ಕರ್ನಾಟಕ

ರಾಮನಗರ: ಸೋಲೂರಿನ ಬಾಲಕನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ: 24ರಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಪ್ರಶಸ್ತಿ ಪ್ರದಾನ

Pinterest LinkedIn Tumblr

pvec18rmg sahnesh-ajn

ರಾಮನಗರ: ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಮಹಂತೇಶ್ವರ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಆರ್‌. ಸಹನೇಶ್‌ ಅವರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಲಭಿಸಿದ್ದು, ಇದೇ 24ರಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಪ್ರಶಸ್ತಿ ಪ್ರದಾನ ಮಾಡುವರು. ನಂತರ ಅವರು ಇದೇ 26ರಂದು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವರು.

ಶಾಲಾ ಬಸ್‌ ಅಪಘಾತಕ್ಕೀಡಾದಾಗ ಅದರಲ್ಲಿ ಇದ್ದ 15 ಮಕ್ಕಳನ್ನು ಬಸ್‌ನಿಂದ ಹೊರಗೆಳೆದು ಪ್ರಾಣ ರಕ್ಷಿಸಿದ ಕಾರಣಕ್ಕೆ ಸಹನೇಶ್‌ಗೆ ಈ ಶೌರ್ಯ ಪ್ರಶಸ್ತಿ ಲಭಿಸಿದೆ.  ಅವರು ಸೋಲೂರು ಮೂಲದ ರಾಜೇಶ್‌ ಮತ್ತು ಶೋಭಾ ದಂಪತಿಯ ಪುತ್ರ.

ಬಾಲಕನ ಸಾಧನೆ: ಕಳೆದ ಜೂನ್‌ 5ರಂದು ಶಾಲೆ ಮುಗಿಸಿಕೊಂಡು ವಿದ್ಯಾರ್ಥಿಗಳು ಮನೆಗೆ ಶಾಲಾ ಬಸ್‌ನಲ್ಲಿ ಹೋಗುವಾಗ ಸೋಲೂರು ಹೋಬಳಿಯ ಗುಡೇಮಾರನಹಳ್ಳಿ ಬಳಿಯ ಕೂಡ್ಲೂರು ಹತ್ತಿರ ಸಂಜೆ 4.30 ಗಂಟೆಗೆ ಅಪಘಾತ ಸಂಭವಿಸಿತ್ತು. ಬಸ್‌ ರಸ್ತೆ ಬದಿಯ ಗುಂಡಿಗೆ ಉರುಳಿ, ಬಾಗಿಲು ತೆಗೆಯದಂತಾಯಿತು. ಬಸ್‌ನಲ್ಲಿದ್ದ ಪುಟಾಣಿ ಮಕ್ಕಳು ಸೇರಿದಂತೆ ಹಲವು ಮಕ್ಕಳಿಗೆ ಗಾಯವಾಗಿ ರಕ್ತ ಸುರಿಯಲಾರಂಭಿಸಿತ್ತು.

ಇದರಿಂದ ಆಘಾತಗೊಂಡ ಬಸ್‌ ಚಾಲಕ ಕಿಟಕಿಯಿಂದ ಹಾರಿ ಪರಾರಿಯಾದ. ಬಸ್‌ನಲ್ಲಿ ಮಕ್ಕಳ ಚೀರಾಟ ಜೋರಾಗಿತ್ತು. ಬಸ್‌ನಲ್ಲಿದ್ದ ವಿದ್ಯಾರ್ಥಿ ಸಹನೇಶ್‌ ಸಮಯ ಪ್ರಜ್ಞೆ ಮೆರೆದು ಕಿಟಕಿಯ ಗಾಜನ್ನು ಒಡೆದ. ನಂತರ ಅಲ್ಲಿಂದ ಒಬ್ಬೊಬ್ಬರೇ ಮಕ್ಕಳನ್ನು ಬಸ್‌ನಿಂದ ಹೊರಗೆ ಕಳುಹಿಸಿದ. ಬಸ್‌ ಕೊನೆಯಲ್ಲಿ ಸಿಲುಕಿದ್ದ ಒಂದು, ಎರಡು ಮತ್ತು ಮೂರನೇ ತರಗತಿಯ ಮಕ್ಕಳನ್ನು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿನಿಯರನ್ನು ಹೊರಗೆ ಕರೆತರುವಲ್ಲಿಯೂ ಯಶಸ್ವಿಯಾದ.

‘ಖುಷಿಯಾಗಿದೆ’
‘ಶಾಲೆಯ ಮಕ್ಕಳನ್ನು ರಕ್ಷಿಸಿದ್ದಕ್ಕೆ ರಾಷ್ಟ್ರಮಟ್ಟದಲ್ಲಿ ಗೌರವ ಸಿಗುತ್ತಿರುವುದು ಖುಷಿಯಾಗಿದೆ. ಉತ್ಸಾಹ, ಹುರುಪು ಹೆಚ್ಚಿಸಿದೆ’ ಎಂದು ವಿದ್ಯಾರ್ಥಿ ಸಹನೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಮಗನ ಸಾಧನೆಯಿಂದ ಸಂತಸವಾಗಿದೆ. ನಮ್ಮ ಊರು, ತಾಲ್ಲೂಕು, ಜಿಲ್ಲೆ, ರಾಜ್ಯಕ್ಕೆ ಕೀರ್ತಿ ಬಂದಂತಾಗಿದೆ’ ಎಂದು ಸಹನೇಶ್‌ ತಂದೆ ರಾಜೇಶ್‌ ಹರ್ಷ ವ್ಯಕ್ತಪಡಿಸಿದದು.

Write A Comment