ನವದೆಹಲಿ: ಆರ್ಥಿಕ ಪ್ರಗತಿಯ ವೇಗ ಹೆಚ್ಚಿಸಲು ದೇಶದ 101 ನದಿಗಳನ್ನು ಜಲ ಮಾರ್ಗಗಳಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆ ಯನ್ನು ಕೇಂದ್ರ ಸರ್ಕಾರ ಹೊಂದಿದೆ.
‘ಜಲ ಮಾರ್ಗಗಳ ನಿರ್ಮಾಣ ನನ್ನ ಸಚಿವಾಲಯದ ಪ್ರಮುಖ ಆದ್ಯತೆಯಾಗಿದೆ. ಜಲ ಮಾರ್ಗಗಳಾಗಿ ಪರಿವರ್ತಿಸಲು 101 ನದಿಗಳನ್ನು ಗುರುತಿಸಲಾಗಿದೆ. ಇದು ಅತ್ಯಂತ ಅಗ್ಗದ ಸಂಚಾರ ವ್ಯವಸ್ಥೆಯಾಗಲಿದೆ’ ಎಂದು ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಬಂದರು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಯಾವುದೇ ನದಿಯನ್ನು ಜಲ ಮಾರ್ಗವಾಗಿ ಪರಿವರ್ತಿಸಲು ಅವಕಾಶ ನೀಡುವ ಮಸೂದೆಗೆ ಸಂಸತ್ತಿನ ಒಪ್ಪಿಗೆ ಬೇಕಾಗಿದೆ. ಈತನಕ ಸರ್ಕಾರ ಐದು ನದಿಗಳನ್ನು ಮಾತ್ರ ಜಲಮಾರ್ಗಗಳಾಗಿ ಗುರುತಿಸಿದೆ ಎಂದು ಅವರು ತಿಳಿಸಿದ್ದಾರೆ.
ರಸ್ತೆ ಮತ್ತು ರೈಲು ಸಾರಿಗೆಗಿಂತ ಜಲ ಸಾರಿಗೆ ಅಗ್ಗ. ಹಾಗಿದ್ದರೂ ಜಲ ಸಾರಿಗೆಯ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿಲ್ಲ. ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳಲಿದೆ. ಜಲ ಮಾರ್ಗಗಳು ಆರ್ಥಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಲಿವೆ ಎಂದು ಗಡ್ಕರಿ ವಿವರಿಸಿದರು.
ರಸ್ತೆಯ ಮೇಲಿನ ಸಂಚಾರ ಹೊರೆ ತಗ್ಗಿಸಲು ಸಚಿವಾಲಯವು ಬದ್ಧವಾಗಿದೆ. ಹೀಗಾಗಿ ಕಿಲೋಮೀಟರ್ಗೆ 50 ಪೈಸೆ ಮಾತ್ರ ವೆಚ್ಚ ತಗಲುವ ಜಲ ಸಾರಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ನದಿ, ಸರೋವರ, ಕಾಲುವೆ, ಖಾರಿಗಳು, ಹಿನ್ನೀರು ಇತ್ಯಾದಿಯನ್ನು ಒಳನಾಡು ಜಲಸಾರಿಗೆಗೆ ಬಳಸಿ ಕೊಳ್ಳಲಾಗುವುದು. ಇವುಗಳಲ್ಲಿ 14,500 ಕಿಲೋ ಮೀಟರ್ ಜಲ ಮಾರ್ಗ ಅಭಿವೃದ್ಧಿಗೆ ಅವಕಾಶ ಇದೆ.
ಪ್ರಧಾನ ಮಂತ್ರಿ ಜಲ ಮಾರ್ಗ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದರು. ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿ ಕಾರವು (ಐಡಬ್ಲ್ಯುಎಐ) ಇತ್ತೀಚೆಗೆ ರಾಷ್ಟ್ರೀಯ ಜಲಮಾರ್ಗ–5 ಅಭಿವೃದ್ಧಿಗೆ ಒಡಿಶಾ ಸರ್ಕಾರ, ಪಾರಾದೀಪ್ ಬಂದರು ಮತ್ತು ಧಮ್ರಾ ಬಂದರುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ರಾಷ್ಟ್ರೀಯ ಜಲಮಾರ್ಗ–5 ಅಭಿವೃದ್ಧಿಗೆ ಪೂರ್ವ ಕರಾವಳಿ ಕಾಲುವೆಯನ್ನು ಬ್ರಹ್ಮಿಣಿ ಮತ್ತು ಮಹಾನದಿ ಮುಖಜ ಭೂಮಿಯ ನದಿಗಳೊಂದಿಗೆ ಜೋಡಿಸಲಾಗಿದೆ. ದಕ್ಷಿಣ ಬಕಿಂಗ್ಹ್ಯಾಮ್ ಕಾಲುವೆಯಲ್ಲಿ ಶೋಲಿಂಗ ನಲ್ಲೂರು–ಕಲ್ಲಪಕ್ಕಂ ರಾಷ್ಟ್ರೀಯ ಜಲಮಾರ್ಗ–4 ಮಂಜೂರಾಗಿದೆ. ರಾಷ್ಟ್ರೀಯ ಜಲ ಮಾರ್ಗ 1, 2 ಮತ್ತು 3 ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಗಡ್ಕರಿ ತಿಳಿಸಿದ್ದಾರೆ.
ರಾಷ್ಟ್ರೀಯ ಜಲ ಮಾರ್ಗಗಳು: ರಾಷ್ಟ್ರೀಯ ಜಲ ಮಾರ್ಗಗಳೆಂದು ಘೋಷಿಸಲಾಗಿರುವ ಐದು ನದಿ ಮಾರ್ಗಗಳು
1. ಗಂಗಾ–ಭಾಗೀರಥಿ–ಹೂಗ್ಲಿ ನದಿ ವ್ಯವಸ್ಥೆ (ಅಲಹಾಬಾದ್‌ನಿಂದ ಹಲ್ದಿಯಾ– 1620 ಕಿ. ಮೀ)
2. ಬ್ರಹ್ಮಪುತ್ರಾ ನದಿ (ಧುಬ್ರಿಯಿಂದ ಸಾದಿಯ– 891 ಕಿ.ಮೀ)
3. ಪಶ್ಚಿಮ ಕರಾವಳಿ ಕಾಲುವೆ (ಕೋಟಪುರಂನಿಂದ ಕೊಲ್ಲಂ) ಮತ್ತು ಉದ್ಯೋಗಮಂಡಲ್, ಚಂಪಕರ ಕಾಲುವೆಗಳು (205 ಕಿ. ಮೀ)
4. ಗೋದಾವರಿ ಮತ್ತು ಕೃಷ್ಣಾ ನದಿಗಳಲ್ಲಿ ಕಾಕಿನಾಡ–ಪುದುಚೇರಿ ಕಾಲುವೆಗಳು (1078 ಕಿ. ಮೀ)
5. ಬ್ರಹ್ಮಿಣಿ, ಮಹಾನದಿ ಮುಖಜ ಭೂಮಿಯ ನದಿಗಳು ಸೇರಿದಂತೆ ಪೂರ್ವ ಕರಾವಳಿ ಕಾಲುವೆ (588 ಕಿ. ಮೀ).
