ಕರ್ನಾಟಕ

ಕಾಂಗ್ರೆಸ್ ಪಕ್ಷದ 130ನೆ ಸಂಸ್ಥಾಪನಾ ದಿನಾಚರಣೆ: ಸದಸ್ಯತ್ವ ಅಭಿಯಾನದಲ್ಲಿ ವಿಫಲರಾದವರ ವಿರುದ್ಧ ಕ್ರಮ: ಪರಮೇಶ್ವರ್ ಎಚ್ಚರಿಕೆ

Pinterest LinkedIn Tumblr

parmesh

ಬೆಂಗಳೂರು, ಡಿ. 28 ಕಾಂಗ್ರೆಸ್ ಪಕ್ಷ ಆರಂಭಿಸಿರುವ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳದ ನಿಗದಿತ ಪ್ರಮಾಣದಲ್ಲಿ ಸದಸ್ಯತ್ವ ಮಾಡಿಸಲು ವಿಫಲರಾಗುವ ಸಚಿವರು, ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ 130ನೆ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷ ನೀಡಿರುವ ಗುರಿಯನ್ನು ತಲುಪಲು ಎಲ್ಲರೂ ಶ್ರಮಿಸಬೇಕು. ಹೆಚ್ಚು ಹೆಚ್ಚು ಸದಸ್ಯತ್ವ ಮಾಡಿಸಲು ಮುಂದಾಗಬೇಕು. ತಮ್ಮ ಕಾರ್ಯ ನಿರ್ವಹಣೆಯಲ್ಲಿ ವಿಫಲರಾದವರ ಬಗ್ಗೆ ದೂರುಗಳು ಬಂದರೆ ಮರು ದಿನವೇ ಕ್ರಮಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದರು.

ಸದಸ್ಯತ್ವ ಅಭಿಯಾನ ಪ್ರಾರಂಭವಾಗಿ ಮೂರು ತಿಂಗಳು ಪೂರ್ಣಗೊಂಡಿದೆ. ಆದರೆ, ಕೆಲ ಸಚಿವರು, ಶಾಸಕರು, ನಿಗಮ ಮಂಡಳಿಗಳ ಮುಖ್ಯಸ್ಥರು ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಲು ಮೀನಾಮೇಷ ಎಣಿಸುತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಎಚ್ಚರಿಸಿದರು.

ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ಗಾಂಧಿ ಅವರು ಸದಸ್ಯತ್ವ ಅಭಿಯಾನವನ್ನು ಪರಿಶೀಲಿಸಿ ಇನ್ನು 2 ತಿಂಗಳು ಕಾಲಾವಕಾಶ ನೀಡಿದ್ದಾರೆ. ಹೀಗಾಗಿ ಪ್ರತಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಹಕಾರದಿಂದ ಸದಸ್ಯತ್ವ ಅಭಿಯಾನದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಾಗುವುದು ಎಂದು ತಿಳಿಸಿದ ಅವರು, ಇತರೆ ಪಕ್ಷಗಳಿಗಿಂತ ಹೆಚ್ಚು ಸದಸ್ಯತ್ವ ನೋದಣಿಯಾಗಬೇಕು ಎಂದು ಇದಕ್ಕೆ ಪಕ್ಷದ ಎಲ್ಲ ಕಾರ್ಯಕರ್ತರು ರಾಯಬಾರಿಗಳಂತೆ ಕಾರ್ಯ ನಿರ್ವಹಿಸಬೇಕು. ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಆರಂಭಿಸಿರುವ ಅಭಿಯಾನಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಹೋರಾಟಕ್ಕೆ ಹಾಗೂ ಅಭಿಯಾನಕ್ಕೆ ಮುಂದಾಗಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಇದೇ ವೇಳೆ ಕರೆ ನೀಡಿದರು.

ಅಲ್ಲದೆ, ಸೇವಾದಳದವರೂ ಹೆಚ್ಚು ಹೆಚ್ಚು ಸದಸ್ಯತ್ವ ಆರಂಭಿಸಬೇಕು. ಜತೆಗೆ ಶಾಸಕರು, ಮಂತ್ರಿಗಳಾಗ ಬಯಸುವ ಪಕ್ಷದ ಕಾರ್ಯಕರ್ತರಿಗೆ 1 ವಾರಗಳ ತರಬೇತಿ ನೀಡಲು ಪಕ್ಷ ಮುಂದಾಗಲಿದೆ ಎಂದು ಅವರು ತಿಳಿಸಿದರು.

Write A Comment