.
———–

*ಕಂಬ ಏರಿದ ಲವ್ಲಿ ಬೆಂಬಲಿಗ: ದಿಲ್ಲಿ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಗ್ರಹಿಸಿ ಅವರ ಅಭಿಮಾನಿಯೊಬ್ಬ ವಿದ್ಯುತ್ ಸರಬರಾಜು ಗೋಪುರ (ಟ್ರಾನ್ಸ್‌ಮಿಷನ್ ಟವರ್) ಏರಿದ್ದ. ಲವ್ಲಿ ಅವರು ಚುನಾವಣೆಗೆ ನಿಲ್ಲಲು ಒಪ್ಪಿಕೊಳ್ಳುವವರೆಗೂ ತಾನು ಗೋಪುರ ಇಳಿಯುವುದಿಲ್ಲ ಎಂದು ಹಠ ಹಿಡಿದಿದ್ದ. ಕೊನೆಗೆ ಪೊಲೀಸರು ಹರಸಾಹಸ ಮಾಡಿ ಆತನನ್ನು ಕೆಳಗಿಳಿಸಿದರು.

ಅಜಯ್ ಮಾಕೆನ್ ಅವರಿಗೆ ದಿಲ್ಲಿ ಚುನಾವಣೆ ಉಸ್ತುವಾರಿ ಕೊಟ್ಟಿರುವುದರಿಂದ ಹಾಗೂ ಅವರನ್ನು ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂಬಂತೆ ಬಿಂಬಿಸುತ್ತಿರುವುದರಿಂದ ಲವ್ಲಿ ಅಸಮಾಧಾನಗೊಂಡಿದ್ದು, ಪಕ್ಷದ ಪಟ್ಟಿಯಲ್ಲಿ ಹೆಸರಿದ್ದರೂ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

Write A Comment