ಕರ್ನಾಟಕ

ವಿಧ್ವಂಸಕ ಕೃತ್ಯಕ್ಕೆ ಹವಾಲಾ ಹಣ: ಭಯೋತ್ಪಾದಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ‘ಶಂಕಿತರು ಸ್ಫೋಟಕ ಸರಬರಾಜುದಾರರು’

Pinterest LinkedIn Tumblr

m.n.reddy_

ಬೆಂಗಳೂರು: ನಗರ ಪೊಲೀಸರು ಬಂಧಿಸಿರುವ ಇಂಡಿಯನ್‌ ಮುಜಾಹಿದಿನ್ (ಐ.ಎಂ) ಭಯೋತ್ಪಾದನಾ ಸಂಘಟನೆಯ ಶಂಕಿತ ಉಗ್ರರಿಗೆ, ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ವಿದೇಶದಿಂದ ಹವಾಲಾ ಮೂಲಕ ಹಣ ಬರುತ್ತಿದ್ದ ಸಂಗತಿ ಪೊಲೀಸ್‌ ತನಿಖೆಯಿಂದ ಬಯಲಾಗಿದೆ.

‘ಬಂಧಿತ ಸೈಯದ್ ಇಸ್ಮಾಯಿಲ್ ಅಫಕ್, ಸದ್ದಾಂ ಹುಸೇನ್, ಅಬ್ದುರ್ ಸಬೂರ್ ಹಾಗೂ ರಿಯಾಜ್‌ ಅಹಮದ್ ಸಯ್ಯದಿಗೆ ಬೇರೆ ಬೇರೆ ರಾಷ್ಟ್ರಗಳಿಂದ ಹವಾಲಾ ಹಣ ಬರು­ತ್ತಿತ್ತು’ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ತಿಳಿಸಿದ್ದಾರೆ.

ದೇಶದಿಂದ ಪರಾರಿಯಾಗಿರುವ ವಿವಿಧ ಭಯೋತ್ಪಾದನಾ ಸಂಘಟನೆಗಳ ಸದಸ್ಯರು ವಿದೇಶದಲ್ಲಿ ನೆಲೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಗಳು ಅವರಿಗಾಗಿ ಹುಡುಕಾಟ ನಡೆಸುತ್ತಿವೆ. ಬಂಧಿತ ಆರೋಪಿಗಳು ಆ ಉಗ್ರರನ್ನು ಹಲವು ಬಾರಿ ಭೇಟಿ­ಯಾಗಿರುವುದು ತನಿಖೆಯಿಂದ ಗೊತ್ತಾಗಿದೆ ಎಂದಿದ್ದಾರೆ.

ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸು­ವಂತೆ ಈ ನಾಲ್ವರಿಗೆ ವಿದೇಶದಲ್ಲಿನ ಉಗ್ರರು ಸೂಚನೆ ಕೊಡುತ್ತಿ­ದ್ದರು. ಜತೆಗೆ ಆ ಚಟುವಟಿಕೆಗಳಿಗೆ ಹವಾಲಾ ಹಣ ಹೊಂದಿಸಿ ಕೊಡು­ತ್ತಿದ್ದರು. ದೇಶದಲ್ಲಿ 2010ರ ನಂತರ ನಡೆದ ಬಾಂಬ್‌ ಸ್ಫೋಟಗಳಿಗೆ ಸಂಬಂಧಪಟ್ಟಂತೆ ಸ್ಫೋಟಕ ವಸ್ತುಗಳ ತಯಾರಿಕೆ, ಶೇಖರಣೆ, ಸರಬರಾಜು ಹಾಗೂ ಹಸ್ತಾಂತರದಲ್ಲಿ ಬಂಧಿತರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪೊಲೀಸ್‌ ಕಸ್ಟಡಿ: ಸೈಯದ್, ಸದ್ದಾಂ ಮತ್ತು ಅಬ್ದುರ್ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ರಿಯಾಜ್‌ನನ್ನು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾ­ಯಿತು. ಸಿಬ್ಬಂದಿ, ರಿಯಾಜ್‌ನನ್ನು ಹಿಂಬಾಲಿಸುತ್ತಿದ್ದ ಸಂಗತಿ ಆತನಿಗೆ ಗೊತ್ತಿರಲಿಲ್ಲ.

ಹೀಗಾಗಿ ಆತ ದುಬೈಗೆ ಪರಾರಿ­ಯಾಗಲು ಮುಂದಾಗಿದ್ದ ಎಂದು ಹೇಳುವುದು ಕಷ್ಟ. ಆತನ ಬಳಿ ಯಾವುದೇ ಸ್ಫೋಟಕ ವಸ್ತುಗಳು ಸಿಕ್ಕಿಲ್ಲ. ಹೆಚ್ಚಿನ ತನಿಖೆಗಾಗಿ ಆತ­ನನ್ನು ಜ.21ರವರೆಗೆ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು  ತಿಳಿಸಿದ್ದಾರೆ.

ಸ್ಫೋಟಕಗಳನ್ನಿಟ್ಟು ಬಂಧಿಸುವ ಚಾಳಿ ನಮ್ಮದಲ್ಲ: ರೆಡ್ಡಿ
ಬಂಧಿತರ ಪೋಷಕರು ವಿನಾ­ಕಾರಣ ಕೆಲ ಆರೋಪಗಳನ್ನು ಮಾಡು­ತ್ತಿ­­­ದ್ದಾರೆ. ಮಕ್ಕಳನ್ನು ಸಮರ್ಥಿಸಿ­ಕೊ­ಳ್ಳುವ ಉದ್ದೇಶಕ್ಕಾಗಿ ಪೊಲೀಸ­ರನ್ನು ದೂರು­­ತ್ತಿದ್ದಾರೆ. ಅವರ ನೋವು ನಮಗೆ ಅರ್ಥವಾ­ಗುತ್ತದೆ. ವಿದೇಶ­ದಿಂದ ಕರೆಗಳು ಬರುತ್ತಿದ್ದವು ಎಂಬ ಕಾರಣಕ್ಕೆ ಮಾತ್ರ ಈ ನಾಲ್ವ­ರನ್ನು ಬಂಧಿಸಿಲ್ಲ. ಪೊಲೀಸರು ಮನೆಯಲ್ಲಿ ಸ್ಫೋಟಕ ವಸ್ತು­ಗ­ಳನ್ನಿಟ್ಟು ಸುಳ್ಳು ಆರೋಪ­ದಡಿ ಬಂಧಿಸುವ ಪ್ರವೃತ್ತಿ ಬೆಳೆಸಿ­ಕೊಂಡಿಲ್ಲ. ಖಚಿತ ಮಾಹಿತಿ, ಸಾಕ್ಷ್ಯಾಧಾರ ಇಟ್ಟುಕೊಂಡೇ ಬಂಧಿಸಲಾಗಿದೆ ಎಂದು ಬೆಂಗ­ಳೂರು ಪೊಲೀಸ್‌ ಕಮಿಷನರ್ ಎಂ.ಎನ್‌.ರೆಡ್ಡಿ ಹೇಳಿದರು.

Write A Comment