ಹಾಸನ: ಶ್ರವಣಬೆಳಗೊಳದಲ್ಲಿ ನಡೆಯುವ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ಮೆರವಣಿಗೆಯು ಉದ್ಘಾಟನೆಯ ಮುನ್ನಾದಿನವೇ ನಡೆಯಲಿದೆ.
ಸಮ್ಮೇಳನದ ಉದ್ಘಾಟನಾ ದಿನದ ಬದಲು ಅದರ ಹಿಂದಿನ ದಿನ (ಜ.31ರಂದು) ಸಂಜೆ ನಡೆಸಲು ಸ್ವಾಗತ ಸಮಿತಿ ನಿರ್ಧರಿಸಿದೆ.
ಉದ್ಘಾಟನೆ ದಿನವೇ ಅಧ್ಯಕ್ಷರ ಮೆರವಣಿಗೆ ಆಯೋಜಿಸಿದರೆ ಮಧ್ಯಾಹ್ನದವರೆಗೆ ಸಮಯ ವ್ಯರ್ಥವಾಗುತ್ತದೆ ಮತ್ತು ಎಲ್ಲ ಗೋಷ್ಠಿಗಳೂ ವಿಳಂಬವಾಗುತ್ತವೆ ಎಂಬ ಕಾರಣಕ್ಕೆ ಹಿಂದಿನ ದಿನವೇ ಸಂಜೆ ಅಧ್ಯಕ್ಷರ ಮೆರವಣಿಗೆ ನಡೆಸಲು ತೀರ್ಮಾನಿಸಿದೆ. ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಸ್ವಾಗತ ಸಮಿತಿ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು.
400 ಪುಸ್ತಕ ಮಳಿಗೆ: ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಾಗಿ 400ಕ್ಕೂ ಹೆಚ್ಚು ಪ್ರಕಾಶಕರಿಂದ ಬೇಡಿಕೆ ಬಂದಿವೆ. ಇನ್ನೂ ಕೆಲವು ಮನವಿಗಳನ್ನು ನಿರೀಕ್ಷಿಸಲಾಗಿದೆ. ಮೂರು ದಿನಗಳ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶ ಕೋರಿ 600ಕ್ಕೂ ಹೆಚ್ಚು ಕಲಾವಿದರು, ಸಂಘಟನೆಗಳವರು ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಕಲಾವಿದರನ್ನು ಆಯ್ಕೆ ಮಾಡಲಾಗುವುದು ಎಂದು ಸಾಂಸ್ಕೃತಿಕ ಸಮಿತಿ ತಿಳಿಸಿದೆ.
ವೇದಿಕೆ ಶಾಮಿಯಾನಕ್ಕೆ ರೂ.1.70 ಕೋಟಿ: ಸಮ್ಮೇಳನಕ್ಕಾಗಿ ಶ್ರವಣಬೆಳಗೊಳ ಮಠದ ಸಮೀಪದಲ್ಲಿ 24 ಎಕರೆ ವಿಶಾಲ ಜಾಗವನ್ನು ಸಮತಟ್ಟು ಮಾಡುವುದು, ಸಭಾಂಗಣಕ್ಕೆ ಶಾಮಿಯಾನ ಹಾಕುವುದು ಹಾಗೂ ವೇದಿಕೆ ನಿರ್ಮಾಣಕ್ಕೆ ರೂ.1.70 ಕೋಟಿ ವೆಚ್ಚ ಆಗಲಿದೆ. ಗುತ್ತಿಗೆದಾರರು ರೂ.2.28 ಕೋಟಿ ಕೇಳಿದ್ದರು. ಅವರೊಡನೆ ಮಾತುಕತೆ ನಡೆಸಿ ರೂ. 1.70 ಕೋಟಿಗೆ ಒಪ್ಪಿಸಲಾಗಿದೆ ಎಂದು ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಐದು ಭೋಜನಾಲಯಗಳು: ಸಾಹಿತ್ಯ ಸಮ್ಮೇಳನಕ್ಕೆ ಬರುವವರ ಭೋಜನ ಹಾಗೂ ಬರುವ ಅತಿಥಿಗಳಲ್ಲಿ ಅರ್ಧದಷ್ಟು ಜನರ ವಸತಿ ವ್ಯವಸ್ಥೆಯನ್ನು ಮಠದಲ್ಲಿ ಮಾಡಲು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಒಪ್ಪಿಕೊಂಡಿದ್ದಾರೆ. ಅದಕ್ಕೆ ಅಗತ್ಯವಾದ ಕೆಲವು ಸೌಲಭ್ಯಗಳನ್ನು ನೀಡಬೇಕು ಎಂದು ಜೈನ ಸಂಘದ ಅಧ್ಯಕ್ಷ ಜಿತೇಂದ್ರಕುಮಾರ್ ಕೋರಿದರು.
‘ಭೋಜನ ವ್ಯವಸ್ಥೆಗಾಗಿಯೇ ಮಠದಲ್ಲಿ ನಾಲ್ಕೈದು ಸಮಿತಿಗಳನ್ನು ಮಾಡಲಾಗಿದ್ದು, ಈಗಾಗಲೇ ಕೆಲವು ಸಭೆಗಳನ್ನು ನಡೆಸಿದ್ದೇವೆ. ಊಟ– ತಿಂಡಿಗಳ ಮೆನು ಸಹ ಸಿದ್ಧಪಡಿಸಿದ್ದೇವೆ. ಐದು ಕಡೆ ಅಡುಗೆ ಮನೆ ಮತ್ತು ಭೋಜನಾಲಯ ಮಾಡಲಾಗುತ್ತಿದ್ದು, ಅದರ ಒಂದರಲ್ಲಿ ಉತ್ತರ ಕರ್ನಾಟಕದ ರೊಟ್ಟಿ, ಜುನಕಾ, ಎಣ್ಣೆಗಾಯಿ, ಹಾಗೂ ಚಟ್ನಿಪುಡಿಗಳ ವ್ಯವಸ್ಥೆ ಮಾಡಲಾಗುವುದು.
ಬರುವ ಅತಿಥಿಗಳಿಗೆ ಬೆಳಿಗ್ಗೆ ತರಕಾರಿ ಉಪ್ಪಿಟ್ಟು, ಕೇಸರಿಬಾತ್, ಪೊಂಗಲ್, ಖಾರಾ ಬಾತ್, ಇಡ್ಲಿ, ಒಗ್ಗರಣೆ ಅವಲಕ್ಕಿ (ಯಾವುದಾದರೊಂದು ಅಥವಾ ಎರಡೂ), ಮಧ್ಯಾಹ್ನಕ್ಕೆ ಪೂರಿ ಸಾಗು, ಪುಳಿಯೋಗರೆ, ಬಿಸಿಬೇಳೆ ಬಾತ್, ಅನ್ನ ಸಾರು, ಮೊಸರನ್ನ, ಬೂಂದಿ, ಡ್ರೈ ಜಾಮೂನ್… ಹೀಗೆ ಪ್ರತಿ ಊಟ/ತಿಂಡಿಯ ಜತೆಗೂ ಒಂದು ಸ್ವೀಟ್ ಇರುವಂತೆ ನೋಡಿಕೊಳ್ಳಲಾಗಿದೆ. ಮೂರು ದಿನಗಳಲ್ಲಿ ಯಾವ ತಿಂಡಿಯೂ ಪುನರಾವರ್ತನೆ ಆಗದಂತೆ ನೀಡಲಾಗುವುದು. ಸಮಿತಿಯವರು ಯಾವುದೇ ಬದಲಾವಣೆ ಸೂಚಿಸಿದರೆ ಮಾಡಿಕೊಳ್ಳಲು ಸಿದ್ಧ’ ಎಂದರು.
ಹಾಸನದ ವಿಶೇಷವಾಗಿರುವ ರಾಗಿ ಮುದ್ದೆ ಹಾಗೂ ಅವರೆಕಾಳಿನ ಸಾರನ್ನೂ ಮಾಡಿಸಬೇಕು ಎಂದು ಕೆಲವರು ಸಲಹೆ ನೀಡಿದರು. ಸಮ್ಮೇಳನಕ್ಕೆ ಬೇಕಾದ ತರಕಾರಿಯನ್ನು ಉಚಿತವಾಗಿ ಕೊಡುವುದಾಗಿ ಸಭೆಯಲ್ಲಿದ್ದ ರೈತರು ತಿಳಿಸಿದರು.
ಸಹಾಯವಾಣಿ, ಮೊಬೈಲ್ ಆ್ಯಪ್: ಸಮ್ಮೇಳನಕ್ಕಾಗಿ ಮಾಹಿತಿ ತಂತ್ರಜ್ಞಾನ ಸಮಿತಿಯನ್ನೂ ರಚಿಸಲಾಗಿದ್ದು, ಈ ಸಮಿತಿ ಸಮ್ಮೇಳನದ ಸಮಗ್ರ ಮಾಹಿತಿ ನೀಡುವ ಅಂತರ್ಜಾಲ ತಾಣ ಆರಂಭಿಸಲಿದೆ.
ದಸರಾ ಮಾದರಿಯಲ್ಲಿ ಒಂದು ಮೊಬೈಲ್ ಆ್ಯಪ್ ಅನ್ನೂ ಬಿಡುಗಡೆ ಮಾಡಿ, ಮೊಬೈಲ್‌ನಲ್ಲೇ ಸಮಗ್ರ ಮಾಹಿತಿ ನೀಡುವ ವ್ಯವಸ್ಥೆಯೂ ಜಾರಿಯಾಗಲಿದೆ. ಸಮ್ಮೇಳನ ನಡೆಯುವ ಸ್ಥಳದಲ್ಲೇ ಒಂದು ಸಹಾಯವಾಣಿ ತೆರೆದು ಆ ಮೂಲಕವೂ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು. ಒಂದೆರಡು ದಿನಗಳಲ್ಲೇ ಅಂತರ್ಜಾಲ ತಾಣ ಹಾಗೂ ಟ್ವಿಟರ್ ಖಾತೆಯನ್ನೂ ತೆರೆಯಲಾಗುತ್ತದೆ.
ಸಾಹಿತ್ಯ ಸಮ್ಮೇಳನದ ಕ್ಷಣ ಕ್ಷಣದ ಮಾಹಿತಿ ನೀಡಲು ಈಗಾಗಲೇ ಫೇಸ್‌ಬುಕ್ ಪುಟ ತೆರೆಯಲಾಗಿದೆ. ಚೇತನಾ ತೀರ್ಥಹಳ್ಳಿ ಹಾಗೂ ಅರಕಲಗೂಡು ಜಯಕುಮಾರ್ ಇದನ್ನು ಅಪ್ಡೇಟ್ ಮಾಡುತ್ತಿದ್ದಾರೆ. ಈಗಾಗಲೇ 500ಕ್ಕೂ ಹೆಚ್ಚು ಮಂದಿ ಈ ಖಾತೆಯಿಂದ ಮಾಹಿತಿ ಪಡೆಯುತ್ತಿದ್ದಾರೆ. ಆಸಕ್ತರು ‘ಸಾಹಿತ್ಯ ಸಮ್ಮೇಳನ ವಿಶೇಷ’ ಎಂದು ಕನ್ನಡದಲ್ಲೇ ಟೈಪ್ ಮಾಡಿ ಈ ಖಾತೆಗೆ ಹೋಗಬಹುದು.
