ಕರ್ನಾಟಕ

ಒಂದೂವರೆ ತಿಂಗಳಲ್ಲಿ ಎಂಟು ಕಡೆ ಕೃತ್ಯ: ಇರಿದು ಹಣ ದೋಚಿದ್ದ ಆರೋಪಿಗಳ ಬಂಧನ

Pinterest LinkedIn Tumblr

pvec17jan3Bdecoity

ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವೇಶ್ವರನಗರ ಪೊಲೀಸರು ಬಂಧಿಸಿರುವ ಆರೋಪಿಗಳು

ಬೆಂಗಳೂರು: ಒಂದೂವರೆ ತಿಂಗಳಲ್ಲಿ ಎಂಟು ಮಂದಿಗೆ ಚಾಕುವಿನಿಂದ ಇರಿದು ಹಣ–ಚಿನ್ನಾಭರಣ ದೋಚಿದ್ದ ಕುಖ್ಯಾತ ಡಕಾಯಿತರ ತಂಡವನ್ನು ಬಸವೇಶ್ವರ­ನಗರ ಪೊಲೀಸರು ಬಂಧಿಸಿದ್ದಾರೆ.

ಕಮಲಾನಗರದ ಗೋವಿಂದ (20), ರಾಮು (20), ಪುನೀತ್‌ (19), ನಿತ್ಯ ಅಲಿಯಾಸ್ ನಿತ್ಯಾನಂದ (19) ಹಾಗೂ ಕಿರಣ್ ಅಲಿಯಾಸ್ ಶೋಲೆ (19) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು, ಬಸವೇಶ್ವರನಗರ, ವಿಜಯ­ನಗರ, ಮಹಾಲಕ್ಷ್ಮಿಲೇಔಟ್ ಹಾಗೂ ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿ­ಯಲ್ಲಿ ಇದೇ ರೀತಿಯ ಕೃತ್ಯ ಎಸಗಿದ್ದಾರೆ. ಬಂಧಿತರಿಂದ ನಗದು, ಐದು ಮೊಬೈಲ್‌ಗಳು, ಮಾರಕಾಸ್ತ್ರ­ಗಳು ಹಾಗೂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಉದ್ಯೋಗವಿಲ್ಲದೆ ತಿರುಗಾಡುತ್ತಿದ್ದ ಆರೋಪಿಗಳು, ಸುಲಭವಾಗಿ ಹಣ ಗಳಿಸಲು ತಂಡ ಕಟ್ಟಿಕೊಂಡು ಡಕಾಯಿ­ತಿಗೆ ಇಳಿದಿದ್ದರು. ಬೆಳಗಿನ ಜಾವ 3 ಗಂಟೆಗೆ ಬೈಕ್‌ಗಳಲ್ಲಿ ರಸ್ತೆಗಿಳಿಯುತ್ತಿದ್ದ ಇವರು, ಒಂಟಿಯಾಗಿ ಓಡಾಡುವ­ವರನ್ನು ಅಡ್ಡಗಟ್ಟುತ್ತಿದ್ದರು.  ನಂತರ ಆರೋಪಿ ಗೋವಿಂದ, ಅವರಿಗೆ ಚಾಕು­ವಿನಿಂದ ಇರಿಯುತ್ತಿದ್ದ. ಉಳಿದವರು ಹಣ, ಮೊಬೈಲ್, ಚಿನ್ನಾಭರಣ ಕಿತ್ತು­ಕೊಳ್ಳುತ್ತಿದ್ದರು. ಇದೇ ರೀತಿ ಕೆಲವೇ ತಾಸುಗಳಲ್ಲಿ ಹಲವು ಕಡೆ ಕೃತ್ಯ ಎಸಗಿ 5.30ಕ್ಕೆ ಮನೆಗೆ ಮರಳುತ್ತಿದ್ದರು.

ಜ.5ರ ಬೆಳಿಗ್ಗೆ ಬಸವೇಶ್ವರನಗರದಲ್ಲಿ ಎಸ್‌ಬಿಎಂ ಬ್ಯಾಂಕ್‌ನ ಕೆ.ಜಿ.ರಸ್ತೆ ಶಾಖೆಯ ಉಪ ವ್ಯವಸ್ಥಾಪಕ ವಾಸುದೇವ್ ಅವರ ಮೇಲೆ ಹಲ್ಲೆ ನಡೆಸಿ ₨ 300 ಹಾಗೂ ಚಿನ್ನದ ಉಂಗುರ ದೋಚಿದ್ದ ಆರೋಪಿಗಳು, ನಂತರದ 30 ನಿಮಿಷಗಳಲ್ಲೇ ಮಹಾ­ಲಕ್ಷ್ಮಿ ಲೇಔಟ್‌ನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿ ಸುಮನ್‌ ಅವರಿಗೆ ಚಾಕು­ವಿನಿಂದ ಇರಿದು ಚಿನ್ನದ ಸರ ಹಾಗೂ ಕೈ ಗಡಿಯಾರ ದೋಚಿದ್ದರು.

‘ಇತ್ತೀಚೆಗೆ ನಡೆದ ಕೆಲ ಕೃತ್ಯಗಳ ನಡುವೆ ಸಾಮ್ಯತೆ ಇತ್ತು. ಹೀಗಾಗಿ ಒಂದೇ ತಂಡದ ಸದಸ್ಯರು ಎಲ್ಲ  ಪ್ರಕರಣಗಳಲ್ಲಿ ಭಾಗಿಯಾಗಿರುವ ಅನು­ಮಾನ ವ್ಯಕ್ತವಾಯಿತು. ಆರೋಪಿಗಳ ಪತ್ತೆಗೆ ವಿಜಯನಗರ ಎಸಿಪಿ ಎಸ್‌.ಕೆ.­ಉಮೇಶ್ ನೇತೃತ್ವದಲ್ಲಿ ವಿಶೇಷ ತಂಡ­ವನ್ನು ರಚಿಸಲಾಯಿತು’ ಎಂದು ಮಾಹಿತ ನೀಡಿದರು.

ಬೆಳಗಿನ ಜಾವ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಬಸವೇಶ್ವರನಗರ ಸಮೀಪದ ವಾಟರ್‌­ಟ್ಯಾಂಕ್‌ ರಸ್ತೆಯಲ್ಲಿ ಆರೋಪಿ­ಗಳನ್ನು ಬಂಧಿಸಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಟೆಕ್ಕಿ ಮನೆಯಲ್ಲಿ ಕಳವು
ಪರಪ್ಪನ ಅಗ್ರಹಾರ ಸಮೀಪದ ಜಿ.ಕೆ.­ಲೇಔಟ್‌ನಲ್ಲಿ ಗುರುವಾರ ಬೀಗ ಮುರಿದು ಸಾಫ್ಟ್‌ವೇರ್‌ ಉದ್ಯೋಗಿ ತುಳಸಿರಾಮ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ₨ 4 ಲಕ್ಷ ದೋಚಿ ಪರಾರಿಯಾಗಿದ್ದಾರೆ.

‘ತಮ್ಮನ ಮದುವೆ ಸಮಾರಂಭ­ಕ್ಕೆಂದು ಮಧ್ಯಾಹ್ನ 2 ಗಂಟೆಗೆ ಕುಟುಂಬ ಸದಸ್ಯರೆಲ್ಲ ಸರ್ಜಾಪುರಕ್ಕೆ ಹೋಗಿದ್ದೆವು. ರಾತ್ರಿ 1 ಗಂಟೆಗೆ ಮನೆಗೆ ಹಿಂದಿರುಗಿ­ದಾಗ ಬಾಗಿಲು ತೆರೆದಿತ್ತು. ಒಳಗೆ ಹೋಗಿ ಅಲ್ಮೆರಾ ನೋಡಿದಾಗ ₨ 4 ಲಕ್ಷ ಕಳವಾಗಿತ್ತು’ ಎಂದು  ತುಳಸಿ­ರಾಮ್ ಅವರು ಪರಪ್ಪನ ಅಗ್ರಹಾರ ಠಾಣೆಗೆ ದೂರು ಕೊಟ್ಟಿದ್ದಾರೆ.

ಬೆರಳಚ್ಚು ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ. ಸಮೀಪದ ಕಟ್ಟ­ಡ­ದ ಸಿ.ಸಿ ಕ್ಯಾಮೆರಾ ಪರಿಶೀ­ಲಿಸಲಾ­ಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಸ್‌ ಡಿಕ್ಕಿ: ಟೈಲರ್ ಸಾವು
ಅಣ್ಣನ ತಿಥಿಗೆ ಆಹ್ವಾನ ಪತ್ರಿಕೆ ಹಂಚಲು ಹೋಗುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಪ್ರಮೋದ್‌ (28) ಎಂಬುವರು ಸಾವನ್ನಪ್ಪಿರುವ ಘಟನೆ  ಗೊರಗುಂಟೆಪಾಳ್ಯದ ಮೆಟ್ರೊ  ನಿಲ್ದಾಣದ ಬಳಿ ಶುಕ್ರವಾರ ನಡೆದಿದೆ. ಪ್ರಮೋದ್‌, ಮಧ್ಯಾಹ್ನ 12.30ರ ಸುಮಾರಿಗೆ ಪತ್ನಿ ಜೊತೆ  ರಾಜಾಜಿನಗರದಲ್ಲಿರುವ ಸಂಬಂಧಿಕರ ಮನೆಗೆ ಅಣ್ಣನ ತಿಥಿಯ ಆಹ್ವಾನ ಪತ್ರಿಕೆ ಹಂಚಲು ಬೈಕ್‌ನಲ್ಲಿ ಹೋಗುತ್ತಿದ್ದರು.

ಆಗ ಗೊರಗುಂಟೆಪಾಳ್ಯದಿಂದ ಯಶವಂತಪುರಕ್ಕೆ ಹೋಗುತ್ತಿದ್ದ ಎಸ್‌ಆರ್ಎಸ್‌ ಟ್ರಾವೆಲ್ಸ್‌ಗೆ ಸೇರಿದ ಬಸ್‌ (ಕೆಎ 01 ಡಿ 9108) ಗೊರಗುಂಟೆ ಪಾಳ್ಯದ ಮೆಟ್ರೊ ನಿಲ್ದಾಣದ ಬಳಿ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಬಸ್‌ ಡಿಕ್ಕಿ ಹೊಡೆಯುತ್ತಿದ್ದಂತೆ ಪ್ರಮೋದ್‌ ಕೆಳಗೆ ಬಿದ್ದಿದ್ದಾರೆ. ಆಗ ಅವರ ಎದೆಯ ಮೇಲೆ ಬಸ್‌ ಹರಿದಿದೆ.  ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪ್ರಮೋದ್‌ ಅವರ ಪತ್ನಿ ಪ್ರತಿಮಾ (23) ಗಾಯಗೊಂಡಿದ್ದಾರೆ.

Write A Comment