ಕರ್ನಾಟಕ

ಮಕ್ಕಳಿಗೆ ಒತ್ತಡ ಹೇರದಿರಿ: ಹೋಲಿಕೆ ಮಾಡಬಾರದು

Pinterest LinkedIn Tumblr

child

ಎಲ್ಲರಿಗೂ ತಮ್ಮ ಮಕ್ಕಳು ಓದಿನಲ್ಲಿ ಎಲ್ಲರಿಗಿಂತ ಮುಂದಿರಬೇಕು ಎಂಬ ಆಸೆ ಇರುತ್ತದೆ. ಆದರೆ  ಅತಿಯಾದ ಒತ್ತಡ ಹೇರುವುದರಿಂದ ಮಗುವಿನ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರ ಹೇಗಿರಬೇಕು ಎಂಬುದಕ್ಕೆ ಇಲ್ಲಿವೆ ಕೆಲವು ಸಲಹೆಗಳು…

ಬೆಳಿಗ್ಗೆ ಎದ್ದ ಕೂಡಲೇ ಗಡಿಬಿಡಿಯಲ್ಲಿ ತಯಾರಾಗುವ ಮಕ್ಕಳು ಬೆನ್ನು ಬಾಗುವಷ್ಟು ಭಾರದ ಬ್ಯಾಗ್‌ ಹೊತ್ತು ಶಾಲೆಗಳಿಗೆ ತೆರಳುತ್ತಾರೆ. ಅಲ್ಲಿ ಐದಾರು ಗಂಟೆ ಪಾಠ ಕೇಳಿಸಿಕೊಂಡು ನಂತರ ಕುರಿ ಮಂದೆಯಂತೆ ಸ್ಕೂಲ್‌ ವ್ಯಾನ್‌ನಲ್ಲಿ ಬೆಂದು ಬೆಂಡಾದ ಮಕ್ಕಳು ಸಂಜೆ ಮನೆ ಪಾಠಕ್ಕೆ ಹೋಗಿ ಅಲ್ಲಿಯೂ ಸ್ವಲ್ಪ ಪಾಠವನ್ನು ಕೇಳುತ್ತಾರೆ. ರಾತ್ರಿ ಮನೆಯಲ್ಲಿ ನಾಳಿನ ಹೋಂವರ್ಕ್‌ ಮುಗಿಸುವಷ್ಟರಲ್ಲಿ ಇಡೀ ದಿನವೇ ಕಳೆದು ಹೋಗಿರುತ್ತದೆ. ಮರುದಿನ ಬೆಳಿಗ್ಗೆ ಮತ್ತದೇ ಉಸಿರುಗಟ್ಟಿಸುವ ದಿನಚರಿ ಪ್ರಾರಂಭ. ಇದು ಇಂದಿನ ಮಕ್ಕಳ ಜೀವನ..

ಮಕ್ಕಳನ್ನು ಸ್ವಾವಲಂಬಿ ಹಾಗೂ ಉತ್ತಮ ನಾಗರಿಕರನ್ನಾಗಿ ಮಾಡುವ ಉದ್ದೇಶದಿಂದ ಶಿಕ್ಷಣ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ಸ್ಪರ್ಧೆ ಹೆಚ್ಚಿರುವುದರಿಂದ ಹೆಚ್ಚಿನ ಅಂಕ ಗಳಿಸಲು ಮಕ್ಕಳ ಮೇಲೆ ವಿಪರೀತವಾಗಿ ಒತ್ತಡ ಹೇರಲಾಗುತ್ತದೆ. ಇದರೊಂದಿಗೆ ಮಕ್ಕಳಿಗೆ ಬಿಡುವಿನ ಸಮಯ ನೀಡದಂತೆ ಸಂಗೀತ, ನೃತ್ಯ ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಗಳಿಗೆ ಸೇರಿಸಲಾಗುತ್ತದೆ.

ಶಾಲೆಗೆ ಹೋಗುವ ಮಕ್ಕಳಿಗೆ ಹೊರಗಡೆಯಿಂದ ತುಂಬಾ ಒತ್ತಡ ಇರುತ್ತದೆ. ಚೆನ್ನಾಗಿ ಓದಬೇಕು ಎಂಬ ಒತ್ತಡ, ಬೇರೆ ಮಕ್ಕಳೊಂದಿಗೆ ತಮ್ಮನ್ನ ತಾವು ಹೋಲಿಕೆ ಮಾಡಿಕೊಂಡು ತಾವೇ ಒಂದು ರೀತಿಯ ಒತ್ತಡ ಸೃಷ್ಟಿಸಿಕೊಳ್ಳುತ್ತಾರೆ. ಬೇರೆ ಮಕ್ಕಳು ಏನು ಮಾಡುತ್ತಾರೋ ಹಾಗೆ ನಾನು ಮಾಡಬೇಕು ಎಂದು ಅನುಕರಿಸಲು ಪ್ರಾರಂಭಿಸಿ, ನೆಮ್ಮದಿ ಹಾಳು ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಪೋಷಕರು ಮೊದಲು ಮಕ್ಕಳ ಮೇಲಿರುವ ಒತ್ತಡವನ್ನು ಅರ್ಥ ಮಾಡಿಕೊಳ್ಳಬೇಕು.

ಸಾಮರ್ಥ್ಯದ ಮೌಲ್ಯಮಾಪನ
ಪ್ರತಿಯೊಂದು ಮಕ್ಕಳು ವಿಭಿನ್ನ ರೀತಿಯ ಸಾಮರ್ಥ್ಯ ಹೊಂದಿರುತ್ತಾರೆ. ಸಾಮರ್ಥ್ಯ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತದೆ. ಕೆಲವರು ಗಣಿತದಲ್ಲಿ ಚುರುಕಾಗಿದ್ದರೆ, ಮತ್ತೆ ಕೆಲವರು ಕಲೆ, ಸಂಗೀತ ಅಥವಾ ನೃತ್ಯದಲ್ಲಿ ಮುಂದಿರುತ್ತಾರೆ. ಇದನ್ನು ಪೋಷಕರು ಗುರುತಿಸಬೇಕು. ಓದುವುದರಲ್ಲಿ ಮಗುವಿನ ಸಾಮರ್ಥ್ಯ ಎಷ್ಟಿದೆ. ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಎಷ್ಟಿದೆ ಎಂದು ಮೊದಲು ಮೌಲ್ಯಮಾಪನ ಮಾಡಿಕೊಳ್ಳಬೇಕು.

‘ಮಕ್ಕಳು ಎಲ್ಲ ವಿಷಯದಲ್ಲೂ ಹೆಚ್ಚಿನ ಅಂಕ ಗಳಿಸಲಿಲ್ಲ ಎಂದು ಕೂಗಾಡುವ ಪೋಷಕರು ಓದಿನಲ್ಲಿ ತಮ್ಮ ಮಗುವಿನ ಸಾಮರ್ಥ್ಯ ಅರಿಯಲು ಪ್ರಯತ್ನವೇ ಪಡುವುದಿಲ್ಲ. ಹೀಗಾಗಿಯೇ ಹೆಚ್ಚಿನ ಅಂಕಗಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಒಳ್ಳೆಯ ಮಾತನ್ನು ಆಡದೆ, ಕಡಿಮೆ ಅಂಕ ಗಳಿಸಿದ ಬಗ್ಗೆ ಮಕ್ಕಳ ಬಗ್ಗೆ ಅಸಮಾಧಾನ ತೋರುವುದರಿಂದ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತದೆ’ ಎನ್ನುತ್ತಾರೆ ಪ್ರೇರಣಾ ಅಕಾಡೆಮಿಯ ಮೀರಾ ರವಿ.

ಗುಣಾತ್ಮಕ ಅಂಶಗಳ ಬಗ್ಗೆ ಹೆಚ್ಚಿನ ಗಮನ
ಕಡಿಮೆ ಅಂಕ ಗಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಪ್ರತಿ ಬಾರಿ ಬಯ್ಯುವ ಬದಲು ಯಾವ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಸಿರುತ್ತಾರೋ ಅದರ ಬಗ್ಗೆ ಸ್ವಲ್ಪವಾದರೂ ಮೆಚ್ಚುಗೆ ವ್ಯಕ್ತಪಡಿಸಬೇಕು. ಆಗ ಮಗುವಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚುತ್ತದೆ ಹಾಗೂ ಕಡಿಮೆ ಅಂಕಗಳಿಸಿದ ವಿಷಯದಲ್ಲಿ ಪರಿಣತಿ ಪಡೆಯಲು ಪ್ರಯತ್ನಿಸುತ್ತಾರೆ ಎನ್ನುತ್ತಾರೆ ಅವರು.

ಹೋಲಿಕೆ ಮಾಡಬಾರದು
ಯಾವುದೇ ವಿಷಯವಾದರೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮಕ್ಕಳಿಂದ ಮಕ್ಕಳಿಗೆ ಭಿನ್ನವಾಗಿರುತ್ತದೆ. ಇದರಿಂದ ಒಬ್ಬರು ಹೆಚ್ಚಿನ ಅಂಕ ಗಳಿಸಿದರೆ ಮತ್ತೊಬ್ಬರು ಕಡಿಮೆ ಅಂಕ ಗಳಿಸುತ್ತಾರೆ. ತಮ್ಮ ಮಕ್ಕಳಿಗೆ ಕಡಿಮೆ ಅಂಕ ಬಂತು ಎಂದ ಕೂಡಲೇ ಸಂಬಂಧಿಕರ ಮಕ್ಕಳು, ಶಾಲೆಯಲ್ಲಿರುವ ಸಹಪಾಠಿಗಳು ಹಾಗೂ ನೆರೆಹೊರೆಯಲ್ಲಿರುವ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಇದರಿಂದ ಮಕ್ಕಳ ಮೃದುವಾದ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಗುವಿಗೆ ಬುದ್ಧಿ ಬರಲೆಂದು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿದರೆ ಅದು ಸದಾ ಋಣಾತ್ಮಕ ಪರಿಣಾಮ ಬೀರುತ್ತದೆ.

ಪೋಷಕರ ಮಹತ್ವಾಕಾಂಕ್ಷೆ
ಮಕ್ಕಳು ಸದಾ ತರಗತಿಗೆ ಮೊದಲು ಬರಬೇಕು ಎಂದು ಬಯಸುವುದು ತಪ್ಪು. ಮಕ್ಕಳು ತಮ್ಮ ಸಾಮರ್ಥ್ಯ ಹಾಗೂ ಗ್ರಹಿಕಾ ಶಕ್ತಿಗೆ ತಕ್ಕಂತೆ ಅಂಕಗಳನ್ನು ಗಳಿಸುತ್ತಾರೆ. ಅದಕ್ಕಾಗಿ ಅವರನ್ನು ಮನೆಪಾಠಕ್ಕೆ ಹಾಕುವುದರೊಂದಿಗೆ ಮನೆಯಲ್ಲಿ ತಾವೂ ಮತ್ತಷ್ಟು ಕಾಳಜಿ ತೋರಿಸುತ್ತಾರೆ. ಇದರಿಂದ ಮಗುವಿನ ಮೇಲಿರುವ ಒತ್ತಡ ಮತ್ತಷ್ಟು ಹೆಚ್ಚುತ್ತದೆ. ಮಗುವಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡುವುದಿಲ್ಲ.

ಇದರೊಂದಿಗೆ ಓದುವುದೆಂದರೆ ಭಯ ಪ್ರಾರಂಭವಾಗುತ್ತದೆ. ಇನ್ನು ಕಡಿಮೆ ಅಂಕ ಗಳಿಸುವ ಮಗು ಮನೆಪಾಠಕ್ಕೆ ಹೋದ ತಕ್ಷಣ ಶೇ 60 ರಿಂದ 80 ರಷ್ಟು ಅಂಕ ಗಳಿಸಬೇಕು ಎಂದು ಪೋಷಕರು ಬಯಸುತ್ತಾರೆ. ಇದು ತಪ್ಪು. ಶೇ60 ರಷ್ಟು ಅಂಕಗಳಿಸುವ ಮಗುವಿಗೆ 6 ತಿಂಗಳುಗಳಿಂದ ಒಂದು ವರ್ಷದ ಸಮಯ ನೀಡಬೇಕು. ನಂತರ ಒಂದರಿಂದ 2ರಷ್ಟು ಅಂಕ ಏರಿಕೆಯಾದರೆ ಅದು ಆ ಮಗು ಮಾಡಿದ ಸಾಧನೆ. ಅದಕ್ಕೆ ಪ್ರೋತ್ಸಾಹ ನೀಡಬೇಕು. ಹೀಗೆ ಮಗು ಹಂತ ಹಂತವಾಗಿ ಪರಿಣತಿ ಪಡೆಯುವಂತೆ ಪ್ರೋತ್ಸಾಹಿಸಬೇಕು. ಯಾವುದೇ ಮಗು ಒಂದೇ  ವರ್ಷದಲ್ಲಿ ಶೇ 60 ರಿಂದ 80ರಷ್ಟು ಅಂಕಗಳಿಸಲು ವಾಸ್ತವದಲ್ಲಿ ಸಾಧ್ಯವೇ ಇಲ್ಲ. ಅದಕ್ಕೆ ಪೋಷಕರಿಗೆ ತಾಳ್ಮೆ ಇರಬೇಕು ಎಂದು ಅಭಿಪ್ರಾಯ ಪಡುತ್ತಾರೆ ತಜ್ಞರು.

ಮಕ್ಕಳಿಗೆ ಬಿಡುವಿನ ವೇಳೆ ನೀಡಿ
7ರಿಂದ 8 ಗಂಟೆ ಶಾಲೆಯಲ್ಲಿ ಕಳೆದು ಬರುವ ಮಗುವಿಗೆ ಸ್ವಲ್ಪ ಸಮಯವಾದರೂ ಬಿಡುವು ನೀಡಬೇಕು. ಶಾಲೆಯಿಂದ ಬಂದ ತಕ್ಷಣ ತಿಂಡಿ ಕೊಟ್ಟು, ಓದಲು ಕೂರುವಂತೆ, ಮನೆ ಪಾಠಕ್ಕೆ ಹೋಗುವಂತೆ ಅಥವಾ ನೃತ್ಯ, ಸಂಗೀತ ಶಾಲೆಗೆ ಹೋಗುವಂತೆ ಒತ್ತಡ ಹೇರಬಾರದು. ಶಾಲೆಯಿಂದ ಬಂದ ತಕ್ಷಣ ಮಗು ತನಗಿಷ್ಟ ಬಂದಂತೆ ಇರಲು ಸ್ವಲ್ಪ ಸಮಯ ಕೊಡಬೇಕು. ಈ ಸಮಯದಲ್ಲಿ ಮಗು ತನಗೆ ಇಷ್ಟ ಬಂದಂತೆ ಕಾಲ ಕಳೆಯಲು ಅವಕಾಶ ಮಾಡಿಕೊಡಬೇಕು. ಇದರಿಂದಾಗಿ ಶಾಲೆಯಿಂದ ಒತ್ತಡದಲ್ಲಿ ಬರುವ ಮಗುವಿಗೆ ಕೊಂಚ ರಿಲ್ಯಾಕ್ಸ್‌ ಮಾಡಿದಂತಾಗುತ್ತದೆ. ಇಲ್ಲವಾದಲ್ಲಿ ಶಾಲೆಯಿಂದ ಬಂದ ಮಕ್ಕಳು ಕೂಡಲೆ ಮನೆಪಾಠ, ಪಠ್ಯೇತರ ಚಟುವಟಿಕೆಗಳು ಎಂದು ಹೋದರೆ ಅವರಿಗೆ ಮಾನಸಿಕವಾಗಿ ವಿಶ್ರಾಂತಿ ಮಾಡಲು ಸಾಧ್ಯವೇ ಆಗುವುದಿಲ್ಲ.

ಕೇಳುಗರಾಗಿರಬೇಕು
ಮಕ್ಕಳು ಏನು ಹೇಳುತ್ತಾರೆ ಎಂದು ಪೋಷಕರು ತಾಳ್ಮೆಯಿಂದ ನಿಧಾನವಾಗಿ ಕೇಳಬೇಕು. ಶಾಲೆಯಲ್ಲಿ, ಹೊರಗಡೆ ಏನಾಯಿತು, ಆ ದಿನದ ದಿನಚರಿ ಹೇಗಿತ್ತು, ನಡೆದ ಘಟನೆಗಳ ಬಗ್ಗೆ ಮಕ್ಕಳು ಮುಕ್ತವಾಗಿ ಹೇಳುವಂತ ವಾತಾವರಣ ಸೃಷ್ಟಿಸಬೇಕು. ಇದರಿಂದ ಅವರು ಎದುರಿಸುವ ಸಮಸ್ಯೆಗಳನ್ನೂ ಹೇಳಿಕೊಳ್ಳಲು ಪ್ರಾರಂಭಿಸುತ್ತಾರೆ. ಇದರಿಂದ ಮಗು ಮಾನಸಿಕವಾಗಿ ಎದುರಿಸುವ ಒತ್ತಡ ಕಡಿಮೆಯಾಗುತ್ತದೆ.

ಮಕ್ಕಳ ಸಮಸ್ಯೆ ಗುರುತಿಸಿ
ಯಾವುದೇ ಒಂದು ವಿಷಯದಲ್ಲಿ ಹಿಂದುಳಿದಿದೆ ಎಂದರೆ ಅದಕ್ಕೆ ಸಂಬಂಧಿಸಿದಂತೆ ಏನೋ ಸಮಸ್ಯೆ ಎದುರಿಸುತ್ತಿದೆ ಎಂದರ್ಥ. ಅದನ್ನು ಶಾಲೆಯ ಶಿಕ್ಷಕರು ಪತ್ತೆ ಹಚ್ಚಲು ಸಾಧ್ಯವಿಲ್ಲ. ಅದಕ್ಕಾಗಿ ಪೋಷಕರು ಮಕ್ಕಳು ಎದುರಿಸುವ ಸಮಸ್ಯೆಯನ್ನು ಪತ್ತೆಹಚ್ಚಲು ಮೊದಲ ಆದ್ಯತೆ ನೀಡಬೇಕು.

ತುಂಬ ಚೆನ್ನಾಗಿ ಓದು ಮಕ್ಕಳಿಗೆ ಬರೆಯಲು ತೊಂದರೆಯಾಗುತ್ತದೆ. ಎಲ್ಲಾ ಓದಿದ್ದರೂ ಪರೀಕ್ಷಾ ಕೊಠಡಿ ಪ್ರವೇಶಿಸುತ್ತಿದ್ದಂತೆ ಮಗು ಎಲ್ಲವನ್ನೂ ಮರೆಯುತ್ತದೆ. ಇನ್ನೂ ಕೆಲವರಿಗೆ ಗಣಿತ, ಇಂಗ್ಲಿಷ್‌ ಹಾಗೂ ವಿಜ್ಞಾನ ಏನೂ ಮಾಡಿದರೂ ಕಷ್ಟ ಏನಿಸುತ್ತದೆ. ಇವೆಲ್ಲ ಕಲಿಕಾ ಸಮಸ್ಯೆಗಳು (ಲರ್ನಿಂಗ್‌ ಡಿಫಿಕಲ್ಟಿ). ಇದನ್ನು ಪತ್ತೆ ಹಚ್ಚಲು ಕೆಲವು ಖಾಸಗಿ ಸಂಸ್ಥೆಗಳು ಮೌಲ್ಯಮಾಪನ ಪರೀಕ್ಷೆಯನ್ನೂ ಕೈಗೊಳ್ಳುತ್ತಾರೆ.

ಮನೆ ಪಾಠದ ಅವಶ್ಯಕತೆ
ಎಲ್ಲ ಮಕ್ಕಳಿಗೂ ಮನೆ ಪಾಠದ ಅಗತ್ಯ ಇರುವುದಿಲ್ಲ. ಮನೆ ಪಾಠಕ್ಕೆ ಸೇರಿಸಲು ನಿಗದಿತ ವಯಸ್ಸು ಇರುವುದಿಲ್ಲ. ಮನೆಯಲ್ಲಿ ವಿದ್ಯಾವಂತ ಪೋಷಕರು ಇದ್ದಲ್ಲಿ ಪೋಷಕರೇ ಸ್ವಲ್ಪ ಸಮಯ ನೀಡಿದರೆ ಸಾಕಾಗುತ್ತದೆ. ಒಂದು ವೇಳೆ ಮಗು ಓದುತ್ತಿರುವ ವಿಷಯಗಳು ಪೋಷಕರಿಗೆ ಹೇಳಲು ಸಾಧ್ಯವಾಗದಾಗ ಹಾಗೂ ಮಗುವಿಗೆ ಕಲಿಯಲು ಮಾರ್ಗದರ್ಶನದ ಅಗತ್ಯ ಇದ್ದಲ್ಲಿ ಮಾತ್ರ ಮನೆ ಪಾಠಕ್ಕೆ ಕಳುಹಿಸಬಹುದು. ಇಲ್ಲವಾದಲ್ಲಿ ಮನೆ ಪಾಠದ ಅಗತ್ಯ ಇಲ್ಲ. ತುಂಬಾ ಚಿಕ್ಕವಯಸ್ಸಿನಿಂದ ಮನೆ ಪಾಠಕ್ಕೆ ಕಳುಹಿಸಿದರೆ ಮಕ್ಕಳು ಪರಾವಲಂಬಿಗಳಾಗುತ್ತಾರೆ. ಯಾರಾದರೂ ಇದ್ದರೆ ಮಾತ್ರ ಓದುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ.

‘ಐಕ್ಯೂ’ ಮಟ್ಟ ತಿಳಿಯುವ ವಿಧಾನ
ಮಕ್ಕಳಿಗಿರುವ ಸಮಸ್ಯೆಗಳನ್ನು ಪತ್ತೆ ಮಾಡಲು ‘ಎಜುಕೇಷನಲ್‌ ಅಸೆಸ್ಮೆಂಟ್‌’ ಎಂಬ ಪರೀಕ್ಷೆಗಳಿವೆ. ಇವುಗಳನ್ನು ಮಾಡುವ ಮೂಲಕ ಮಗುವಿಗೆ ಯಾವ ರೀತಿಯ ಸಮಸ್ಯೆ ಇದೆ, ಅದಕ್ಕೆ ಕಾರಣ ಏನು ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಇದನ್ನು 4 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾಡಬಹುದು. ಬೆಂಗಳೂರಿನಲ್ಲಿ ಇಂತಹ ಪರೀಕ್ಷೆಗಳನ್ನು ಮಾಡುವ ಹಲವು ಸಂಸ್ಥೆಗಳಿವೆ. ಇದು ವೈದ್ಯಕೀಯ ಪರೀಕ್ಷೆ ಅಲ್ಲ. ಮಗುವಿಗೆ ಬರವಣಿಗೆಯಲ್ಲಿ, ನೆನಪಿನ ಶಕ್ತಿಯಲ್ಲಿ, ಗ್ರಹಿಕೆಯಲ್ಲಿ, ಗಣಿತ ಅಥವಾ ಇಂಗ್ಲಿಷ್‌ನಲ್ಲಿ ಸಮಸ್ಯೆ ಇದೆಯೇ ಎಂದು ಸುಲಭವಾಗಿ ಅರಿಯಬಹುದು. ವಯಸ್ಸಿಗೆ ತಕ್ಕಂತೆ ಮಗುವಿನ ‘ಐಕ್ಯೂ’ ಮಟ್ಟ ಇದೆಯೇ ಎಂದು ತಿಳಿಯಬಹುದು.

ಈ ಪರೀಕ್ಷೆಯಲ್ಲಿ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದ ನಂತರ ಮಗುವಿನ ಮನೆಯ ವಾತಾವರಣದ ಬಗ್ಗೆ ಅರಿಯುವ ಅಗತ್ಯ ಇರುತ್ತದೆ. ಜೊತೆಗೆ ಮಗುವಿನೊಂದಿಗೆ ಕುಟುಂಬ ಸದಸ್ಯರ ಒಡನಾಟ ಹೇಗಿದೆ ಎಂದು ಪರೀಕ್ಷಿಸಬೇಕು. ಆಗ ವೈದ್ಯರಿಂದ ಸಲಹೆ ಪಡೆಯಬೇಕಾಗುತ್ತದೆ.
–ಮೀರಾ ರವಿ, ಪ್ರೇರಣಾ ಅಕಾಡೆಮಿ

Write A Comment