ಕರ್ನಾಟಕ

ಬೆಂಗಳೂರು: ಟೆಕ್ಕಿ ಗುಂಡಿಗೆ ಬೆದರಿದ ದರೋಡೆಕೋರರು

Pinterest LinkedIn Tumblr

STOCK-FOOTAGE-MAN-SHOOTING-WITH-PISTOL

ಬೆಂಗಳೂರು: ದೊಮ್ಮಲೂರು ಸಮೀಪದ ಅಮರ­ಜ್ಯೋತಿ ಲೇಔಟ್‌ನಲ್ಲಿ ಶುಕ್ರವಾರ ರಾತ್ರಿ ಸಾಫ್ಟ್‌ವೇರ್‌ ಉದ್ಯೋಗಿ ರಾಜೀವ್‌ ರಂಜನ್‌ ಎಂಬುವರು ರಿವಾಲ್ವಾರ್‌ನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ.

‘ನಾಲ್ವರು ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸಿದರು. ಹೀಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದೆ. ಆದರೂ ಅವರು ಸ್ನೇಹಿತನ ಚಿನ್ನದ ಸರ ಹಾಗೂ ಕೈಗಡಿಯಾರ ದೋಚಿ ಪರಾರಿಯಾದರು’ ಎಂದು ರಾಜೀವ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ. ಬಿಟಿಎಂ ನಿವಾಸಿಗಳಾದ ರಾಜೀವ್‌, ಅನೀಶ್‌ ಕುಮಾರ್ ಮತ್ತು ಸಂದೀಪ್ ಅವರು ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಉದ್ಯೋಗಿಗಳಾಗಿದ್ದಾರೆ. ಮೋಜುಕೂಟಕ್ಕೆ ತೆರಳಿದ್ದ ಅವರು, ರಾತ್ರಿ 1.30ರ ಸುಮಾರಿಗೆ ದೊಮ್ಮಲೂರು ಸಮೀಪದ ಅಮರಜ್ಯೋತಿ ಲೇಔಟ್‌ ಮಾರ್ಗವಾಗಿ ಬರುತ್ತಿದ್ದರು.

ಈ ವೇಳೆ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಮಾರಕಾಸ್ತ್ರ­ಗಳಿಂದ ಬೆದರಿಸಿ ದರೋಡೆಗೆ ಯತ್ನಿಸಿದರು. ಆಗ ಅವರನ್ನು ಬೆದರಿಸಲು ರಾಜೀವ್ ಗುಂಡು ಹಾರಿಸಿದರು ಎನ್ನಲಾಗಿದೆ.

ಇದೇ ವೇಳೆ ಪಕ್ಕದ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ತೆರಳಿದ್ದಾರೆ. ನಂತರ ಮೂವರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಒಬ್ಬರು ದರೋಡೆ ಕತೆ ಹೇಳಿದರೆ, ಮತ್ತೊಬ್ಬರು ‘ಆಕಸ್ಮಿಕವಾಗಿ ಗುಂಡು ಹಾರಿತು’ ಎನ್ನುತ್ತಾರೆ. ಹೀಗಾಗಿ ದರೋಡೆ ನಡೆದಿರುವ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಕುಡಿದ ಅಮಲಿನಲ್ಲಿದ್ದ ಸ್ನೇಹಿತರ ನಡುವೆ ಜಗಳ ನಡೆದಿದೆ. ಆಗ ಅವರನ್ನು ಬೆದರಿಸುವ ಉದ್ದೇಶದಿಂದ ರಂಜನ್, ಗುಂಡು ಹಾರಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಗಾಬರಿಗೊಂಡ ಅವರು, ದರೋಡೆ ಕತೆ ಹೆಣೆದಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

‘ಸಮೀಪದ ಜಂಕ್ಷನ್‌ನಲ್ಲಿರುವ ಸಿ.ಸಿ.ಕ್ಯಾಮೆರಾ ಹಾಗೂ ಸುತ್ತಮುತ್ತಲ ಕಟ್ಟಡಗಳಲ್ಲಿರುವ ಕ್ಯಾಮೆರಾಗಳನ್ನು ಪರಿಶೀಲಿಸಿ ವಾಸ್ತವ ಸಂಗತಿ ತಿಳಿಯಲು ಪ್ರಯತ್ನಿಸಲಾಗುತ್ತಿದೆ. ಒಂದು ವೇಳೆ ರಂಜಿತ್ ಸುಳ್ಳು ದೂರು ಕೊಟ್ಟಿದ್ದರೆ, ಅವರ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು. ಅವರ ಬಳಿ ಇದ್ದ ರಿವಾಲ್ವಾರ್‌ಗೆ ಪರವಾನಗಿ ಇತ್ತು’ ಎಂದು ಮಾಹಿತಿ ನೀಡಿದರು.

Write A Comment