ಸಮಯಕ್ಕೆ ಅನುಗುಣವಾಗಿ ಬದಲಾಗುತ್ತಾ; ಬದಲಾಯಿಸುತ್ತಾ ಸಾಗುತ್ತಿದೆ ತಂತ್ರಜ್ಞಾನ. ಎಷ್ಟೇ ಆಗಲಿ ‘ಸ್ಮಾರ್ಟ್’ ಯುಗ!
ಎಲ್ಲವೂ ಬೆರಳ ತುದಿಯಲ್ಲಿ ಸಿಗಬೇಕು; ಸಿಗುತ್ತಿದೆ ಕೂಡ. ಇದು ತಂತ್ರಜ್ಞಾನದ ಸಂಕ್ರಮಣ ಕಾಲ.
ಎಲ್ಲವೂ ಬದಲಾಗುತ್ತಿದೆ. ಫೋನ್‌ಗಳು ಸ್ಮಾರ್ಟ್ ಫೋನ್, ವಾಚ್‌ಗಳು ಸ್ಮಾರ್ಟ್‌ವಾಚ್‌ಗಳಾಗಿ ಬದಲಾಗಿ ವರ್ಷಗಳಾದವು. ಇದೀಗ ಬೀಗಗಳ ಕಾಲ. ಅವೂ ‘ಸ್ಮಾರ್ಟ್’ ಆಗುತ್ತಿವೆ; ಡಿಜಿಟಲ್ ರೂಪ ತಳೆಯುತ್ತಿವೆ.
ಡಿಗಿಪಾಸ್ ಎಂಬ ಕಂಪೆನಿ ಸ್ಮಾರ್ಟ್‌ಲಾಕ್ ಒಂದನ್ನು ತಯಾರಿಸಿದೆ. ಅದರ ಹೆಸರು ‘eGeeTouch’. ಈ ಬೀಗ ನಿಜಕ್ಕೂ ಲಗೇಜುಗಳನ್ನು ಭದ್ರವಾಗಿ ಇರಿಸುತ್ತದೆ. ಏಕೆಂದರೆ ಅದಕ್ಕೆ ‘ಬೀಗದ ಕೈ’ಯೂ ಇಲ್ಲ; ಕಳೆದುಕೊಳ್ಳುವ ಭೀತಿಯೂ ಇಲ್ಲ!
ಸಮೀಪ ಕ್ಷೇತ್ರ ಸಂವಹನ (ಎನ್‌ಎಫ್‌ಸಿ– ಇದು ಕೆಲ ಸೆಂಟಿಮೀಟರ್‌ಗಳಷ್ಟು ಸಮೀಪದಲ್ಲಿರುವ ಎರಡು ಸಾಧನಗಳ ನಡುವೆ ಚಿಕ್ಕ ಪ್ರಮಾಣದ ದತ್ತಾಂಶ ಸಾಗಣೆಗೆ ನೆರವಾಗುವ ಬ್ಲೂಟೂತ್‌ನಂತ ಸೌಲಭ್ಯ. ಆದರೆ ಬ್ಲೂಟೂತ್‌ನಂತೆ ಇದಕ್ಕೆ ಪೆರಿಂಗ್ ಕೋಡ್‌ಗಳ ಅಗತ್ಯವಿಲ್ಲ) ಸೌಲಭ್ಯದೊಂದಿಗೆ ಇದು ಕಾರ್ಯ ನಿರ್ವಹಿಸುತ್ತದೆ. ಸ್ಮಾರ್ಟ್ ಲಾಕ್ ಹಾಕಲು–ತೆರೆಯಲು ಮೊದಲೇ ಹೇಳಿದಂತೆ ಕೀಲಿಕೈ ಇಲ್ಲ; ಬೇಕಿಲ್ಲ. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಇಲ್ಲವೆ ಸ್ಮಾರ್ಟ್ ವಾಚ್ ಆದರೂ ಸಾಕಂತೆ. ಆದರೆ ನೀವು ಬಳಸುವ ಸ್ಮಾರ್ಟ್ ಸಾಧನಗಳು ಎನ್‌ಎಫ್‌ಸಿ ಸೌಲಭ್ಯ ಹೊಂದಿರಬೇಕು ಅಷ್ಟೇ.
ಒಂದು ವೇಳೆ ಬಳಕೆದಾರರ ಬಳಿ ಎನ್ಎಫ್‌ಸಿ ಸೌಲಭ್ಯ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಲ್ಲದಿದ್ದರೂ ಚಿಂತೆಯಿಲ್ಲ. ಅದಕ್ಕೂ ಉತ್ತರವಿದೆ. ಎನ್‌ಎಫ್‌ಸಿ ಜೊತೆಗೆ ಪ್ರತಿಜೋಡಿ ಹೊಂದಿರುವ ಸ್ಟಿಕರ್‌ಗಳು ಹಾಗೂ ಟ್ಯಾಗ್‌ಗಳು ಲಭ್ಯ ಇವೆ. ಅವುಗಳ ಮೂಲಕವೂ ಸ್ಮಾರ್ಟ್‌ಲಾಕನ್ನು ನಿರ್ವಹಿಸಬಹುದು ಎಂಬುದು ಕಂಪೆನಿ ಹೇಳಿಕೊಂಡಿದೆ.
ಅತಿ ಉಷ್ಣ–ಅತಿ ಶೀತ ಯಾವುದೇ ವಾತಾವರಣಕ್ಕೂ ಅದು ಕೇರ್ ಮಾಡದೇ ಕೆಲಸ ಮಾಡುತ್ತದೆಯಂತೆ. ಅಲ್ಲದೇ ಅಮೆರಿಕದ ಸಾರಿಗೆ ಭದ್ರತಾ ಆಡಳಿತದಿಂದ ಭೇಷ್ ಎನಿಸಿಕೊಂಡಿದೆ ಸ್ಮಾರ್ಟ್‌ಲಾಕ್.
ಬೀಗದ ಕ್ಷೇತ್ರದಲ್ಲಿ ಕ್ರಾಂತಿಕಾರಿ ಎನ್ನಬಹುದಾದ ಈ ಸ್ಮಾರ್ಟ್‌ಲಾಕ್, ಬಳಕೆದಾರರಿಗೆ ಕೋಡ್‌ಗಳನ್ನು ನೆನಪಿಡುವ, ಕೀಗಳನ್ನು ಕಳೆದುಕೊಂಡು ಪರದಾಡುವುದರಿಂದ ಮುಕ್ತಿ ನೀಡಬಹುದು ಎಂಬುದು ತಜ್ಞರ ಲೆಕ್ಕಾಚಾರ.
ಆದರೆ ಇದು ಕೂಡ ಸಮಸ್ಯೆಗಳಿಂದ ಮುಕ್ತವಾಗಿಲ್ಲ! ಇದರ ಏಕೈಕ ಸಮಸ್ಯೆ ಎಂದರೆ ಚಾರ್ಜ್ ಮಾಡುವುದು. ಚಿಕ್ಕ ಯುಎಸ್‌ಬಿ ಮೂಲಕ ಪವರ್ ಮೋಡ್‌ನಲ್ಲಿಟ್ಟು ಇದನ್ನು ಚಾರ್ಜ್ ಮಾಡಬಹುದು. ಆದರೆ ಬಳಕೆದಾರ ವಿದ್ಯುತ್ ಸಿಗದ ಪ್ರದೇಶ, ಪರಿಸ್ಥಿತಿಯಲ್ಲಿ ಸಿಲುಕಿದರೆ, ಅದರ ಚಾರ್ಜ್ ಮುಗಿದುಹೋಗಿದ್ದರೇ ಅದನ್ನು ಸಂಪೂರ್ಣವಾಗಿ ಒಡೆಯದೇ ವಿಧಿಯಿಲ್ಲವಂತೆ!
ಇದೇ ತಿಂಗಳು ಆರಂಭದಲ್ಲಿ ಅಮೆರಿಕದ ಲಾಸ್‌ವೇಗಾಸ್‌ನಲ್ಲಿ ‘ಕನ್‌ಸ್ಯೂಮರ್ ಎಲೆಕ್ಟ್ರಾನಿಕ್ಸ್ ಷೋ’ದಲ್ಲಿ ಇದನ್ನು ಪರಿಚಯಿಸಲಾಗಿದೆ.
