ಕರ್ನಾಟಕ

ತಪ್ಪಿದ ಹೆಲಿಕಾಪ್ಟರ್‌ ಅವಘಡ: ಮನೆ ದೇವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಪೂಜೆ

Pinterest LinkedIn Tumblr

cm

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಗ್ರಾಮವಾದ ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿಗೆ  ಭಾನುವಾರ ತೆರಳಿ ಮನೆ ದೇವರಾದ ಸಿದ್ದರಾಮೇಶ್ವರ ಸ್ವಾಮಿಗೆ ಕುಟುಂಬದವರೊಂದಿಗೆ  ವಿಶೇಷ ಪೂಜೆ ಸಲ್ಲಿಸಿದರು.

ಬೆಂಗಳೂರಿನ ಎಚ್ಎಎಲ್‌ ವಿಮಾನ ನಿಲ್ದಾಣದಲ್ಲಿ ಶನಿವಾರ ಮೈಸೂರಿಗೆ ಹೊರಡುವ ಮುನ್ನ ಹೆಲಿಕಾಪ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಪ್ರಯಾಣ ರದ್ದು ಮಾಡಿದ್ದರು. ಬಳಿಕ ರಸ್ತೆ ಮೂಲಕ ಮೈಸೂರಿಗೆ ಬಂದಿದ್ದರು. ಘಟನೆಯಿಂದಾಗಿ ಎಲ್ಲರಲ್ಲಿ ಆತಂಕ ಮನೆ ಮಾಡಿತ್ತು. ದೊಡ್ಡ ಕಂಟಕ ತಪ್ಪಿದ್ದರಿಂದ ಕುಟುಂಬದವರು ಹಾಗೂ ಆಪ್ತರ ಸಲಹೆ ಮೇರೆಗೆ ಮಧ್ಯಾಹ್ನ ೧೨ ಗಂಟೆಗೆ ಸಿದ್ದರಾಮೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿದ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಎರಡನೇ ಪುತ್ರ ಡಾ.ಯತೀಂದ್ರ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸುಮಾರು ೨೦ ನಿಮಿಷಗಳ ಕಾಲ ಪೂಜೆ ನಡೆಯಿತು. ಪೂಜೆ ಬಳಿಕ ಪಾರ್ವತಿ ಮತ್ತು ಯತೀಂದ್ರ ಅವರು ದೇವಸ್ಥಾನದಲ್ಲಿ ಹೆಚ್ಚು ಹೊತ್ತು ನಿಲ್ಲ­ಲಿಲ್ಲ. ಅಲ್ಲಿಂದ ನೇರವಾಗಿ ಸಿದ್ದರಾಮಯ್ಯ ಅವರ ಸಹೋದರ ಲೇ.ತಮ್ಮಯ್ಯ ಅವರ ಮನೆಗೆ ತೆರಳಿದರು.
ಬೆಳಿಗ್ಗೆ ೧೧.೪೦ರ ಸುಮಾರಿಗೆ ಸ್ವಗ್ರಾಮಕ್ಕೆ ತೆರಳಿದ ಮುಖ್ಯ­ಮಂತ್ರಿಯನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಹಿರಿಯರು ಕಿರಿಯರೆನ್ನದೆ ಮುಖ್ಯಮಂತ್ರಿ ಕೈ ಕುಲುಕಿದರು.

‘ಏನಪ್ಪಾ ಯಜಮಾನ ಚೆನ್ನಾಗಿ­ದ್ದೀಯ…’ ಎಂದು ಗ್ರಾಮೀಣ ಶೈಲಿಯಲ್ಲಿಯೇ ಹಿರಿಯರನ್ನು ಸಿದ್ದರಾಮಯ್ಯ ಮಾತನಾಡಿಸಿದರು. ಗ್ರಾಮದ ಸಮಸ್ಯೆಗಳು, ಮೂಲ ಸೌಕರ್ಯ ಕುರಿತು ಗ್ರಾಮಸ್ಥರು ಹೇಳು­ತ್ತಿದ್ದ ಸಮಸ್ಯೆಗಳನ್ನು ಸಮಾಧಾನ­ಚಿತ್ತದಿಂದಲೇ ಆಲಿಸಿ, ಅದಕ್ಕೆ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿ ಸ್ವಾಗತಕ್ಕೆ ಗ್ರಾಮವನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು.

ಮನೆ ಪರಿಶೀಲನೆ: ಸಿದ್ದರಾಮನಹುಂಡಿಯಲ್ಲಿ ಹಳೆ ಮನೆಯನ್ನೇ ಕೆಡವಿ ಹೊಸ ಮನೆ­ಯೊಂದನ್ನು ಸಿದ್ದರಾಮಯ್ಯ ಕಟ್ಟಿಸುತ್ತಿದ್ದಾರೆ. ನಿರ್ಮಾಣ ಹಂತ­ದಲ್ಲಿದ್ದ ಮನೆಗೆ  ತೆರಳಿದ ಮುಖ್ಯಮಂತ್ರಿ ‘೧೨ ಕಂಬದ ಮನೆ, ವಿನ್ಯಾಸ ಚೆನ್ನಾಗಿ ಬರಬೇಕು, ಗಾಳಿ–ಬೆಳಕಿನ ವ್ಯವಸ್ಥೆ ಚೆನ್ನಾಗಿರುವಂತೆ ನೋಡಿ­ಕೊಳ್ಳಬೇಕು’ ಎಂದು ಸಂಬಂಧ­ಪಟ್ಟವರಿಗೆ ಸೂಚಿಸಿದರು.

ಹಾವ್ಬತ್ತಿ ಮೀನು–ಮುದ್ದೆ ಊಟದ ಸವಿ
ಹಿರಿಯ ಸಹೋದರ ಲೇ.ತಮ್ಮಯ್ಯ ಅವರ ಮನೆಗೆ ಮಧ್ಯಾಹ್ನ ೧ ಗಂಟೆಗೆ ತೆರ-ಳಿದ ಸಿದ್ದರಾಮಯ್ಯ ಅವರಿಗೆ ನೆಚ್ಚಿನ ಖಾದ್ಯವಾದ ಹಾವ್ಬತ್ತಿ ಮೀನಿನ ಸಾರು– ಮುದ್ದೆ ಊಟ ಸಿದ್ಧವಾಗಿತ್ತು. ಜತೆಗೆ, ಅಲಸಂದೆಕಾಳಿನ ವಡೆ, ಉದ್ದಿನವಡೆ ಸಹ ಇತ್ತು. ಹುಣಸೂರು ಶಾಸಕ ಎಚ್‌.ಪಿ. ಮಂಜುನಾಥ್‌, ಮೇಯರ್‌ ಆರ್‌. ಲಿಂಗಪ್ಪ, ಮೈಸೂರು ನಗರ ಕಾಂಗ್ರೆಸ್‌ ಘಟಕ ಸಿ. ದಾಸೇಗೌಡ ಅವರೊಂದಿಗೆ ಊಟ ಸವಿದರು.

ಕುಟುಂಬದವರೊಂದಿಗೆ ಸಮಾಲೋಚನೆ:  ಊಟದ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆದ ಸಿದ್ದರಾಮಯ್ಯ, ಸಹೋದರ­ರಾದ ಸಿದ್ದರಾಮೇಗೌಡ, ರಾಮಣ್ಣ ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದರು. ಅನಾರೋಗ್ಯ­ಕ್ಕೀಡಾಗಿದ್ದ ರಾಮಣ್ಣನ ಯೋಗಕ್ಷೇಮ ವಿಚಾರಿಸಿದರು. ಬಳಿಕ ಸಂಬಂಧಿಕ­ರೊಂದಿಗೆ ಕೆಲ ಹೊತ್ತು ಹರಟಿದರು. ಮಧ್ಯಾಹ್ನ ೨ ಗಂಟೆಗೆ ಸ್ವಗ್ರಾಮದಿಂದ ಮೈಸೂರಿಗೆ ಪ್ರಯಾಣ ಬೆಳೆಸಿದರು.

ಪತ್ನಿ ಕಾಣಿಸಿಕೊಂಡಿದ್ದು ಇದೇ ಮೊದಲು!
ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಪತ್ನಿ ಪಾರ್ವತಿ ಅವರು ಸಾರ್ವಜನಿಕ-ವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು.
ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿ-ದಾಗ-ಲೂ ಪಾರ್ವತಿ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾದಾಗ ಅದಕ್ಕೆ ಬಾಗಿನ ಅರ್ಪಿಸಲು ಮುಖ್ಯ-ಮಂತ್ರಿ ಪತ್ನಿ ಸಮೇತರಾಗಿ ಬರುತ್ತಾರೆಂಬ ನಿರೀಕ್ಷೆ ಇತ್ತು. ಆದರೆ, ಮುಖ್ಯಮಂತ್ರಿ ಒಬ್ಬರೇ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದರು.
ಇದೇ ಮೊದಲ ಬಾರಿಗೆ ಪಾರ್ವತಿ ಅವರು ಸಾರ್ವಜನಿಕವಾಗಿ ಕಾಣಿಸಿ­ಕೊಂಡಿದ್ದರಿಂದ ಅವರನ್ನು ನೋಡಲು ದೇವಸ್ಥಾನದ ಬಳಿ ಗ್ರಾಮಸ್ಥರು ಕಾತರದಿಂದ ಕಾದು ನಿಂತಿದ್ದರು.

ಫೋಟೊ ತೆಗೆಯಲು ಸಿ.ಎಂ ಪತ್ನಿ ಆಕ್ಷೇಪ
ಮನೆದೇವರು ಸಿದ್ದರಾ­ಮೇಶ್ವರ­ಸ್ವಾಮಿಗೆ ಸಿದ್ದರಾಮಯ್ಯ ಅವರು ಪತ್ನಿ ಪಾರ್ವತಿ ಜತೆ ಪೂಜೆ ಸಲ್ಲಿಸುವ ವೇಳೆ ಛಾಯಾಗ್ರಾಹಕರು ಫೋಟೊ ತೆಗೆಯಲು ಮುಂದಾ-ದಾಗ ಮುಖ್ಯ­ಮಂತ್ರಿ ಆಪ್ತ ಸಹಾಯಕ ಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದರು.
ದೇವಸ್ಥಾನದ ಒಳಗೆ ಮುಖ್ಯಮಂತ್ರಿ ಕಚೇರಿ ಅಧಿಕೃತ ಛಾಯಾಗ್ರಾಹಕ ದಿಡ್ಡಹಳ್ಳಿ ರಘು ಮತ್ತು ಹವ್ಯಾಸಿ ಛಾಯಾಗ್ರಾಹಕ ಸುತ್ತೂರು ನಂಜುಂಡ­ನಾಯಕ ಮಾತ್ರ ಇದ್ದರು. ಪೂಜೆ ನಡೆಯುತ್ತಿದ್ದ ವೇಳೆ ಫೋಟೊ ಫ್ಲ್ಯಾಷ್ ಆದ ಕೂಡಲೇ ಹಿಂದೆ ಹಿದ್ದ ಕುಮಾರ್‌ ಏರುಧ್ವನಿಯಲ್ಲಿ ‘ಯಾರದು, ಫೋಟೊ ತೆಗೆಯಬೇಡಿ’ ಎಂದು ಕೂಗಿ-ಕೊಂಡರು. ಆಗ ಛಾಯಾಗ್ರಾಹಕರು ಫೋಟೊ ತೆಗೆಯುವುದನ್ನು ನಿಲ್ಲಿಸಿದರು.

ದೇವಸ್ಥಾನದಿಂದ ಪಾರ್ವತಿ ಅವರು ಹೊರಗೆ ಬಂದಾಗ ಕೆಲವರು ಮೊಬೈಲ್‌ನಲ್ಲಿ ಛಾಯಾಚಿತ್ರ ತೆಗೆಯಲು ಮುಂದಾದಾಗ ಅದಕ್ಕೂ ಆಕ್ಷೇಪ ವ್ಯಕ್ತಪಡಿಸಲಾಯಿತು. ‘ಸಾಹೇಬ್ರ  ಮನೆಯವರಿಗೆ ಪತ್ರಿಕೆಯಲ್ಲಿ ಫೋಟೊ ಹಾಕಿಸಿಕೊಳ್ಳಲು ಇಷ್ಟವಿಲ್ಲವಂತೆ. ಅದಕ್ಕೆ ಅವರು ಎಲ್ಲೂ ಫೋಟೊ ತೆಗೆಯಲು ಬಿಡುವುದಿಲ್ಲ’ ಎಂದು  ಗ್ರಾಮಸ್ಥರೊಬ್ಬರು ತಿಳಿಸಿದರು. ಮೈಸೂರಿನ ನಿವಾಸದಲ್ಲಿ ಬೆಳಿಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸಿದ್ದರಾಮಯ್ಯ ‘ಖಾಸಗಿ ಭೇಟಿಗಾಗಿ ಸ್ವಗ್ರಾಮಕ್ಕೆ ತೆರಳುತ್ತಿದ್ದೇನೆ. ಕೆಲಹೊತ್ತು ಗ್ರಾಮಸ್ಥರೊಂದಿಗೆ ಇದ್ದು ಹೋಗು­ತ್ತೇನೆ. ದಯಮಾಡಿ ಮಾಧ್ಯಮ­ದವರ್‌್ಯಾರೂ ಬರಬೇಡಿ’ ಎಂದು ಮನವಿ ಮಾಡಿದರು. ಹೀಗಾಗಿ, ಬೆರಳೆಣಿಕೆ­ಯಷ್ಟು ಪತ್ರಕರ್ತರು ಮಾತ್ರ ಸಿದ್ದರಾಮನಹುಂಡಿಗೆ ಹೋಗಿದ್ದರು.

ಸ್ವಗ್ರಾಮಕ್ಕೆ ಎರಡನೇ ಭೇಟಿ!
ಮುಖ್ಯಮಂತ್ರಿ ಆದ ಬಳಿಕ ಸಿದ್ದರಾಮಯ್ಯ ಗ್ರಾಮಕ್ಕೆ ಭೇಟಿ ನೀಡಿದ್ದು ಇದು ಎರಡನೇ ಬಾರಿ. ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನಾ ದಿನ ಗ್ರಾಮಕ್ಕೆ ಭೇಟಿ ನೀಡಿದ್ದರು. ಮುಖ್ಯಮಂತ್ರಿ ಆದ ಬಳಿಕ ಮೈಸೂರಿಗೆ ಅನೇಕ ಬಾರಿ ಬಂದಿದ್ದ­ರಾದರೂ ರಾಜಕೀಯ ಒತ್ತಡದಿಂದ ಗ್ರಾಮಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಲೋಕಸಭೆ ಚುನಾವಣೆ ವೇಳೆ ಮತ ಹಾಕಲು ಸಿದ್ದರಾಮನಹುಂಡಿಗೆ ತೆರಳಿದ್ದರು. ನಂತರ ಗ್ರಾಮಕ್ಕೆ ಹೋಗಿರಲಿಲ್ಲ.

Write A Comment