ಕರ್ನಾಟಕ

ಆಗುಂಬೆ ಘಾಟಿ ರಸ್ತೆ ಕಾಮಗಾರಿ ವಿಳಂಬ

Pinterest LinkedIn Tumblr

pvec11115th-4ep

ತೀರ್ಥಹಳ್ಳಿ: ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಆಗುಂಬೆ ಘಾಟಿ ರಸ್ತೆ ಅಭಿವೃದ್ಧಿ ಕಾರ್ಯ ವಿಳಂಬ ವಾಗುವ ಸಾಧ್ಯತೆ ಈಗ ದಟ್ಟವಾಗಿದೆ. ಕಾಮಗಾರಿಗೆ ಸಿದ್ಧತೆಗಳು ಆರಂಭ ವಾಗಿದೆ ಎನ್ನುವಷ್ಟರಲ್ಲಿ ಕೆಲವು ತಾಂತ್ರಿಕ ಕಾರಣಗಳು ಕಾಮಗಾರಿ ವಿಳಂಬ ವಾಗುವಂತೆ ಮಾಡುತ್ತಿವೆ.

ಈ ಹಿಂದಿನ ತೀರ್ಮಾನದಂತೆ ಡಿಸೆಂಬರ್‌ 21ರಿಂದ ಘಾಟಿ ಮಾರ್ಗದ ವಾಹನ ಸಂಚಾರ  ಬಂದ್‌ ಮಾಡ ಬೇಕಾಗಿತ್ತು. ಆದರೆ ತೀರ್ಥಹಳ್ಳಿ ಎಳ್ಳ ಮಾವಾಸ್ಯೆ ಜಾತ್ರೆ ಕಾರಣ ಮುಂದೂಡ ಲಾಗಿತ್ತು. ಈ ಕಾಮಗಾರಿ ಡಿಸೆಂಬರ್‌ 24ರ ನಂತರ ಆರಂಭ ಗೊಳ್ಳಲಿದೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಭರವಸೆ  ನೀಡಿದ್ದರು.

ಕಾಂಕ್ರೀಟೀಕರಣ ಕಾಮಗಾರಿಯ ಸಲುವಾಗಿ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರವನ್ನು ಜ. 2ರಿಂದ ನಿಷೇಧಿಸಲಾಗಿದ್ದು, ಆಗುಂಬೆ ಘಾಟಿ ರಸ್ತೆಯಲ್ಲಿ ಈಗ ವಾಹನ ದಟ್ಟಣೆ ಹೆಚ್ಚಿದೆ. ಶಿರಾಡಿ ಘಾಟಿ ಬಂದ್‌ ಮಾಡಿ ದುರಸ್ತಿ ಕಾರ್ಯ ನಡೆಯುತ್ತಿರುವ ಹೊತ್ತಿನಲ್ಲಿಯೇ ಆಗುಂಬೆ ಘಾಟಿ ದುರಸ್ತಿ ಕಾರ್ಯಕ್ಕೆ ಮುಂದಾದರೆ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಲಿದೆ ಎಂಬ ಆತಂಕ ತಲೆದೋರಿದೆ.

ಹೀಗಾಗಿ ಆಗುಂಬೆ ಘಾಟಿ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬ ಮಾಡುವುದು ಅನಿವಾರ್ಯ ವಾಗಿದೆ ಎಂದು ಲೋಕೋಪಯೋಗಿ ಇಲಾ­ಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಆಗುಂಬೆ ಘಾಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿದೆ. ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಆಗುಂಬೆ ಘಾಟಿ ಒಳಪಡುತ್ತಿರು­ವುದರಿಂದ ಘಾಟಿ ದುರಸ್ತಿ ಕಾರ್ಯಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಲು ಮುಂದಾಗುತ್ತಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ.

ಸ್ಥಳೀಯ ಪ್ರಯಾಣಿಕರಿಗೆ ತೊಂದರೆ:
ಘಾಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕನಿಷ್ಠ ಮೂರು ತಿಂಗಳು ಕಾಲಾವಕಾಶ ಅಗತ್ಯವಿರುವುದರಿಂದ ಈ ಮಾರ್ಗದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಲಿದೆ.

ಘಾಟಿ ರಸ್ತೆಯಲ್ಲಿ ಸಂಚಾರ ಸ್ಥಗಿತ ಗೊಳ್ಳುವುದರಿಂದ ಬದಲಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಆಗುಂಬೆ, ಗುಡ್ಡೇಕೇರಿ, ಹೊಸೂರು, ಕೌರಿಹಕ್ಕಲು, ಮೇಗರ ವಳ್ಳಿ, ನಾಲೂರು ಭಾಗದ ಗ್ರಾಮಸ್ಥರು ಮುಂದಿಟ್ಟಿದ್ದರು.

ಆಗುಂಬೆ ಘಾಟಿ  ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಿದರೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಂಪರ್ಕಿಸುವ ಸಾವಿರಾರು ಪ್ರಯಾಣಿಕರು ಹುಲಿಕಲ್‌ ಅಥವಾ ಶೃಂಗೇರಿ ಕೆರೆಕಟ್ಟೆ ಘಾಟಿ ರಸ್ತೆಯನ್ನು ಅವಲಂಬಿಸಬೇಕಾಗುತ್ತದೆ. ಮಾತ್ರವಲ್ಲ. ಸುಮಾರು 60 ಕಿ.ಮೀ. ಹೆಚ್ಚು ದೂರ ಪ್ರಯಾಣಿಸ ಬೇಕಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಗೆ ಸೇರಿದ ಆಗುಂಬೆ ಘಾಟಿ ಮಾರ್ಗದ 2.5 ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸುಮಾರು ರೂ. 10 ಕೋಟಿ ಹಣ ಮಂಜೂರು ಮಾಡಿದೆ.  ಎರಡು ಪ್ರತ್ಯೇಕ ಟೆಂಡರ್‌ ಕರೆದು ಕಾಮಗಾರಿ ಅನುಷ್ಠಾನ ಗೊಳಿಸಲಾಗುತ್ತಿದೆ. ಘಾಟಿಯ ಗುಡ್ಡಕೊರೆದು ಸ್ವಲ್ಪ ಪ್ರಮಾಣದ ವಿಸ್ತರಣೆ ಮಾಡಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿದೆ. ಕಾಮಗಾರಿ ಅನುಷ್ಠಾನಕ್ಕೆ ಮೂರು ತಿಂಗಳ ಕಾಲಾವಕಾಶ ನಿಗದಿ ಮಾಡಲಾಗಿದೆ. ಆದರೆ, ಕೆಲವು ಎಡರು ತೊಡರುಗಳ ಕಾರಣದಿಂದಾಗಿ ಕಾಮಗಾರಿ ಆರಂಭ ವಿಳಂಬವಾಗುತ್ತಿದೆ.

ತೊಡಕು ಉಂಟಾಗದು: ‘ಶಿರಾಡಿ ಘಾಟಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿ­ರುವುದನ್ನು ಗಮನದಲ್ಲಿ ಇರಿಸಿಕೊಂಡು ಆಗುಂಬೆ ಘಾಟಿ ರಸ್ತೆ ಅಭಿವೃದ್ಧಿ ಕಾಮಗಾರಿ ಮುಂದೂಡಲು ಚಿಂತಿಸಲಾಗಿದೆ. ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಘಾಟಿ ರಸ್ತೆ ಅಭಿವೃದ್ಧಿ ಕೆಲಸಕ್ಕೆ ಮುಂದಾದರೆ ವಾಹನ ಸವಾರರಿಗೆ ತೊಂದರೆ ಉಂಟಾಗಲಿದೆ. ಅರಣ್ಯ ಇಲಾಖೆಯಿಂದ ಯಾವುದೇ ತೊಡಕು ಉಂಟಾಗ­ಲಾರದು’ ಎಂದು ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್‌ ಬಿ.ಎಸ್‌. ಬಾಲಕೃಷ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

Write A Comment