ಮನೋರಂಜನೆ

ಅನುವಾದದ ಸಮಸ್ಯೆಗಳ ಗೋಷ್ಠಿಯಲ್ಲೇ ಸಮಸ್ಯೆ!

Pinterest LinkedIn Tumblr

pvec17jan2015DKSS17ep

ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಂಡು ಗೋಷ್ಠಿಯ ಗಂಭೀರತೆಯಲ್ಲಿ ತಲ್ಲೀನರಾದ ಹಿರಿಯ ಸಾಹಿತಿಗಳು ಹಾಗೂ ಕಲಾವಿದರು

ಧಾರವಾಡ: ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದಲ್ಲಿ ‘ಕನ್ನಡದಲ್ಲಿ ಅನುವಾದದ ಸಮಸ್ಯೆಗಳು’  ಎಂಬ ಗೋಷ್ಠಿಯೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿತು. ಈ ಗೋಷ್ಠಿಯಲ್ಲಿ ಅನುವಾದಕಾರ­ರಾದ ಚಂದ್ರಕಾಂತ ಪೋಕಳೆ, ವಿಜಯಾ ಗುತ್ತಲ, ಪ್ರಧಾನ ಗುರುದತ್ತ ಪಾಲ್ಗೊಂಡಿ­ದ್ದರು. ವಿ.ಬಿ.ತಾರಕೇಶ್ವರ ನಿರ್ದೇಶಕರಾಗಿದ್ದರು.

ಅನುವಾದದ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಬದಲು ಸಂಪನ್ಮೂಲ ವ್ಯಕ್ತಿಗ­ಳಿಬ್ಬರು ವೈಯಕ್ತಿಕ ವಿವರಕ್ಕೆ ತೊಡಗಿ­ದ್ದರಿಂದ ಸಭಿಕರೊಬ್ಬರು ಎದ್ದು ನಿಂತು ‘ನಿಗದಿತ ವಿಷಯದ ಕುರಿತು ಮಾತನಾಡಿ’ ಎಂದು ತಿಳಿಸಿದರು. ಕೆಲವರು, ಗೋಷ್ಠಿಯೂ ಸಾಗಬೇಕಾದ ದಿಶೆಯ ಕುರಿತು ಚೀಟಿಯಲ್ಲಿ ಬರೆದು ಕಳುಹಿಸಿದ್ದೂ ಆಯಿತು. ಆದರೂ ಗೋಷ್ಠಿ ಸರಿ ಹಾದಿಗೆ ಬರಲಿಲ್ಲ.

ಇದನ್ನು ಸರಿದೂಗಿಸುವ ಪ್ರಯತ್ನ ಮಾಡಿದ ಪ್ರಧಾನ ಗುರುದತ್‌ ಅವರು, ವಿವಿಧ ಕ್ಷೇತ್ರಗಳಲ್ಲಿ ಎದುರಾಗುವ ಅನುವಾದದ ಸಮಸ್ಯೆಗಳನ್ನು ಹಾಸ್ಯದ ಮೂಲಕ  ವಿವರಿಸಿದರು. ‘ಒಮ್ಮೆ ಮೈಸೂರು ವಿವಿ ಪ್ರಾಧ್ಯಾಪಕರೊಬ್ಬರು ಪರೀಕ್ಷೆ ಅಂಕಪಟ್ಟಿ ಬಂದಿದ್ದರೂ, ಫಲಿತಾಂಶ ಪ್ರಕಟಿಸಿರಲಿಲ್ಲ.  ಈ ಕುರಿತು ಕುಲಪತಿಗಳು ಅವರನ್ನು  ಕೇಳಿದಾಗ ಒಂದು ವಿಷಯದ ಫಲಿತಾಂಶ ಇನ್ನೂ ಬಂದಿಲ್ಲ ಸರ್‌. ಅದೇ ಅಗ್ರಿಗೇಟ್‌ ಅಂತ ಇದಿಯಲ್ವಾ ಅದು ಎಂದರಂತೆ! ಅಂದಿನಿಂದ ಅವರಿಗೆ ಅಗ್ರಿಗೇಟ್‌ ಪ್ರೊಫೆಸರ್‌ ಎಂಬ ಹೆಸರು ಬಂತು’ ನೆನಪಿಸಿಕೊಳ್ಳುವ ಮೂಲಕ ವಿಷಯವನ್ನು ಸರಿಯಾಗಿ ಗ್ರಹಿಸದಿದ್ದಾಗ ಆಗುವ ಸಮಸ್ಯೆಯನ್ನು ವಿವರಿಸಿದರು. ಆಗ ಸಭೆ ಒಂದು ಕ್ಷಣ ನಗೆಗಡಲಲ್ಲಿ ತೇಲಾಡಿತು.

ಅನಾಹುತ: ಕೆಲವೊಮ್ಮೆ ಶಬ್ದಕೋಶಗಳು ನಮ್ಮ ದಾರಿ ತಪ್ಪಿಸಬಹುದು ಎಂಬುದಕ್ಕೆ  ರ್‍ಯಾಂಡಮ್‌ ಡಿಕ್ಷನರಿಯಲ್ಲಿ ಗಾಂಧಿ ಶಬ್ದಕ್ಕೆ ‘ಹಿಂದೂ ರಿಲೀಜಿಯಸ್‌ ಲೀಡರ್‌’ ಎಂಬ ಅರ್ಥವಿರುವುದನ್ನು ತಿಳಿಸಿ, ‘ವಿಷಯ, ಭಾಷೆ ಮೇಲೆ ಪ್ರಭುತ್ವವಿಲ್ಲದಿದ್ದರೆ ಈ ರೀತಿಯ ಅನಾಹುತಗಳಾಗುತ್ತವೆ’ ಎಂಬುದನ್ನು ಉದಾಹರಿಸಿದರು.

ನಿವೃತ್ತ ಮುಖ್ಯ ಕಾರ್ಯದರ್ಶಿ ಪ್ರಹ್ಲಾದ ಮಹಿಷಿ ಮಾತನಾಡಿ, ‘ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಾದರೆ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದವಾಗುವ ಕೃತಿಯ ಗುಣಮಟ್ಟ ಹೆಚ್ಚಬೇಕು. ಇಂಗ್ಲಿಷ್‌ ಭಾಷೆಯ ಮೇರು ಕೃತಿಗಳು ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿಲ್ಲ. ಅವುಗಳ ಅನುವಾದ ಆಗುವ ಅಗತ್ಯವಿದೆ’ ಎಂದರು.

ಗೋಷ್ಠಿ ಹಾದಿತಪ್ಪಿದ್ದರ ಬಗ್ಗೆ ಕಾರ್ಯಕ್ರಮದ ಕೊನೆಯಲ್ಲಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ವಿ.ಬಿ. ತಾರಕೇಶ್ವರ, ‘ಸಂವಹನದ ತಪ್ಪಿನಿಂದ ಈ ಸಮಸ್ಯೆ ಉಂಟಾಯಿತು. ನನಗೆ ಬಂದ ನೋಟ್‌ನಲ್ಲಿ ಇದುವರೆಗೂ ಭಾಷಾಂತ­ರ­ವನ್ನು ನಾವು ಅರ್ಥ ಮಾಡಿ­ಕೊಂಡಿರುವ ರೀತಿ, ಹೊಸ ಸಿದ್ಧಾಂತ ಬರುತ್ತಿದೆ. ಆ ಹಿನ್ನೆಲೆಯಲ್ಲಿ ನಾವು ಯಾವ ರೀತಿ ಭಾಷಾಂತರ ಪ್ರಕ್ರಿಯೆ­ಯನ್ನು ಅರ್ಥ ಮಾಡಿಕೊಳ್ಳಬೇಕು ಅನ್ನುವ ಅಂಶ ಇತ್ತು’ ಎಂಬ ವಿವರಣೆ ನೀಡಿದರು. ‘ಆದರೆ ಅದೂ ಸಾಧ್ಯವಾಗಲ್ಲಿಲ್ಲ ಅಲ್ವಾ’ ಎಂಬ ಕೂಗು ಸಭಿಕರಿಂದ ಕೇಳಿ ಬಂದಿತು.

ಹೊಸ ಬಗೆಯ ಚರ್ಚೆ ಅಗತ್ಯವಿತ್ತು
‘ಭಾಷಾಂತರ ಎಂಬುದು ಇತ್ತೀಚೆಗೆ ಬಂದ ಪರಿಕಲ್ಪನೆ. ಇಂಗ್ಲಿಷ್‌ಗೆ ಬೇರೊಂದು ಭಾಷೆಯಿಂದ ಭಾಷಾಂತರಗೊಂಡ ಕೃತಿ ಕನ್ನಡಕ್ಕೆ ಅನುವಾದಗೊಂಡಾಗ ಎದುರಾಗುವ ಚರ್ಚೆಯ ಅಗತ್ಯವಿತ್ತು. ಇಂಗ್ಲಿಷ್‌ನಲ್ಲಿ ಕರ್ತೃ, ಕ್ರಿಯಾಪದ ಉಪಯೋಗ ಮಾಡುವ ಪದ್ಧತಿಯೇ ಬೇರೆ, ಕನ್ನಡದಲ್ಲಿಯೇ ಬೇರೆ. ಜೊತೆಗೆ ಇಂಗ್ಲಿಷ್‌ನಲ್ಲಿ ಮೂರು ವಾಕ್ಯ ಇದ್ದರೆ ಕನ್ನಡದಲ್ಲಿ ಒಂದೇ ವಾಕ್ಯದಲ್ಲಿ ಅನುವಾದ ಮಾಡುತ್ತೇವೆ. ಆಗ ಎದುರಾಗುವ ಸಮಸ್ಯೆಗಳ ಮೇಲೆ ಬೆಳಕು ಚೆಲುವ ಅಗತ್ಯವಿತ್ತು’ ಎಂದು ಇತಿಹಾಸ ತಜ್ಞ ಷ.ಶೆಟ್ಟರ್‌ ತಿಳಿಸಿದರು.
ಪ್ರಬಂಧ ಏಕೆ ಹರಟೆ ಎನ್ನಿ…
‘ಮಿತ್ರ ಮಿತ್ರ ನಿನಗ್ಯಾರು ಶತ್ರು’ ಎನ್ನುತ್ತ ಮೈಕ್ ಹಿಡಿದವರು, ಮುಂದಿನ ಸಾಲಿನಲ್ಲಿ ಕುಳಿತಿದ್ದ ಲೇಖಕ ವೃಷಭೇಂದ್ರಸ್ವಾಮಿಯವರು. ಲಲಿತ ಪ್ರಬಂಧ ಗೋಷ್ಠಿಯಲ್ಲಿ ವೇದಿಕೆಯ ಮೇಲಿದ್ದ  ತಮ್ಮ ಗೆಳೆಯ ಅ.ರಾ. ಮಿತ್ರ ಅವರನ್ನು ಕೆಣಕಿದ ಅವರು ‘ಪ್ರಬಂಧ ಎಂದು ಏಕೆ ಕರೆ­ಯು­ತ್ತೀರಿ. ಹರಟೆ ಅನ್ನಬೇಕು’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಿತ್ರ ‘ನನ್ನ ಶತ್ರು ನೀನೆ’ ಎಂದು ಕೈ ತೋರಿ­ಸಿದಾಗ ಸಭೆಯಲ್ಲಿ ನಗೆಯುಕ್ಕಿತು.

ಪ್ರಬಂಧಗಳು ನಿಂತಿಲ್ಲ
ಲಲಿತ ಪ್ರಬಂಧದಲ್ಲಿ ಲಾಲಿತ್ಯ ಇರಬೇಕು. ಪ್ರಬಂಧಗಳು ಇನ್ನೂ ಸಂಪೂರ್ಣವಾಗಿ ನಿಂತು ಹೋಗಿಲ್ಲ. ಸಂಕ್ರಾಂತಿ ಅಂಗವಾಗಿ ‘ಪ್ರಜಾವಾಣಿ’ ಪತ್ರಿಕೆು ಮಹಿಳೆಯರಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿತ್ತು. ತೀರ್ಪು­ಗಾರರ ತಂಡದಲ್ಲಿ ನಾನೂ ಇದ್ದೆ. 673 ಮಹಿಳೆಯರು ಪ್ರಬಂಧ ಕಳುಹಿಸಿ­ದ್ದರು. ಇದೊಂದು ಉತ್ತಮ ಸಂಗತಿ.
– ಹೇಮಾ ಪಟ್ಟಣಶೆಟ್ಟಿ

ಶಿಕ್ಷಣದಲ್ಲಿ ಪ್ರಬಂಧಕ್ಕೆ ಮಹತ್ವ ಇಲ್ಲ
ಇವತ್ತಿನ ಶಿಕ್ಷಣ ಪದ್ಧತಿಯಲ್ಲಿ ಪ್ರಬಂಧಗಳಿಗೆ ಹೆಚ್ಚು ಮಹತ್ವ ಕೊಡುತ್ತಿಲ್ಲ. ಭಾಷೆಗೆ ಹೆಚ್ಚು ಪ್ರಾಮು­ಖ್ಯತೆ ಇಲ್ಲ. ಮೊದಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಪ್ರಬಂಧ ಬರವಣಿಗೆ ಇತ್ತು. ಆದರೆ, ಈಗ ಅದನ್ನು ಕೈಬಿಡಲಾಗುತ್ತಿದೆ.
– ಕೆ.ಸತ್ಯನಾರಾಯಣ

Write A Comment