ಕರ್ನಾಟಕ

ಕೆಲ್ಸಾ ಬೇಕಾ? ಮಿಸ್ ಕಾಲ್ ಕೊಡಿ!

Pinterest LinkedIn Tumblr

kpec12Employment

‘ಕೆಲಸ ಹುಡುಕಿ ಸುಸ್ತಾಗಿದೆಯೇ? ಹಾಗಿದ್ರೆ, ಅಲೆಯುವುದನ್ನು ಈ ಕೂಡಲೇ ನಿಲ್ಲಿಸಿ ನಮಗೊಂದು ಮಿಸ್‌ ಕಾಲ್‌ ಕೊಡಿ, ನಿಮಗೆ ಕೆಲಸವನ್ನು ನಾವು ಕೊಡಿಸುತ್ತೇವೆ’ ಎನ್ನುತ್ತಿದೆ ಬಾಬಾಜಾಬ್‌.ಕಾಮ್‌. 2007ರಲ್ಲಿ ಆರಂಭಗೊಂಡ ಈ ಸಂಸ್ಥೆ ಈವರೆಗೆ 25 ಲಕ್ಷಕ್ಕೂ ಅಧಿಕ ಜನರಿಗೆ ಕೆಲಸ ಕೊಡಿಸಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಉಚಿತವಾಗಿ ಕೆಲಸ ಕೊಡಿಸುವುದು ಈ ಸಂಸ್ಥೆಯ ಉದ್ದೇಶ.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ ಹೀಗೆ ಯಾವುದೇ ವಿಷಯದಲ್ಲಿ ಓದಿಕೊಂಡ ಅಭ್ಯರ್ಥಿಗಳು ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಕೆಲಸದ ಅಗತ್ಯವಿರುವ ಅಭ್ಯರ್ಥಿಗಳು 888 000 4444 ಹಾಟ್‌ಲೈನ್‌ಗೆ ಮಿಸ್‌ಕಾಲ್‌ ಕೊಟ್ಟರೆ ಅವರಿಗೆ ಮೂರರಿಂದ ಐದು ದಿನದೊಳಗೆ ಕೆಲಸ ದೊರಕಿಸಿಕೊಡುತ್ತದೆ. 18ರಿಂದ 60 ವರ್ಷ ವಯಸ್ಸಿನವರೆಲ್ಲರೂ ಈ ಸೇವೆಯನ್ನು ಪಡೆದುಕೊಳ್ಳಬಹುದು.

ಕೆಲಸ ಗಿಟ್ಟಿಸಿಕೊಳ್ಳುವುದು ಹೇಗೆ?
ಕೆಲಸದ ಅವಶ್ಯಕತೆ ಇರುವ ಅಭ್ಯರ್ಥಿಗಳು ಮೊದಲಿಗೆ ಬಾಬಾಜಾಬ್‌.ಕಾಮ್‌ನ ಹಾಟ್‌ಲೈನ್‌ಗೆ ಮಿಸ್‌ಕಾಲ್‌ ಕೊಡಬೇಕು. ಮಿಸ್‌ ಕಾಲ್‌ ಕೊಟ್ಟವರಿಗೆ ಆ ಕ್ಷಣವೇ ಅವರ ಕಡೆಯಿಂದ ಕರೆ ಬರುತ್ತದೆ. ಕರೆ ಮಾಡಿದವರು ನಿಮ್ಮ ವಿದ್ಯಾರ್ಹತೆ, ಊರು, ವಯಸ್ಸು, ವಿಳಾಸ, ಯಾವ ಬಗೆಯ ಕೆಲಸದ ಹುಡುಕಾಟದಲ್ಲಿದ್ದೀರಾ, ಸಂಬಳ ಎಷ್ಟು ನಿರೀಕ್ಷೆ ಮಾಡುತ್ತಿದ್ದೀರ ಎಂಬ ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ.

ಆನಂತರ ಬಾಬಾಜಾಬ್‌.ಕಾಮ್‌ನವರು ನೀವು ನೀಡಿದ ಮಾಹಿತಿಯನ್ನು ಅನುಸರಿಸಿ ನಿಮ್ಮದೊಂದು ಬಯೊಡೇಟಾ ಸಿದ್ಧಪಡಿಸಿ ಅವುಗಳನ್ನು ಕಂಪೆನಿಗಳಿಗೆ ಕಳುಹಿಸಿಕೊಡುತ್ತಾರೆ. ಈ ಪ್ರಕ್ರಿಯೆ ಮುಗಿದ ಎರಡು ಮೂರು ದಿನಗಳಲ್ಲಿ ನಿಮಗೆ ಕಂಪೆನಿಯವರಿಂದ ಕರೆ ಬರುತ್ತದೆ. ಸಂದರ್ಶನ ಎದುರಿಸಿ ಯಶಸ್ವಿಯಾದರೆ ಅಲ್ಲಿ ನಿಮಗೆ ಉದ್ಯೋಗ ಗ್ಯಾರಂಟಿ. ಮಧ್ಯವರ್ತಿಗಳಿಗೆ ಹಣ ನೀಡದೇ ನೀವು ನೇರವಾಗಿ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು.

ನಿಮ್ಮ ಏರಿಯಾದಲ್ಲೇ ಉದ್ಯೋಗ
ಫ್ಲಿಫ್‌ಕಾರ್ಟ್‌, ಮಿಂಟ್ರಾ, ಒಲಾ, ಟ್ಯಾಕ್ಸಿ ಫಾರ್‌ ಶ್ಯೂರ್‌, ಡಾಮಿನೋಸ್‌ ಪಿಜ್ಜಾ, ಬಿಗ್‌ಬಜಾರ್‌ ಹೀಗೆ 80 ಸಾವಿರಕ್ಕೂ ಅಧಿಕ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಾಬಾಜಾಬ್‌.ಕಾಮ್‌ ಆ ಕಂಪೆನಿಗಳಿಗೆ ಅಗತ್ಯವಿರುವ ಕೆಲಸಗಾರರನ್ನು ಒದಗಿಸುತ್ತಿದೆ.

‘ನಮ್ಮಲ್ಲಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳು ಯಾವ ಸ್ಥಳದಲ್ಲಿ ಕೆಲಸ ಮಾಡಲು ಇಚ್ಛಿಸುತ್ತಾರೆ ಎಂಬುದನ್ನು ಅರಿತು ಅದರಂತೆ ಅವರಿಗೆ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಉದಾಹರಣೆಗೆ, ಅಭ್ಯರ್ಥಿ ಬೆಂಗಳೂರಿನವರಾಗಿದ್ದರೆ, ಅವರ ವಿದ್ಯಾರ್ಹತೆಗೆ ತಕ್ಕಂತೆ ಅವರು ವಾಸವಿರುವ 8 ಕಿಲೋ ಮೀಟರ್‌ ವ್ಯಾಪ್ತಿಯೊಳಗೆ ಇರುವ ಕಂಪೆನಿಗಳಲ್ಲಿ ಉದ್ಯೋಗ ದೊರಕಿಸಿಕೊಡುತ್ತೇವೆ. ವಿದ್ಯಾರ್ಹತೆ ಇಲ್ಲದವರಿಗೂ ಕೆಲಸಗಳು ಸಾಕಷ್ಟಿವೆ. ಅಂಥವರೂ ನಮಗೆ ಮಿಸ್‌ಕಾಲ್‌ ಕೊಟ್ಟರೆ ನಾವು ಕೆಲಸ ಕೊಡಿಸುತ್ತೇವೆ’ ಎನ್ನುತ್ತಾರೆ ಬಾಬಾಜಾಬ್‌. ಕಾಮ್‌ನ ಮಾರಾಟ ವಿಭಾಗದ ಮುಖ್ಯಸ್ಥ ಅಂಜನ್‌ ಕುಮಾರ್‌.

ಮಹಿಳಾ ಅಭ್ಯರ್ಥಿಗಳಿಗೆ ಡಿಮ್ಯಾಂಡ್‌
ಉದ್ಯೋಗ ಮಾಡಲು ಬಯಸುವ ಹೆಣ್ಣು ಮಕ್ಕಳಿಗೆ ಇಂದು ಹಲವು ಕ್ಷೇತ್ರಗಳಲ್ಲಿ ಬೇಡಿಕೆ ಇದೆ. ವಿದ್ಯಾರ್ಹತೆ ಇಲ್ಲದವರು ಸಹ ಹೌಸ್‌ ಕೀಪಿಂಗ್‌ ಕೆಲಸ ಮಾಡಿ ಎಂಟ್ಹತ್ತು ಸಾವಿರ ದುಡಿಮೆ ಮಾಡಬಹುದು. ‘ಮಹಿಳಾ ಅಭ್ಯರ್ಥಿಗಳಿಗೆ ಕಂಪೆನಿ ಕಡೆಗಳಿಂದ ತುಂಬ ಡಿಮ್ಯಾಂಡ್‌ ಇದೆ. ಅದರಲ್ಲೂ ಮಹಿಳಾ ಕ್ಯಾಬ್‌ ಡ್ರೈವರ್‌ಗಳು ಬೇಕೆಂದು ಕೇಳುವ ಐಟಿ ಕಂಪೆನಿಗಳ ಸಂಖ್ಯೆ ಹೆಚ್ಚಿವೆ.

ನಮ್ಮ ಕಡೆಯಿಂದ ಉದ್ಯೋಗ ಪಡೆದ ಮಹಿಳಾ ಡ್ರೈವರ್‌ಗಳು ಈಗ ತಿಂಗಳಿಗೆ ಏನಿಲ್ಲವೆಂದರೂ ₨15ರಿಂದ 20 ಸಾವಿರದಷ್ಟು ಹಣ ಸಂಪಾದನೆ ಮಾಡುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರು ಡೊಮೆಸ್ಟಿಕ್‌ ಕಾಲ್‌ಸೆಂಟರ್‌ನಲ್ಲೂ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ’ ಎಂಬ ಮಾಹಿತಿ ನೀಡುತ್ತಾರೆ ಅಂಜನ್‌.

ಹೊಸದಾಗಿ ಎಂಜಿನಿಯರಿಂಗ್‌ ಪದವಿ ಪಡೆದ ಅಭ್ಯರ್ಥಿಗಳಿಗೂ ನೀವು ಕೆಲಸ ದೊರಕಿಸಿಕೊಡುತ್ತೀರಾ ಎಂಬ ಪ್ರಶ್ನೆಗೆ ಅಂಜನ್‌ ಉತ್ತರಿಸಿದ್ದು ಹೀಗೆ: ‘ವರ್ಷಕ್ಕೆ 80 ಸಾವಿರ ಎಂಜಿನಿಯರಿಂಗ್‌ ಪದವೀಧರರು ತಯಾರಾಗುತ್ತಿದ್ದಾರೆ. ಅವರೆಲ್ಲರಿಗೂ ಒಳ್ಳೆಯ ಕಂಪೆನಿಗಳಲ್ಲಿ ದೊಡ್ಡ ಮೊತ್ತದ ಸಂಬಳ ದೊರಕುವುದು ತುಸು ಕಷ್ಟವೇ ಸರಿ. ಓದಿಗೆ ತಕ್ಕ ಕೆಲಸವೇ ಬೇಕು ಎಂದು ಕುಳಿತರೆ ಅವರಿಗೆ ಕೆಲಸದ ಅನುಭವವೇ ಆಗುವುದಿಲ್ಲ.

ಹಾಗಾಗಿ, ಒಳ್ಳೆ ಕೆಲಸ ಸಿಗುವವರೆಗೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಒಳ್ಳೆ ಕೌಶಲ ಪಡೆಯುವತ್ತ ಗಮನ ಹರಿಸಬೇಕು. ಆನಂತರವಷ್ಟೇ ಅವರ ಕೌಶಲಕ್ಕೆ ತಕ್ಕ ಕೆಲಸ ಕೊಡಿಸುವುದು ಸಾಧ್ಯ’. ಅಂದಹಾಗೆ, ಬಾಬಾಜಾಬ್‌.ಕಾಮ್‌ನಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಹೆಚ್ಚಾಗಿ ಬಿಪಿಒ, ಸೇಲ್ಸ್‌ ಅಂಡ್‌ ಮಾರ್ಕೆಟಿಂಗ್‌, ಡೆಲಿವರಿ ಬಾಯ್ಸ್‌, ಡ್ರೈವರ್‌, ರೀಟೇಲ್‌ ಸೆಕ್ಟರ್‌ನಲ್ಲಿ ಉದ್ಯೋಗವಕಾಶ ದೊರಕಿಸಿಕೊಡಲಾಗುತ್ತದೆ.

ಕಡಿಮೆ ಓದಿದವರಿಗೆ ಬಾಬಾಜಾಬ್.ಕಾಮ್‌ ಒಳ್ಳೆ ಸಂಬಳದ ಕೆಲಸವನ್ನೇನೋ ದೊರಕಿಸಿಕೊಡುತ್ತಿದೆ. ಆದರೆ, ಹೆಚ್ಚು ಓದಿದವರಿಗೆ ಇಲ್ಲಿ ಸೂಕ್ತ ಉದ್ಯೋಗ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಕೌಶಲ ಪಡೆದುಕೊಂಡ ಅಭ್ಯರ್ಥಿಗಳಿಗೆ ಮಾತ್ರ ಒಳ್ಳೆ ಕೆಲಸ ಕೊಡಿಸುವ ಭರವಸೆಯನ್ನಂತೂ ಅದು ಭಿತ್ತುತ್ತಿದೆ.

ಕಂಪೆನಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಬಾಬಾಜಾಬ್‌.ಕಾಮ್‌ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಓದಿಗೆ ತಕ್ಕಂತಹ ಉತ್ತಮ ಉದ್ಯೋಗವಕಾಶವನ್ನು ದೊರಕಿಸಿಕೊಡುವ ಕನಸು ಹೊಸೆಯುತ್ತಿದೆ.

ನಯಾಪೈಸೆ ಖರ್ಚಿಲ್ಲ
ಮೈಕ್ರೋಸಾಫ್ಟ್‌ ಕಂಪೆನಿ ಉದ್ಯೋಗಿಯಾಗಿದ್ದ ಅಮೆರಿಕದ ಸಿಯಾನ್‌ ಬ್ಲಾಗ್‌ಸ್ವೆಟ್‌ ಅವರಿಗೆ ಒಮ್ಮೆ ಮನೆಗೆಲಸದವರು ಸಿಗದೆ ತುಂಬ ತೊಂದರೆ ಅನುಭವಿಸಿದರು. ಮನೆ ಕೆಲಸದವರನ್ನು ಹುಡುಕಲು ಅವರು ದಲ್ಲಾಳಿಗೆ ಸಾಕಷ್ಟು ಹಣ ನೀಡಬೇಕಾಯ್ತು. ಆಗ ಅವರಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೇ ಕೆಲಸಗಾರರು ಸಿಗುವಂತೆ ಮಾಡಬೇಕು ಎಂಬ ಯೋಚನೆ ಬಂದಾಗ ಹುಟ್ಟಿಕೊಂಡಿದ್ದೇ ಬಾಬಾಜಾಬ್‌.ಕಾಮ್‌. ಬಾಬ್‌ಜಾಬ್‌ ಮುಖಾಂತರ ಅಭ್ಯರ್ಥಿಗಳು ನಯಾಪೈಸೆ ಖರ್ಚು ಮಾಡದೇ ಉದ್ಯೋಗ ದೊರಕಿಸಿಕೊಳ್ಳಬಹುದು. ಮಾಹಿತಿಗೆ: www.babajob.com

1 Comment

Write A Comment