ಕರ್ನಾಟಕ

ಗೋಮಾಳದಲ್ಲಿ ವಸತಿ ಬಡಾವಣೆ: ಡೆವಲಪರ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ: ರೂ. 282 ಕೋಟಿ ಮೌಲ್ಯದ 46 ಎಕರೆ ವಶ

Pinterest LinkedIn Tumblr

pvec18janueviction_0

ಬೆಂಗಳೂರು: ನಗರ ಜಿಲ್ಲಾಡಳಿತ ಹಾಗೂ ಬಿಎಂಟಿಎಫ್‌ ಅಧಿಕಾರಿಗಳು ನಗರ ಜಿಲ್ಲೆಯ ಮೂರು ತಾಲ್ಲೂಕು­ಗ­ಳಲ್ಲಿ ಶನಿವಾರ ಜಂಟಿ ಕಾರ್ಯಾಚರಣೆ ನಡೆಸಿ ರೂ. 282 ಕೋಟಿ ಮಾರುಕಟ್ಟೆ ಮೌಲ್ಯದ ರೂ. 46.19 ಎಕರೆ ಜಮೀನಿನ ಒತ್ತುವರಿ ತೆರವು ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟಾಚಲಪತಿ, ಬಿಎಂಟಿಎಫ್‌ ಎಡಿಜಿಪಿ ಸುನೀಲ್‌ ಕುಮಾರ್‌, ಸಹಾ­ಯಕ ಆಯುಕ್ತರಾದ ಎಲ್.ಸಿ. ನಾಗ­ರಾಜು, ಮಹೇಶ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಹರಳುಕುಂಟೆ ಗ್ರಾಮದ ಸರ್ವೆ ಸಂಖ್ಯೆ 51ರಲ್ಲಿ ಸರ್ಕಾರಿ ಕೆರೆಯ 5 ಎಕರೆ 28 ಗುಂಟೆ ಜಮೀನು ಒತ್ತುವರಿಯಾಗಿತ್ತು. ಇಲ್ಲಿ 1 ಎಕರೆ 28 ಗುಂಟೆ ಜಾಗದಲ್ಲಿ ಮನೆ, ದೇವಸ್ಥಾನ, ಈಜುಕೊಳ  ನಿರ್ಮಾಣ­ವಾಗಿತ್ತು.

ವಂದನಾ ಅಪಾರ್ಟ್‌­ಮೆಂಟ್‌ ಮಾಲೀ­ಕರು ಕೆರೆ ಒತ್ತುವರಿ ಮಾಡಿ­­ಕೊಂಡು ಈಜುಕೊಳ, ತಡೆ­ಗೋಡೆ ನಿರ್ಮಿಸಿದ್ದರು.  ಪಕ್ಕದಲ್ಲಿ ಸುಮಾರು 15 ಮನೆಗಳು ನಿರ್ಮಾಣ­ಗೊಂಡಿ­ದ್ದವು. ಅಯ್ಯಪ್ಪಸ್ವಾಮಿ ಸೇರಿ­ದಂತೆ ನಾಲ್ಕು ದೇವಸ್ಥಾನಗಳು ತಲೆ ಎತ್ತಿ­ದ್ದವು. ಇವುಗಳ ಒತ್ತುವರಿಯನ್ನು ತೆರವು­ಗೊಳಿಸಲಾಯಿತು.

‘ನಾಲ್ಕು ಎಕರೆ ಜಾಗದಲ್ಲಿ ಬಿಬಿಎಂಪಿ ಡಂಪಿಂಗ್‌ ಯಾರ್ಡ್ ಇದೆ. ಕೆರೆ ಜಾಗ­ವಾದ ಕಾರಣ ಇದನ್ನು ಬಿಡಿಎಗೆ ಹಸ್ತಾಂ­ತರಿಸಲಾಗುವುದು. ದೇವ­ಸ್ಥಾನ­ಗಳನ್ನು ಮುಜರಾಯಿ ಇಲಾಖೆ ಸುಪ­ರ್ದಿಗೆ ಒಪ್ಪಿ­ಸಲಾಗು­ವುದು’ ಎಂದು ತಹ­ಶೀಲ್ದಾರ್‌ ಬಿ.ಆರ್‌.ದಯಾನಂದ್‌ ತಿಳಿಸಿದರು.
ಮೈಲಸಂದ್ರ ಗ್ರಾಮದ ಸರ್ವೆ ಸಂಖ್ಯೆ 99ರಲ್ಲಿ 20 ಗುಂಟೆ ಜಾಗದಲ್ಲಿ ಸರ್ಕಾರಿ ಕೆರೆಯ ಒತ್ತುವರಿಯನ್ನು ತೆರವು ಮಾಡಲಾಯಿತು.
ಹೊಮ್ಮದೇವನಹಳ್ಳಿ ಗ್ರಾಮದಲ್ಲಿ ಸುಮಾರು 200 ಎಕರೆ ಜಾಗದಲ್ಲಿ ರಾಜಕಾರಣಿಯೊಬ್ಬರು ವಸತಿ ಬಡಾವಣೆ ನಿರ್ಮಿಸುತ್ತಿದ್ದಾರೆ.

ಗ್ರಾಮದ ಸರ್ವೆ ಸಂಖ್ಯೆ 57ರಲ್ಲಿ 19 ಎಕರೆ ಸರ್ಕಾರಿ ಗೋಮಾಳ ಜಾಗ ಇದೆ. ಈ ಜಾಗವನ್ನು ಅವರು ಒತ್ತುವರಿ ಮಾಡಿಕೊಂಡು ಸುಮಾರು 800 ನಿವೇಶನಗಳನ್ನು ಸಿದ್ಧ­ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ­ಡಳಿತ ಅವರಿಗೆ ನೋಟಿಸ್ ನೀಡಿತ್ತು. ಅದಕ್ಕೆ ಅವರು ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆ­ಯಲ್ಲಿ ಶನಿವಾರ ಬೆಳಿಗ್ಗೆ ಕಾರ್ಯಾ­ಚರಣೆ ಆರಂಭಿಸ­ಲಾಯಿತು. ಈ ವೇಳೆ ಕೆಲವರು ಬಂದು ಈ ಜಾಗ ತಮಗೆ ಸೇರಿದ್ದು ಎಂದು ವಾದಿಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

‘ಜಾಗದ ಬಗ್ಗೆ ದಾಖಲೆ ತೋರಿಸಿ’ ಎಂದು ಅಧಿಕಾರಿಗಳು ವಿನಂತಿಸಿದರು. ಆಗ ಅವರು, ‘ದಾಖಲೆಗಳನ್ನು ತೋರಿಸಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು. ಆಗ ಸ್ಥಳದಲ್ಲಿದ್ದ ಅಧಿಕಾರಿಗಳು ಒತ್ತುವರಿಗೆ ಅಡ್ಡಿ ಪಡಿಸುತ್ತಿದ್ದವರನ್ನು ತರಾಟೆಗೆ ತೆಗೆದು­ಕೊಂಡರು. ಬಳಿಕ ಬಿಎಂಟಿಎಫ್‌ ನೆರವಿ­ನಿಂದ ಜಿಲ್ಲಾಡಳಿತದ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದರು.

‘ಡೆವಲಪರ್‌ ಒಬ್ಬರು 19 ಎಕರೆ ಒತ್ತುವರಿ ಮಾಡಿಕೊಂಡು ವಸತಿ ಬಡಾವಣೆ ನಿರ್ಮಿಸಿದ್ದರು. ಅಲ್ಲದೆ ನಿವೇಶನ­ಗಳ ಬಗ್ಗೆ ಮಾಧ್ಯಮಗಳಲ್ಲಿ ಜಾಹೀ­ರಾತು ನೀಡಿದ್ದರು. ಹೀಗಾಗಿ ಡೆವಲಪರ್ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ. ದಕ್ಷಿಣ ತಾಲ್ಲೂಕಿನಲ್ಲಿ 241 ಕೋಟಿ ಮೌಲ್ಯದ ಒತ್ತುವರಿ ತೆರವು ಮಾಡಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟಾಚಲಪತಿ ತಿಳಿಸಿದರು.

ಆನೇಕಲ್ ಕಸಬಾ ಹೋಬಳಿಯ ಅಗಸತಿಮ್ಮನಹಳ್ಳಿ ಗ್ರಾಮದ ಸರ್ವೆ ನಂ. 16 ರಲ್ಲಿ 8.02 ಎಕರೆ ಸರ್ಕಾರಿ ಫಡಾ ಹಾಗು ಸರ್ಜಾಪುರ ಹೋಬಳಿ ಯಮರೆ ಗ್ರಾಮದ ಸರ್ವೆ ನಂಬರ್ ಕಾಣದ ಹದ್ದಿಗೆಹಳ್ಳದ 2.35 ಎಕರೆಯನ್ನು ಕಾನ್ಫಿ­ಡೆಂಟ್ ಹಾಗೂ ಕ್ರಿಸ್ಟಲ್ ಗ್ರೂಪ್‌­ನ­ವರು ಒತ್ತುವರಿ ಮಾಡಿದ್ದರು. ಈ ಒತ್ತುವರಿ­ಗಳನ್ನು ತೆರವು ಮಾಡಲಾಯಿತು.

ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಚಾಗಲಹಟ್ಟಿ ಗ್ರಾಮದ ಸರ್ವೆ ನಂ. 83 ರಲ್ಲಿ 10.14 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ.

Write A Comment